Advertisement

 278  ಸಿಸಿ ಕ್ಯಾಮೆರಾ ಪರಿಶೀಲಿಸಿ ಲಾರಿ ಕದ್ದವನ ಬಂಧನ

12:30 PM Jul 13, 2023 | Team Udayavani |

ಬೆಂಗಳೂರು: ಚಾಮರಾಜಪೇಟೆಯಲ್ಲಿ ನಿಲುಗಡೆ ಮಾಡಿದ್ದ 12 ಚಕ್ರದ ಲಾರಿ ಕದ್ದಿದ್ದ ಕಳ್ಳನನ್ನು 278 ಸಿಸಿಕ್ಯಾಮೆರಾ ಸಹಾಯದಿಂದ ತಮಿಳುನಾಡಿನಲ್ಲಿ ಪತ್ತೆ ಹಚ್ಚಿ ವಿವಿಪುರ ಪೊಲೀಸರು ಬಂಧಿಸಿದ್ದಾರೆ.

Advertisement

ತಮಿಳುನಾಡಿನ ಮುತ್ತುರಾಜ್‌ (45) ಬಂಧಿತ ಆರೋಪಿ.

ಆರೋಪಿಯಿಂದ 1.50 ಕೋಟಿ ರೂ. ಮೌಲ್ಯದ ಮೂರು ಲಾರಿ ಜಪ್ತಿ ಮಾಡಲಾಗಿದೆ. ಆರೋಪಿ ಮುತ್ತುರಾಜ್‌ ಲಾರಿ ಚಾಲಕ ನಾಗಿ ಕೆಲಸ ಮಾಡುತ್ತಿದ್ದ. ಈ ನಡುವೆ ಐಷಾರಾಮಿ ಜೀವನ ನಡೆಸಲು ಲಾರಿ ಕಳ್ಳತನಕ್ಕೆ ಇಳಿದಿದ್ದ. ಬಳಿಕ ತಮಿಳುನಾಡಿ ನಲ್ಲಿರುವ ತನ್ನ ಸಹಚರರಿಗೆ ಮಾರಾಟ ಮಾಡುತ್ತಿದ್ದ. ಒಬ್ಬ ಸಹಚರ ಕದ್ದ ಲಾರಿಯ ಇಂಜಿನ್‌ ನಂಬರ್‌ ಮತ್ತು ಚಾಸಿಸ್‌ ನಂಬರ್‌ ಬದಲಾಯಿಸಿದರೆ, ಮತ್ತೂಬ್ಬ ಸಹಚರ ದಾಖಲಾತಿ ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದ. ಬಂದ ದುಡ್ಡನ್ನು ಮೂವರೂ ಹಂಚಿಕೊಳ್ಳುತ್ತಿದ್ದರು. ಇದೇ ರೀತಿ ತಮಿಳುನಾಡಿನಲ್ಲಿ 2 ಲಾರಿಗಳನ್ನು ಕದ್ದು ಮಾರಾಟ ಮಾಡಿದ್ದರು.

ಆರೋಪಿಯ ಸುಳಿವು ಕೊಟ್ಟ ಸಿಸಿಕ್ಯಾಮೆರಾ: ಹರಿಪಾಲ ಎಂಬುವವರು ತಮ್ಮ ಲಾರಿಯನ್ನು ಜ.14ರಂದು ರಾತ್ರಿ ಚಾಮರಾಜಪೇಟೆಯ 4ನೇ ಮುಖ್ಯರಸ್ತೆ ಯಲ್ಲಿ ನಿಲುಗಡೆ ಮಾಡಿದ್ದರು. ಇತ್ತ ತಮಿಳುನಾಡಿನಿಂದ ಲಾರಿ ಕದಿಯಲೆಂದು ಬೆಂಗಳೂರಿಗೆ ಬಂದಿದ್ದ ಮುತ್ತುರಾಜ್‌ ಈ ಲಾರಿಯನ್ನು ಗಮನಿಸಿದ್ದ. ಬಳಿಕ ನಕಲಿ ಕೀ ಬಳಸಿ ಲಾರಿ ಸ್ಟಾರ್ಟ್‌ ಮಾಡಿ ಹೊಸೂರು ಮಾರ್ಗವಾಗಿ ಚೆನ್ನೈಗೆ ತೆರಳಿದ್ದ. ಲಾರಿಯನ್ನು ಸಹಚರರಿಗೆ ಒಪ್ಪಿಸಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ.ಗೆ ಮಾರಾಟ ಮಾಡಿಸಿದ್ದ. ಇತ್ತ ಲಾರಿ ಮಾಲೀಕ ವಿವಿಪುರ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯ ನಡೆದ ಸ್ಥಳದ ಸುತ್ತ-ಮುತ್ತಲಿನ ಸಿಸಿಕ್ಯಾಮೆರಾ ಪರಿಶೀಲಿಸಿದ್ದಾರೆ. ಆ ವೇಳೆ ಮುತ್ತುರಾಜ್‌ ಲಾರಿ ಚಲಾಯಿಸಿಕೊಂಡು ಹೊಸೂರಿನತ್ತ ತೆರಳಿರುವುದು ಕಂಡು ಬಂದಿತ್ತು. ಬೆಂಗಳೂರಿನಿಂದ ಚೆನ್ನೈವರೆಗೆ ಒಟ್ಟು 278 ಸಿಸಿಕ್ಯಾಮೆರಾ ಪರಿಶೀಲಿಸಿದ ಪೊಲೀಸರು ಮುತ್ತುರಾಜ್‌ನನ್ನು ಚೆನ್ನೈನಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತಂದಿದ್ದಾರೆ. ಆತ ಕೊಟ್ಟ ಮಾಹಿತಿ ಆಧರಿಸಿ 1.50 ಲಕ್ಷ ರೂ. ಮೌಲ್ಯದ 3 ಲಾರಿಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಯು ಇದೇ ಮೊದಲ ಬಾರಿಗೆ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next