ರಾಯಗಢ (ಮಹಾರಾಷ್ಟ್ರ): ಜಿಲ್ಲೆಯಲ್ಲಿ ಶನಿವಾರ ನಸುಕಿನ ವೇಳೆ ಬಸ್ ಒಂದು ಕಂದಕಕ್ಕೆ ಬಿದ್ದ ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದು ಮತ್ತು 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪುಣೆ-ರಾಯಗಢ ಗಡಿಯಲ್ಲಿ ಬೆಳಗಿನ ಜಾವಾ 4:30ಕ್ಕೆ ಬಸ್ ಪುಣೆಯ ಪಿಂಪಲ್ ಗುರವ್‌ನಿಂದ ಗೋರೆಗಾಂವ್‌ಗೆ ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ 41 ಮಂದಿ ಪ್ರಯಾಣಿಕರಿದ್ದರು.ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಮೃತರು ಸಾಂಪ್ರದಾಯಿಕ ಸಂಗೀತ ತಂಡದ ಸದಸ್ಯರಾಗಿದ್ದು ಆ ಪೈಕಿ ಐವರು ಅಪ್ರಾಪ್ತ ವಯಸ್ಕರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಬಸ್ ಅಪಘಾತದಲ್ಲಿ ಜೀವಹಾನಿ ತೀವ್ರ ದುಃಖವನ್ನುಂಟುಮಾಡಿದೆ ದುಃಖಿತ ಕುಟುಂಬಗಳಿಗೆ ಸಾಂತ್ವನ ಸಿಗಲಿ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಪಘಾತವನ್ನು “ದುರದೃಷ್ಟಕರ” ಎಂದು ಬಣ್ಣಿಸಿ ಸ್ಥಳೀಯ ಆಡಳಿತವು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ಸಂಬಂಧ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಮಾತನಾಡಿದ್ದೇನೆ. ಸ್ಥಳೀಯ ಆಡಳಿತವು ಪರಿಹಾರ ಕಾರ್ಯದಲ್ಲಿ ತೊಡಗಿದೆ. ನಾನು ಮೃತರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ,” ಎಂದು ಟ್ವೀಟ್ ಮಾಡಿದ್ದಾರೆ.