ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ದಿನವೂ ಗುಡುಗು, ಸಿಡಿಲು, ಬಿರುಗಾಳಿಯಿಂದ ಕೂಡಿದ ಆಲಿಕಲ್ಲು ಸಹಿತ ಮಳೆಯಾಗುತ್ತಿರುವುದರಿಂದ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆಗಳು ನೆಲಕಚ್ಚಿ, ಅಪಾರ ಹಾನಿಯನ್ನುಂಟು ಮಾಡಿದೆ.
ತಾಲೂಕಿನಾದ್ಯಂತ 20ಕ್ಕೂ ಹೆಚ್ಚು ಮನೆಗಳು ಭಾಗಶಃ ಬಿದ್ದಿದ್ದು, ಅಕಾಲಿಕ ಮಳೆ ಅನೇಕ ಆವಾಂತರಗಳನ್ನೇ ಸೃಷ್ಟಿಸಿ ಜನರಲ್ಲಿ ಭೀತಿಯುಂಟು ಮಾಡುತ್ತಿದೆ. ತಾಲೂಕಿನಲ್ಲಿ ಅಂದಾಜು 7 ಸಾವಿರ ಹೆಕ್ಟೇರ್ ನೀರಾವರಿ ಕ್ಷೇತ್ರವಿದ್ದು, ಮುಖ್ಯವಾಗಿ ಹೂವು, ಹಣ್ಣು, ತರಕಾರಿ, ತೆಂಗು, ಮಾವು, ಬಾಳೆ, ಕಬ್ಬು, ಪಪ್ಪಾಯಿ ಬೆಳೆಯನ್ನು ಬೆಳೆಯಲಾಗಿದೆ.
ಬಿರುಸಾದ ಗಾಳಿಯೊಂದಿಗೆ ಆಲಿಕಲ್ಲು ಸಹಿತ ಮಳೆಗೆ ತೋಟಗಾರಿಕಾ ಬೆಳೆಗಳು ನಲೆಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರ ಝಂಗಾ ಬಲವೇ ಉಡುಗಿದಂತಾಗಿದೆ. ಪಟ್ಟಣದ ಪ್ರಗತಿಪರ ರೈತ ಚನ್ನಪ್ಪ ಜಗಲಿ ಅವರ ಮುನಿಯನ ತಾಂಡಾ ಬಳಿಯ ತೋಟದಲ್ಲಿ ನೂರಾರು ತೆಂಗು, ಸಾಗವಾನಿ ಇತರೇ ಮರಗಳು ಧರೆಗುರುಳಿವೆ.
ಶುಕ್ರವಾರ ಸಂಜೆ ಬೀಸಿದ ಗಾಳಿ ಮಳೆಗೆ ತಾಲೂಕಿನ ಬಾಲೆಹೊಸೂರ, ಶಿಗ್ಲಿ, ಗುಲಗಂಜಿಕೊಪ್ಪ, ಆದ್ರಳ್ಳಿ, ಸೂರಣಗಿ, ಉಂಡೇನಹಳ್ಳಿ, ದೊಡೂxರ ಭಾಗದಲ್ಲಿನ ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು, ಕಲ್ಲಂಗಡಿ, ಪೇರಲ, ನಿಂಬೆ, ದಾಳಿಂಬೆ, ಬದನೆ, ಟೊಮೆಟೋ, ಬೆಂಡಿ, ಸೌತೆ ಇತರೆ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ.
ಬಾಲೇಹೊಸೂರ ಗ್ರಾಮದಲ್ಲಿ ಹನಮಂತಪ್ಪ ಕೋಣನತಂಬಗಿ ಅವರ 4 ಎಕರೆ, ಕರಿಯಪ್ಪ ಮುದಿಯಮ್ಮನವರ ಅವರ 2 ಎಕರೆ, ದತ್ತಾತ್ರೇಯ ಕಟ್ಟಿಮನಿ ಅವರ 3 ಎಕರೆ ಬಾಳೆ ಬೆಳೆ ಬಹುತೇಕ ನೆಲಕಚ್ಚಿದೆ. ಸಾವಿರಾರೂ ರೂ. ಸಾಲಸೂಲ ಮಾಡಿ ಕಷ್ಟುಪಟ್ಟು ಬೆಳೆದ 1 ವರ್ಷದ ಬೆಳೆ ಇನ್ನೇನು ಕೈಗೆ ಬರುವ ಹಂತದಲ್ಲಿ ಗೊನೆ ಸಹಿತ ಬಾಳೆ ಬೆಳೆ ನೆಲಕಚ್ಚಿದೆ. ಇದರಲ್ಲಿನ ಅಂತರ್ ಬೆಳೆಯೂ ಹಾಳಾಗಿದೆ. ಗ್ರಾಮದ ಹನುಮಪ್ಪ ಸಾಲಿ ಅವರ 2 ಎಕರೆ, ಶಿವಾನಂದ ಜಾಲವಾಡಗಿ ಮತ್ತು ಹನುಮಪ್ಪ ತಿರಕಣ್ಣವರ ಅವರ ತಲಾ ಎಕರೆಯಲ್ಲಿನ ಮಾವು ನೆಲಕ್ಕುದುರಿವೆ.
ಇನ್ನು ಗುಲಗಂಜಿಕೊಪ್ಪದ ಬಸನಗೌಡ ಪಾಟೀಲ, ದುಂಡವ್ವ ರಾಮಗೇರಿ, ರಾಮಣ್ಣ ರಾಮಗೇರಿ ಅವರು ಬೆಳೆದ ತರಕಾರಿ ಬೆಳೆ ಹಾಳಾಗಿದೆ. ಇದು ಕೇವಲ ಒಬ್ಬಿಬ್ಬ ರೈತರ ಕತೆಯಾಗಿರದೇ ತಾಲೂಕಿನಾದ್ಯಂತ ತೋಟಗಾರಿಕೆ ಬೆಳೆಗಾರರು ಹಾನಿ ಅನುಭವಿಸಿದ್ದಾರೆ. ಇನ್ನು ತಾಲೂಕಿನ ಖುಷ್ಕಿ ಜಮೀನಿನಲ್ಲಿ ಅಲ್ಲಲ್ಲಿ ಬದುವು, ಒಡ್ಡು ಕಿತ್ತು ಜಮೀನು ಹಾಳಾಗಿವೆ. ಮುಂಗಾರಿನ ಕೃಷಿಗೆ ಜಮೀನು ಹದ ಮಾಡಲಾಗದೇ ರೈತರು ಚಿಂತೆಗೀಡಾಗಿದ್ದಾರೆ.
ಶನಿವಾರ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಅವರು ಗುಲಗಂಜಿಕೊಪ್ಪ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ಈ ವೇಳೆ ಮಾಹಿತಿ ನೀಡಿದ ಅವರು, ಅಕಾಲಿನ ಮಳೆ-ಗಾಳಿಯಿಂದ ತಾಲೂಕಿನ ವಿವಿಧೆಡೆ ಬೆಳೆ ಹಾನಿಯಾಗಿವೆ. ಹಾನಿಗೀಡಾದ ತೋಟಗಾರಿಕಾ ಬೆಳೆಗಳನ್ನು ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಖುದ್ದಾಗಿ ಪರಿಶೀಲಿಸಿ ಹಾನಿ ಅಂದಾಜಿನ ವರದಿ ಸಲ್ಲಿಸಲಾಗುವುದು. ಎನ್‌ಡಿಆರ್‌ಎಫ್ ವಿಧಾನದಡಿ ಪರಿಹಾರ ಕಲ್ಪಿಸಲಾಗುವುದು ಎಂದರು.
ತಾಲೂಕಿನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಗಾಳಿ, ಆಲಿಕಲ್ಲು ಸಹಿತ ಮಳೆಯಿಂದ ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿವೆ. 20ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಈ ಬಗ್ಗೆ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯಿಂದ ನಿಖರ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸುವ ಮೂಲಕ ಹಾನಿಗೆ ಪರಿಹಾರ ಕಲ್ಪಿಸುವ ಕಾರ್ಯ ಮಾಡುವೆ. –
ಪರಶುರಾಮ ಸತ್ತಿಗೇರಿ, ತಹಶೀಲ್ದಾರ್, ಲಕ್ಷ್ಮೇಶ್ವರ
ಕಳೆದ 2 ವರ್ಷ ಕೋವಿಡ್‌ನಿಂದ ತೋಟಗಾರಿಕೆ ಬೆಳೆಗಾರರು ಸಾಕಷ್ಟು ತೊಂದರೆ, ನಷ್ಟ ಅನುಭವಿಸಿದ್ದಾರೆ. ಸಮೃದ್ಧವಾಗಿದ್ದ ಬೆಳೆ ಅಕಾಲಿಕ ಮಳೆ-ಗಾಳಿಗೆ ಹಾನಿಗೀಡಾಗಿ ರೈತರ ನೆಮ್ಮದಿ ಕಸಿದಿದೆ. ಅಕಾಲಿಕ ಮಳೆ-ಗಾಳಿಯಿಂದ ಬೆಳೆಗಳು ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಆದ್ದರಿಂದ, ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಕಷ್ಟ ಅರಿತು ಬೆಳೆ ಹಾನಿ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು.
-ಚನ್ನಪ್ಪ ಜಗಲಿ, ಹನುಮಂತಪ್ಪ ಕೋಣನತಂಬಗಿ, ತೋಟಗಾರಿಕಾ ಬೆಳೆಗಾರರು