ದಾವಣಗೆರೆ: ಲಾರಿ ನುಗ್ಗಿದ ಪರಿಣಾಮ ಮನೆ ಹಾಗೂ ವಾಹನಗಳು ನಜ್ಜುಗುಜ್ಜಾಗಿರುವ ಘಟನೆ ತಾಲ್ಲೂಕಿನ ಹದಡಿ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಆಂಧ್ರ ಪ್ರದೇಶ ಮೂಲದ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದ್ದು, ಹಲವು ವಾಹನಗಳಿಗೆ ಢಿಕ್ಕಿ ಹೊಡೆದ ಲಾರಿ ಮನೆಗೆ ನುಗ್ಗಿದೆ. ಲಾರಿ ಚಾಲಕ ಕಂಠಪೂರ್ತಿ ಮದ್ಯಪಾನ ಮಾಡಿದ್ದ. ಜೊತೆಗೆ ಕಂಡಕ್ಟರ್ ಸಹ ಅದೇ ಸ್ಥಿತಿಯಲ್ಲಿದ್ದ.
ದಾವಣಗೆರೆ ಕಡೆಯಿಂದ ಚನ್ನಗಿರಿ ಕಡೆಗೆ ಹೋಗುತ್ತಿದ್ದ ಲಾರಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಬಳಿಕ ಮನೆಯೊಳಗೆ ನುಗ್ಗಿದ್ದು, ಮನೆ ಬಾಗಿಲುಗಳು ಮುರಿದು ಹೋಗಿವೆ. ಬಳಿಕ ಲಾರಿ ಸಿಲುಕಿಕೊಂಡಿದೆ.
ಇದನ್ನೂ ಓದಿ:ಇನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿಗಿಲ್ಲ ಜಾಗ: ಸಿಎಂ ಬೊಮ್ಮಾಯಿ ಸೂಚನೆ
”ಪೂರ್ತಿ ನಿದ್ದೆಯಲ್ಲಿದ್ದೆ. ಇದ್ದಕ್ಕಿದ್ದಂತೆ ಸ್ಫೋಟದ ಶಬ್ಧ ಬಂದಿತು. ಕಣ್ಣು ಬಿಟ್ಟು ನೋಡಿದರೆ ಲಾರಿ ನುಗ್ಗಿತ್ತು. ನಾನು ಸತ್ತು ಬದುಕಿ ಬಂದಿದ್ದೇನೆ ಎಂಬ ಅನುಭವ ಆಗಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಓಮ್ನಿ ವಾಹನದಲ್ಲೇ ನನ್ನ ದುಡಿಮೆ. ಈಗ ನುಜ್ಜುಗುಜ್ಜಾಗಿರುವ ಕಾರಣ ಹೊಸ ವಾಹನ ಕೊಡಿಸಬೇಕು. ಇಲ್ಲದಿದ್ದರೆ ಬದುಕುವುದೇ ಕಷ್ಟವಾಗುತ್ತದೆ” ಎಂದು ಓಮ್ನಿಯಲ್ಲಿ ಮಲಗಿದ್ದ ಯುವಕ ಹೇಳಿದ್ದಾರೆ.
ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಹಾಗೂ ಕಂಡಕ್ಟರ್ ಅನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.