Advertisement

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

01:29 AM May 02, 2024 | Team Udayavani |

ಹುಬ್ಬಳ್ಳಿ: ಕಾಲೇಜಿಗೆ ಹೋಗಿದ್ದ ನೇಹಾ ಹಿರೇಮಠಳನ್ನು ಕಾಲೇಜು ಆವರಣದಲ್ಲೇ ಹಾಡ ಹಗಲೇ ಹತ್ಯೆಗೈಯಲಾಗಿದೆ. ಇದಕ್ಕೆ ಯಾರು ಹೊಣೆ? ಯುವತಿಯರು ಮತ್ತು ಮಹಿಳೆಯರಿಗೆ ಕರ್ನಾಟಕ ದಲ್ಲಿ ಸುರಕ್ಷೆ ಇಲ್ಲವಾಗಿದೆ. ಅವರು ಕಾಲೇಜುಗಳಿಗೆ ಮುಕ್ತವಾಗಿ ಹೋಗದ ಸ್ಥಿತಿ ಇದೆ. ಸುರಕ್ಷೆ ನೀಡಲು ನಿಮಗೆ ಸಾಧ್ಯವಾಗದಿದ್ದರೆ ನಮಗೆ ಬಿಟ್ಟು ಬಿಡಿ. ನಾವು ಎಲ್ಲರಿಗೂ ಸುರಕ್ಷೆ ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

Advertisement

ಬುಧವಾರ ಸಂಜೆ ಇಲ್ಲಿನ ನೆಹರೂ ಮೈದಾನದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರಕಾರ ಕರ್ನಾಟಕವನ್ನು ಅಪಾಯದಲ್ಲಿರಿಸುವ ಕಾರ್ಯಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದರೂ ಅದು ಅಡುಗೆ ಸಿಲಿಂಡರ್‌ ಸ್ಫೋಟವೆಂದು ಹೇಳಿಕೆ ನೀಡಲಾಗಿತ್ತು. ನಾವು ಎನ್‌ಐಎ ತನಿಖೆ ಕೈಗೊಂಡಾಗ ಅದು ಭಯೋತ್ಪಾದನೆ ಕೃತ್ಯ ಎಂಬುದು ಬಯಲಾಯಿತು. ವಿಧಾನಸೌಧದ ಆವರಣದಲ್ಲೇ ಪಾಕಿಸ್ಥಾನ ಪರ ಘೋಷಣೆ ಕೂಗಿದರೂ, ನನಗೆ ಅದು ಕೇಳಿಲ್ಲ ಎಂದು ಸಿಎಂ ಹೇಳಿದ್ದರು ಎಂದರು.

ಸಿಎಂ-ಡಿಸಿಎಂ ಕಿತ್ತಾಟದಿಂದ ಬರಪರಿಹಾರ ವಿಳಂಬ
ಕರ್ನಾಟಕದಲ್ಲಿ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ನಡುವಿನ ಮುಸುಕಿನ ಗುದ್ದಾಟ, ಪರಸ್ಪರ ಕಾಲೆಳೆಯುವ ಯತ್ನ ಸಾಗಿದೆ. ಇದರಿಂದಾಗಿ ಬರ ಪರಿಹಾರದ ನೆರವಿಗಾಗಿ, ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ರಾಜ್ಯ ಸರಕಾರ ವಿಳಂಬ ಮಾಡಿದೆ. ನೆರವು ಬಿಡುಗಡೆ ಮಾಡುವುದರೊಳಗೆ ಲೋಕಸಭಾ ಚುನಾವಣ ನೀತಿ ಸಂಹಿತೆ ಜಾರಿಗೊಂಡಿತ್ತು. ಈ ಸತ್ಯವನ್ನು ಮರೆಮಾಚಿ ಸಿಎಂ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್‌ ನಾಯಕರು “ಕೇಂದ್ರ ನೆರವು ನೀಡಿಲ್ಲ’ ಎಂದು ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿದ್ದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸಮರ್ಪಕ ಮಾಹಿತಿ ಇಲ್ಲದೆ, ವಿಳಂಬ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮೂರನೇ ಬಾರಿಗೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಬರ ಪರಿಹಾರ ನೆರವು ಬಿಡುಗಡೆ ಮಾಡುವುದರೊಳಗೆ ನೀತಿಸಂಹಿತೆ ಜಾರಿಗೊಂಡಿತ್ತು. ರಾಜ್ಯ ಸರಕಾರ ತನ್ನಿಂದಾದ ವಿಳಂಬದ ತಪ್ಪು ಮುಚ್ಚಿಕೊಳ್ಳಲು, ಸಿಎಂ-ಡಿಸಿಎಂ ನಡುವಿನ ಶೀತಲ ಸಮರ ಮರೆಮಾಚಿಸಲು ಕೇಂದ್ರದ ವಿರುದ್ಧ ಆರೋಪಕ್ಕೆ ಮುಂದಾಗಿದ್ದಾರೆ. ಬರ ಪರಿಹಾರ ನೆರವು ನೀಡಿಕೆಯಲ್ಲಿ ಕೇಂದ್ರದಿಂದ ಯಾವುದೇ ಲೋಪ ಆಗಿಲ್ಲ. ಬರ ಪರಿಹಾರ ವಿಚಾರದಲ್ಲಿ ಸಿಎಂ-ಡಿಸಿಎಂ ಹಾಗೂ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ ಎಂದರು.

ಕೇಂದ್ರದಿಂದ ಬರುವ ಅನುದಾನ ವಿಚಾರದಲ್ಲೂ ಕಾಂಗ್ರೆಸ್‌ ನಾಯಕರು ಜನತೆಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಾಸ್ತವವೆಂದರೆ ಯುಪಿಎ ಸರಕಾರ ಆಡಳಿತದ 2004-2014ರ ವರೆಗೆ ರಾಜ್ಯಕ್ಕೆ ಒಟ್ಟು 1.42 ಲಕ್ಷ ಕೋಟಿ ರೂ. ಅನುದಾನ ಬಂದಿದ್ದರೆ, ಪ್ರಧಾನಿ ಮೋದಿ 10 ವರ್ಷಗಳ ಆಡಳಿತಾವಧಿಯಲ್ಲಿ ಕರ್ನಾಟಕ್ಕೆ ಬಂದ ಅನುದಾನ 4.98 ಲಕ್ಷ ಕೋಟಿ ರೂ.ಗಳದ್ದಾಗಿದೆ. ರಾಜ್ಯದಲ್ಲಿ ಈ ಹಿಂದೆ 25 ರಾಷ್ಟ್ರೀಯ ಹೆದ್ದಾರಿಗಳಿದ್ದರೆ ಈಗ 47 ರಾಷ್ಟ್ರೀಯ ಹೆದ್ದಾರಿಗಳಿವೆ. ಸುಮಾರು 8 ಸಾವಿರ ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು ಐದು ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ. ಉತ್ತರ ಕರ್ನಾಟಕದದಲ್ಲಿ ನೀರಾವರಿ ಯೋಜನೆಗಳಾದ ಭದ್ರಾ, ಕೃಷ್ಣಾ ಮೇಲ್ದಂಡೆ ಯೋಜನೆ, ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಕೇಂದ್ರ ತನ್ನದೇ ಕ್ರಮ ಕೈಗೊಂಡಿದೆ ಎಂದರು.

Advertisement

ಪ್ರಜ್ವಲ್‌ ಪ್ರಕರಣ ಭಯಂಕರ ಅಪರಾಧ, ಕಠಿನ ಶಿಕ್ಷೆಯಾಗಲಿ
ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣವನ್ನು ಪ್ರಸ್ತಾವಿಸಿದ ಶಾ, “ಮಹಿಳೆಯರ ಮೇಲೆ ಅತ್ಯಾಚಾರ ಮಾಡುವವರು, ಅವರ ಗೌರವಕ್ಕೆ ಧಕ್ಕೆ ತರುವವರನ್ನು ಬಿಜೆಪಿ ಎಂದೂ ಸಹಿಸಿಕೊಳ್ಳುವುದಿಲ್ಲ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅತ್ಯಂತ ಕಠಿನ ಶಿಕ್ಷೆ ಆಗಲೇಬೇಕು’ ಎಂದು ಹೇಳಿದರು. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಕೂಡಲೇ ಕ್ರಮ ಕೈಗೊಳ್ಳದೆ ಆರೋಪಿ ದೇಶದಿಂದ ಹೊರಹೋಗುವುದಕ್ಕೆ ಅವಕಾಶ ನೀಡಿದ್ದು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next