ಬೆಂಗಳೂರು: ನಕಲಿ ಕೀ ಬಳಸಿ ಲಾರಿ ಕದ್ದಿದ್ದ ಆರೋಪಿಯನ್ನು 11 ಗಂಟೆಯಲ್ಲಿ ಕೋಣನಕುಂಟೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ತಮಿಳುನಾಡು ವೇಲೂರು ಜಿಲ್ಲೆಯ ಎ.ದೀನ್ ದಯಾಳ್ (48) ಬಂಧಿತ.
ಲಾರಿ ಮಾಲೀಕ ನಾಗೇಂದ್ರ ನಾಯಕ್ ಏ.5ರಂದು ಸಂಜೆ 5 ಗಂಟೆಗೆ ಟಾಟಾ ಟಿಪ್ಪರ್ ಲಾರಿಯನ್ನು ನೈಸ್ ರಸ್ತೆ ಪಕ್ಕದಲ್ಲಿರುವ ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆಯಲ್ಲಿ ನಿಲ್ಲಿಸಿದ್ದರು. ಮರುದಿನ ಏ.6ರಂದು ಸ್ಥಳಕ್ಕೆ ತೆರಳಿ ನೋಡಿದಾಗ ಲಾರಿ ಇರಲಿಲ್ಲ. ಕೂಡಲೇ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ನಡೆದ ಸ್ಥಳದ ಆಸು-ಪಾಸಿನಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ಆರೋಪಿ ದೀನ್ ದಯಾಳ್ ಮುಖ ಚಹರೆ ಪತ್ತೆಯಾಗಿತ್ತು. ಈ ಆಧಾರದ ಮೇಲೆ ಕೆಲ ಲಾರಿ ಚಾಲಕರು, ಭಾತ್ಮೀದಾರರು ಹಾಗೂ ಕೃತ್ಯ ನಡೆದ ಸ್ಥಳದಿಂದ ಲಾರಿ ಚಲಿಸಿರುವ ರಸ್ತೆಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಸೇರಿದಂತೆ ತಾಂತ್ರಿಕ ಕಾರ್ಯಾಚರಣೆ ನಡೆಸಲಾಗಿತ್ತು.
ಆಗ ಆರೋಪಿಯು ಅತ್ತಿಬೆಲೆ ಟೋಲ್ ಮೂಲಕ ತಮಿಳುನಾಡಿಗೆ ಲಾರಿಯಲ್ಲಿ ತೆರಳಿರುವ ಸುಳಿವು ಸಿಕ್ಕಿತ್ತು. ಕೂಡಲೇ ಪೊಲೀಸರು ತಮ್ಮ ವಾಹನದಲ್ಲಿ ಸಿನಿಮೀಯ ಶೈಲಿಯಲ್ಲಿ ಆರೋಪಿಯ ಜಾಡು ಹಿಡಿದು ತಮಿಳುನಾಡಿಗೆ ತೆರಳಿದ್ದರು. ಇತ್ತ ಆರೋಪಿಯು ತಮಿಳುನಾಡಿನ ಗಡಿ ಭಾಗದ ಬಳಿ ಲಾರಿಯನ್ನು ರಸ್ತೆ ಬದಿ ನಿಲುಗಡೆ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಆ ವೇಳೆ ಪೊಲೀಸರು ಆತನನ್ನು ಪತ್ತೆ ಹಚ್ಚಿ ಲಾರಿ ಸಮೇತ ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದ್ದಾರೆ. ಕಳ್ಳತನವಾದ 11ಗಂಟೆಯಲ್ಲಿ ಲಾರಿ ಹಾಗೂ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕದ್ದ ಲಾರಿಗಳನ್ನು ಪ್ಲೇಟ್ ಬದಲಿಸಿ ಮಾರಾಟ : ಆರೋಪಿ ದೀನ್ ದಯಾಳ್ ಈ ಹಿಂದೆಯೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ಲಾರಿಗಳನ್ನು ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದ. ತಮಿಳುನಾಡು, ಕರ್ನಾಟಕದಲ್ಲಿ ಹಲವಾರು ಲಾರಿಗಳನ್ನು ನಿಲುಗಡೆ ಮಾಡುವ ಪ್ರದೇಶಕ್ಕೆ ತೆರಳಿ ಪರಿಶೀಲಿಸುತ್ತಿದ್ದ. ಚಾಲಕರು, ಕ್ಲಿನರ್‌ಗಳು ಇಲ್ಲದಿರುವ ಲಾರಿಗಳಿಗೆ ಏರುತ್ತಿದ್ದ. ಬಳಿಕ ತನ್ನ ಬಳಿಯಿರುವ ನಕಲಿ ಕೀ ಬಳಿಸಿಕೊಂಡು ಲಾರಿ ಸ್ಟಾರ್ಟ್ ಮಾಡಿ ಸ್ವತಃ ತಾನೇ ಚಲಾಯಿಸಿಕೊಂಡು ತಮಿಳುನಾಡಿನ ತನ್ನ ಊರಾದ ವೇಲೂರಿಗೆ ಹೋಗುತ್ತಿದ್ದ. ಅಲ್ಲಿ ಲಾರಿಯ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ದುಡ್ಡು ಕೊಟ್ಟು ಖರೀದಿಸಿದ ಲಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದ. ಬಳಿಕ ತಮಿಳುನಾಡಿನ ಕ್ರಶರ್ ಕೆಲಸ ಮಾಡುವ ಪ್ರದೇಶಗಳಿಗೆ ತೆರಳಿ ಕಡಿಮೆ ಬೆಲೆಗೆ ಲಾರಿ ಮಾರಾಟ ಮಾಡುತ್ತಿದ್ದ. ಲಾರಿ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ. ಸಾಮಾನ್ಯವಾಗಿ ಕ್ರಶರ್ ಕೆಲಸ ಮಾಡುವ ಪ್ರದೇಶಗಳಲ್ಲಿ ಜಲ್ಲಿ, ಕಲ್ಲು, ಮಣ್ಣುಗಳನ್ನು ಸಾಗಿಸಲು ಲಾರಿಗಳನ್ನು ಬಳಸುತ್ತಾರೆ. ಅಲ್ಲಿರುವವರು ಲಾರಿ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸುವುದಿಲ್ಲ ಎಂಬುದನ್ನು ಅರಿತಿದ್ದ ಆರೋಪಿಯು ಕೃತ್ಯ ಎಸಗುತ್ತಿದ್ದ ಎಂಬ ಸಂಗತಿ ಆತನ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.