ಲಂಡನ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ. ಗೆಲುವಿಗೆ ಕೇವಲ 64 ರನ್ನುಗಳ ಗುರಿ ಪಡೆದ ಪಾಕ್, ಒಂದೇ ವಿಕೆಟಿಗೆ 66 ರನ್ ಮಾಡಿ ವಿಜಯೋತ್ಸವ ಆಚರಿಸಿತು.
ಪಾಕ್ ವೇಗಿಗಳ ಪರಾಕ್ರಮಕ್ಕೊಂದು ವೇದಿಕೆ ಯಾದ ಈ ಟೆಸ್ಟ್ ಪಂದ್ಯ ಮೂರೂವರೆ ದಿನಗಳಲ್ಲೇ ಮುಗಿದು ಹೋಯಿತು. ಇದರೊಂದಿಗೆ ಐತಿಹಾಸಿಕ ಲಾರ್ಡ್ಸ್‌ನಲ್ಲಿ ನಡೆದ ಸತತ 2 ಟೆಸ್ಟ್ ಗಳಲ್ಲಿ ಪಾಕಿಸ್ಥಾನ ಗೆದ್ದು ಬಂದಿತು. 2016ರಲ್ಲಿ ಇಲ್ಲಿ ಆಡಲಾದ ಟೆಸ್ಟ್ ಪಂದ್ಯವನ್ನು ಪಾಕ್ 75 ರನ್ನುಗಳಿಂದ ಗೆದ್ದಿತ್ತು.
ಇಂಗ್ಲೆಂಡ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಈ ಪಂದ್ಯವನ್ನು ಕಳೆದು ಕೊಳ್ಳಬೇಕಾಯಿತು. ಆತಿಥೇಯರ 184 ರನ್ನುಗಳ ಸಣ್ಣ ಮೊತ್ತಕ್ಕೆ ಜವಾಬು ನೀಡಿದ ಪಾಕಿಸ್ಥಾನ ಮೊದಲ ಇನ್ನಿಂಗ್ಸ್‌ನಲ್ಲಿ 363 ರನ್ ಪೇರಿಸಿತು. 179 ರನ್ನುಗಳ ಹಿನ್ನಡೆಗೆ ಸಿಲುಕಿದ ಇಂಗ್ಲೆಂಡ್ ದ್ವಿತೀಯ ಸರದಿಯಲ್ಲೂ ಚೇತರಿಸಿಕೊಳ್ಳಲಿಲ್ಲ. ನಾಯಕ ರೂಟ್ (68), ಬಟ್ಲರ್ (67) ಮತ್ತು ಮೊದಲ ಟೆಸ್ಟ್ ಆಡಿದ ಡೊಮಿನಿಕ್ ಬೆಸ್ (57) ಅವರ ಅರ್ಧ ಶತಕದ ಹೊರತಾಗಿಯೂ 242ಕ್ಕೆ ಆಲೌಟ್ ಆಯಿತು. ವೇಗಿಗಳಾದ ಮೊಹಮ್ಮದ್ ಆಮಿರ್ ಮತ್ತು ಮೊಹಮ್ಮದ್ ಅಬ್ಟಾಸ್ ತಲಾ 4 ವಿಕೆಟ್ ಉರುಳಿಸಿದರು. ಅಬ್ಟಾಸ್ ಮೊದಲ ಇನ್ನಿಂಗ್ಸ್‌ನಲ್ಲೂ 4 ವಿಕೆಟ್ ಹಾರಿಸಿದ್ದರು.
ಗೆಲುವಿಗೆ 64 ರನ್ನುಗಳ ಸುಲಭ ಗುರಿ ಪಡೆದ ಪಾಕಿಸ್ಥಾನ ರವಿವಾರ 12.4 ಓವರ್‌ಗಳಲ್ಲಿ ಅಜರ್ ಅಲಿ (4) ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಇಮಾಮ್ ಉಲ್ ಹಕ್ 18, ಹ್ಯಾರಿಸ್ ಸೊಹೈಲ್ 39 ರನ್ ಮಾಡಿ ಅಜೇಯರಾಗಿ ಉಳಿದರು. 2ನೇ ಟೆಸ್ಟ್ ಜೂ. ಒಂದರಿಂದ ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-184 ಮತ್ತು 242. ಪಾಕಿಸ್ಥಾನ-363 ಮತ್ತು ಒಂದು ವಿಕೆಟಿಗೆ 66. ಪಂದ್ಯಶ್ರೇಷ್ಠ: ಮೊಹಮ್ಮದ್ ಅಬ್ಟಾಸ್.