ನಿನಗೇನೋ ಆಗಿರೋದು! ನೋ ಶೇವ್ ನವೆಂಬರ್ ಅಂತ ಸ್ಟೈಲಿಗೆ ಬಿಟ್ಟ ಮಾಮೂಲಿ ಗಡ್ಡವೇನೋ ಅದು? ಆದರೆ, ನನಗೆ ನಿನ್ನ ಮೋಡಿಗಿಂತ ಅದರ ಮೋಡಿಯೇ ಇಮ್ಮಡಿಯೇನೋ ಎಂಬ ಭಾವನೆ. ಡಿಸೆಂಬರ್ ಕೊನೆಗೆ ಕ್ಲೀನ್ ಶೇವ್ ಮಾಡಿ ಬೋಲ್ಡಾಗಿ ಎದ್ದು ಕಾಣಿಸುವ ಲೆಕ್ಕಾಚಾರವನ್ನು ನೀನು ಹಾಕಿರಬಹುದು.ಆದರೆ, ಪ್ರೀತಿಯಲ್ಲಿ ಕೂಡಿಸಿ, ಕಳೆದು, ಗುಣಿಸಿ,ಭಾಗಿಸುವ ಲೆಕ್ಕಕಿಂತ ಮಿಗಿಲಾದದ್ದೇ ಇದೆಯಲ್ಲ…
ನನ್ನ ನಿನ್ನ ಪ್ರೀತಿಸಾಗರಕ್ಕೆ ವಿಸ್ತೀರ್ಣ ಕಂಡುಹಿಡಿಯುವ ಮಾಪಕವನ್ನು ಯಾವ ವಿಜ್ಞಾನಿಯೂ ಶೋಧಿಸಿಲ್ಲ? ಇನ್ನು ಉದ್ದಳತೆ, ಅಗಲಗಳ ಕುರಿತು ಮಾಹಿತಿ ಯಾರಿಗಿದೆ ಹೇಳು? ಕೋನಮಾಪಕ, ತ್ರಿಜ್ಯ,ಇಂಚುಪಟ್ಟಿ ಇವೆಲ್ಲ ಯಾವುದೂ ಸಾಲದು ನನ್ನೊಡೆಯ. ನಮ್ಮಿಬ್ಬರ ಪ್ರೀತಿ ಶುರುವಾದದ್ದಕ್ಕೆ ಸೂತ್ರ, ಪ್ರಮೇಯಗಳು ಕೂಡ ಉತ್ತರ ಹೇಳಲಾರವೇನೋ. ಪ್ರೀತಿಯ ವರ್ಗ, ಘನ, ಇತ್ಯಾದಿ ಕಂಡುಹಿಡಿಯಲು, ಘಾತ ಸಂಖ್ಯೆಯನ್ನು ಬಿಡಿಸಲು ಗಣಕಯಂತ್ರಕ್ಕೂ ಅಸಾಧ್ಯವೇನೋ.
ವರ್ಗ,ಘನಮೂಲವ ಬಿಡಿಸಲು ಕೂತ ಗಣಿತಜ್ಞ ಅರ್ಧ ಶತಮಾನ ಕಳೆದರೂ ಅಸಾಧ್ಯವೆಂದು ಹೊರಬಂದಾನೇನೋ. ಇನ್ನು ಅಪವರ್ತನ,ಲ.ಸಾ.ಅ,ಮ.ಸಾ.ಅಗಳು ಪ್ರೀತಿಯಲ್ಲಿ ಬಿಡಿಸಿದಷ್ಟು ದೊಡ್ಡ ಪ್ರೀತಿಯ ಮೊತ್ತವನ್ನೇ ನೀಡುತ್ತವಲ್ಲವೆ? ನಮ್ಮ ಪ್ರೀತಿಗೆ ನಾವೇ ಸಮವಾಗಿರುವ ವಿಷಮ,ಮಿಶ್ರ ಭಿನ್ನರಾಶಿಗಳ ಗೊಡವೆಯೇಕೆ? ದಶಮಾಂಶ,ಅನುಪಾತ, ಸಮಾನುಪಾತವೆಂಬ ಬಹು ಕಠಿಣ ಅಂಶಗಳನ್ನು ದೂರವೇ ಇಡೋಣ.
ಯಾಕೀ ಲೆಕ್ಕಾಚಾರದ ದೊಡ್ಡ ತಲೆನೋವಿನ ಕೆಲಸ? ನಮ್ಮ ಸ್ನೇಹ, ಪ್ರೇಮ, ಪ್ರೀತಿಯನ್ನೆಲ್ಲ ಕೂಡಿಸಿ,ವಿರಸ,ಜಗಳಗಳ ಕಳೆದು,ಪ್ರೀತಿಯಿಂದ ಗುಣಿಸಿ,ನೆಗೆಟಿವ್ ಎನರ್ಜಿಯನ್ನು ಭಾಗಿಸಿ ಸಮ,ಬೆಸಗಳ ಭೇದ ತೊರದೇ ಅವಿಭಾಜ್ಯ, ಭಾಜ್ಯವೆಂಬ ಗೊಡವೆಗೆ ಹೋಗದ ಪ್ರೀತಿಯೆಂಬ ದೊಡ್ಡ ಸಂಖ್ಯೆಯನ್ನು ಅಪ್ಪಿಕೊಳ್ಳೊಣ ಬಾ.
* ಸಾವಿತ್ರಿ ಶ್ಯಾನುಭಾಗ