ಲಕ್ನೋ:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ(ಸಮಾಜವಾದಿ) ಅಧಿಕಾರಕ್ಕೇರುವ ಮೂಲಕ ಉತ್ತರಪ್ರದೇಶದಲ್ಲಿ ರಾಮರಾಜ್ಯ ಸ್ಥಾಪಿಸಲಿದೆ ಎಂದು ಶ್ರೀಕೃಷ್ಣ ಪರಮಾತ್ಮ ಪ್ರತಿದಿನ ತನ್ನ ಕನಸಿನಲ್ಲಿ ಬಂದು ಹೇಳಿರುವುದಾಗಿ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ:ಬುಲ್ಲಿ ಬಾಯ್ ಆ್ಯಪ್ ಪ್ರಕರಣ:ಮುಂಬೈ ಪೊಲೀಸರಿಂದ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಬಂಧನ
ಬಹರೈಚ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮಾಧುರಿ ವರ್ಮಾ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಈ ಹೇಳಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಮಾಧುರಿ ವರ್ಮಾ ಎರಡು ಬಾರಿ ಶಾಸಕರಾಗಿದ್ದರು. 2010ರಿಂದ 2012ರವರೆಗೆ ಅವರು ವಿಧಾನಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಬಹರೈಚ್ ಜಿಲ್ಲೆಯ ನಾನ್ಪಾರಾ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕಿ ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸುವ ಹಾದಿಯಲ್ಲಿದ್ದೇವೆ ಎಂದು ಅಖಿಲೇಶ್ ಹೇಳಿದರು.
ಸಮಾಜವಾದದ ಮೂಲಕ ರಾಮರಾಜ್ಯದ ಹಾದಿಯಲ್ಲಿ ಸಾಗುತ್ತೇವೆ. ಯಾವಾಗ ಸಮಾಜವಾದ ಸ್ಥಾಪನೆಯಾಗುತ್ತದೋ ಅಂದು ರಾಜ್ಯದಲ್ಲಿ ರಾಮರಾಜ್ಯದ ಸರ್ಕಾರ ರಚನೆಯಾಗಲಿದೆ ಎಂದು ಅಖಿಲೇಶ್ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಪ್ರತಿದಿನ ರಾತ್ರಿ ನನ್ನ ಕನಸಿನಲ್ಲಿ ಭಗವಾನ್ ಶ್ರೀಕೃಷ್ಣ ನನಗೆ ಮುಂಬರುವ ಚುನಾವಣೆಯಲ್ಲಿ ನಮ್ಮ (ಸಮಾಜವಾದಿ ಪಕ್ಷ) ಪಕ್ಷ ಸರ್ಕಾರ ರಚಿಸಲಿದೆ ಎಂದು ಹೇಳಿರುವುದಾಗಿ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಆಡಳಿತ ವಿಫಲವಾಗಿದೆ. ಯೋಗಿ ಅವರ ಸರ್ಕಾರದಲ್ಲಿಯೇ ಗೂಂಡಾಗಳಿದ್ದಾರೆ. ಅಷ್ಟೇ ಅಲ್ಲ ಉತ್ತರಪ್ರದೇಶ ಮುಖ್ಯಮಂತ್ರಿ(ಯೋಗಿ)ಯೇ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅಖಿಲೇಶ್ ಆರೋಪಿಸಿದರು.