Advertisement
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಕೇವಲ 91 ಸ್ಥಾನ ಲಭ್ಯವಾಗಿತ್ತು. ಈ ಬಾರಿ ಸರ್ಕಾರ ರಚನೆ ಮಾಡದಿದ್ದರೂ 141 ಸ್ಥಾನಗಳ ಏರಿಕೆಯನ್ನು ಕಂಡಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಮೈತ್ರಿಕೂಟ ರಚನೆ ಮಾಡಿಕೊಂಡರೂ ಸಹ ಸಣ್ಣಪುಟ್ಟ ಪಕ್ಷಗಳು ಸೇರಿ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದು, ಮೈತ್ರಿಕೂಟದ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿದೆ. ಅಲ್ಲದೆ, ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದು, ಚುನಾವಣೆಯ ಸಮಯದಲ್ಲಿ “ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಸಂಪತ್ತು ಮರು ಹಂಚಿಕೆ ಹೇಳಿಕೆ’ ಕೂಡ ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ ಉಂಟುಮಾಡಿತು.
ಎನ್‌ಡಿಎ ಮೈತ್ರಿಕೂಟದ ಬಳಿ ಇರುವ ಮೋದಿಯಂತಹ ಅಭ್ಯರ್ಥಿ ಇಂಡಿಯಾ ಮೈತ್ರಿಕೂಟದ ಬಳಿ ಇಲ್ಲದೇ ಇದ್ದುದ್ದು ಸಹ ಸೋಲಿಗೆ ಪ್ರಮುಖ ಕಾರಣವಾಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್‌ರಂತಹ ಎಲ್ಲಾ ನಾಯಕರು ಪ್ರಧಾನಿ ಹುದ್ದೆಯತ್ತ ಕಣ್ಣು ಹಾಕಿದ್ದು, ಜನರಲ್ಲಿ ಮೈತ್ರಿಕೂಟದ ಮೇಲಿನ ವಿಶ್ವಾಸವನ್ನು ಕುಂದಿಸಲು ಕಾರಣವಾಯಿತು. ಅಧಿಕಾರಕ್ಕೇರಲು ವಿಫಲವಾದರೂ ಇಂಡಿಯಾ ಮೈತ್ರಿಕೂಟದ ಸಾಧನೆಯನ್ನು ಅಲ್ಲಗಳೆಯುವಂತಿಲ್ಲ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಂದಗಳು, ಚುನಾವಣೆಗೂ ಮುನ್ನ ಜನರನ್ನು ತಲುಪಿದ್ದು, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಅರ್ಥ ಮಾಡಿಸಿದ್ದು ಮೈತ್ರಿಕೂಟದ ಕೈ ಹಿಡಿದಿದೆ.
Related Articles
Advertisement
ಇದಿಷ್ಟೇ ಅಲ್ಲದೇ ಚುನಾವಣೆ ಘೋಷಣೆಯಾಗುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪ್ರಚಾರ ಮಾಡುತ್ತಾ ಮೈತ್ರಿಕೂಟದತ್ತ ಜನರನ್ನು ಸೆಳೆದಿದ್ದು, ಈ ಚುನಾವಣೆಯಲ್ಲಿ ಲಾಭ ತಂದುಕೊಟ್ಟಿತು. ಹೀಗಾಗಿ ಅಧಿಕಾರಕ್ಕೇರುವಲ್ಲಿ ವಿಫಲವಾದರೂ ಗೆಲುವು ಕಂಡಷ್ಟೇ ಖುಷಿ ಮೈತ್ರಿಕೂಟದ ಪಾಲಾಗಿದೆ.
ಸೋಲಿಗೆ ಕಾರಣಗಳೇನು?1. ಹೆಚ್ಚು ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿನ ವಿಫಲತೆ
2. ಮೋದಿ ರೀತಿಯ ಪ್ರಧಾನಿ ಅಭ್ಯರ್ಥಿ ಇಲ್ಲದೇ ಇದ್ದದ್ದು
3. ರಾಹುಲ್, ಪ್ರಿಯಾಂಕರ ಮೇಲಿನ ಹೆಚ್ಚು ಅವಲಂಬನೆ
4. ಕರ್ನಾಟಕ ಸೇರಿ ಭರವಸೆ ರಾಜ್ಯಗಳಲ್ಲಿ ಅನಿರೀಕ್ಷಿತ ಕುಸಿತ
5. ಕೊನೇ ಕ್ಷಣದಲ್ಲಿ ನಿತೀಶ್ ಮೈತ್ರಿಕೂಟ ತೊರೆದು ಹೋಗಿದ್ದು