ಬೆಂಗಳೂರು: “ಫೈಲ್ಯೂರ್‌ಗೂ ಒಂದು ಥ್ಯಾಂಕ್ಸ್ ಹೇಳ್‌ಬೇಕು. ಯಾಕಂದ್ರೆ ನಾನು ಪಿಯುಸಿಯಲ್ಲಿ ನಾಲ್ಕು ಬಾರಿ ಫೇಲ್ ಆಗಿದ್ದರಿಂದಲೇ ಪದವಿಯಲ್ಲಿ ನಾಲ್ಕು ಚಿನ್ನದ ಪದಕ ಪಡೆಯಲು ಸಾಧ್ಯವಾಯ್ತು’. ಇದು, ಬೆಂವಿವಿ ಘಟಿಕೋತ್ಸವದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಆಚಾರ್ಯ ಪದವಿ ಕಾಲೇಜಿನ ವಿದ್ಯಾರ್ಥಿ ಎನ್.ಎಲ್.ಧನುಷ್ ಅವರ ಮನದ ಮಾತು.
ಹಾಸನ ಜಿಲ್ಲೆಯ ದೊಡ್ಡನಾಗರ ನಮ್ಮ ಊರು, 10ನೇ ತರಗತಿವರೆಗೂ ಸಕಲೇಶಪುರದಲ್ಲಿ ಓದಿ, ಪಿಯು ಸೈನ್ಸ್ ಹಾಸನದಲ್ಲಿ ಪೂರೈಸಿದೆ. ಪ್ರಥಮ ಪಿಯುಸಿಯನ್ನು ಒಮ್ಮೆಗೆ ಪಾಸ್ ಮಾಡಿದೆ. ಆದರೆ, ದ್ವಿತೀಯ ಪಿಯುಸಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಹೊರತುಪಡಿಸಿ ನಾಲ್ಕು ವಿಷಯದಲ್ಲೂ ಫೇಲ್ ಆಗಿದ್ದೆ. ಪಾಸ್ ಮಾಡಲು ನಾಲ್ಕು ಬಾರಿ ಪರೀಕ್ಷೆ ಬರೆಯಬೇಕಾಯ್ತು. ಅಂತೂ 2014ರಲ್ಲಿ (ಶೇ.52) ಪಾಸಾದೆ.
ಗಣಿತದಲ್ಲಿ ಶೂನ್ಯ ಬಂದಿದ್ದೂ ಇದೆ. ಅನೇಕರಿಂದ ನಿಂದನೆಗೆ ಒಳಗಾಗಿದ್ದೂ ಇದೆ. ಅದನೆಲ್ಲ ಎದುರಿಸುವ ಆತ್ಮಸ್ಥೈರ್ಯ ನನ್ನಲ್ಲಿ ಮನೆಯವರು ಮತ್ತು ಪ್ರಾಧ್ಯಾಪಕರು ತುಂಬಿದ್ದರಿಂದಲೇ ಈಗ ಜರ್ಮನಿಯಲ್ಲಿ ಅಟೊಮೋಟಿವ್ ಸಾಫ್ಟ್ವೇರ್ ಎಂಜಿನಿಯರಿಂಗ್‌ನಲ್ಲಿ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗಿದೆ ಎಂದರು.
ಆಚಾರ್ಯ ಕಾಲೇಜಲ್ಲಿ ಬಿಸಿಎ ಕೋರ್ಸ್‌ಗೆ ಸೇರಿದೆ. ಶ್ರಮ ಪಟ್ಟು ಅಧ್ಯಯನ ಮಾಡಿದೆ. ಹೀಗಾಗಿ ಶೇ.91ರಷ್ಟು ಅಂಕ ಬಂತು. ರ್‍ಯಾಂಕ್ ಬರುತ್ತದೆ ಎಂದು ಕೊಂಡಿರಲಿಲ್ಲ. ಮುಂದಿನ ವ್ಯಾಸಂಗ ಕೃಷಿಯಲ್ಲಿ ಮಾಡಲಿದ್ದೇನೆ ಎಂದು ಖುಷಿ ಹಂಚಿಕೊಂಡರು.
ಸಿಎ ಆಗಬೇಕೆಂದಿದ್ದೇನೆ: ವಿವಿಎಸ್ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಓದಿದ್ದು, ದಿನಕ್ಕೆ ನಾಲ್ಕು ಗಂಟೆ ಅಭ್ಯಾಸ ಮಾಡುತ್ತಿದ್ದೆ. 9 ನಗದು ಬಹುಮಾನ ಬರುತ್ತೇ ಅಂತ ಅಂದುಕೊಂಡಿರಲಿಲ್ಲ. ಬಹಳ ಖುಷಿಕೊಟ್ಟಿದೆ. ಸಿಎ ತರಬೇತಿ ಪಡೆಯುತ್ತಿದ್ದೇನೆ. ಇದೇ ವೃತ್ತಿಯಲ್ಲಿ ಮುಂದುವರಿಯಲಿದ್ದೇನೆ ಎಂದು ವಿದ್ಯಾರ್ಥಿನಿ ಸಾಯಿಜ್ಯೋತಿ ಸನ್ಮತಿ ಕೆ.ವೈ ಅನುಭವ ಹಂಚಿಕೊಂಡರು.
ಬೆಂವಿವಿಯಿಂದ ವಿಳಂಬ: ಪಿಎಚ್.ಡಿ ಮಾಡಬೇಕು ಎಂದು ಛಲಕ್ಕೆ ಬಿದ್ದು, ಅಧ್ಯಯನ ಮಾಡಿದೆ. ಅಂಧತ್ವ ಇದಕ್ಕೆ ತೊಡಕಾಗಲಿಲ್ಲ. ಕುವೆಂಪು ಅವರ ಕಾವ್ಯದ ಆಡಿಯೋ ಕೇಳಿಸಿಕೊಂಡು, ಬೇರೆಯವರ ಮೂಲಕ ಬರೆಸುತ್ತಿದ್ದೆ. ಬ್ರೈಲ್ ಲಿಪಿಯಲ್ಲಿ ಓದಿ, ಅದನ್ನು ಸಾಮಾನ್ಯ ಲಿಪಿಗೆ ವರ್ಗಾಯಿಸುತ್ತಿದ್ದೆ.
ಡಾ.ಸಿದ್ದಲಿಂಗಯ್ಯ ಅವರ ಮಾರ್ಗದರ್ಶನ ಮಾಡಿದರು. “ಕುವೆಂಪು ಕಾವ್ಯಗಳಲ್ಲಿ ಅಂತರ್‌ದೃಷ್ಟಿ’ ಎಂಬ ವಿಷಯದ ಮೇಲೆ ಪ್ರೌಢಪ್ರಬಂಧ ಮಂಡಿಸಿದೆ. ಪಿಎಚ್‌ಡಿ ಪೂರೈಸಿರುವ ತೃಪ್ತಿ ಇದೆ ಎಂದು ಕಲಬುರಗಿ ಜಿಲ್ಲೆಯ ಚುಂಚೋಳಿಯ ಸಾಲೇಬೀರನ ಹಳ್ಳಿಯ ಅಂಧ ಅಭ್ಯರ್ಥಿ ನಾಗಶೆಟ್ಟಿಯವರು ಹೇಳಿದರು.