Advertisement

ಲೂಟಿ ಮಾಡಿದ್ರೂ ಇಲ್ಲೇನೂ ಸಿಗಲ್ಲ!

11:23 AM Dec 02, 2018 | |

ಹೈದರಾಬಾದ್‌ ಬ್ಯಾಂಕೊಂದರಲ್ಲಿ ಮಧ್ಯರಾತ್ರಿ “ಲೂಟಿ’ಯಾಗುತ್ತದೆ. ಆ ಲೂಟಿಕೋರರು ದೋಚಿದ ಹಣದೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ತಕ್ಷಣ ಸಿಗುತ್ತದೆ. ಕೂಡಲೇ ಎಸಿಪಿ ದುರ್ಗಾ ಭವಾನಿ ಆ ಲೂಟಿಕೋರರ ಬೆನ್ನು ಹತ್ತುತ್ತಾಳೆ. ಹಾಗಾದ್ರೆ ಆ ಹಣವನ್ನು “ಲೂಟಿ’ ಮಾಡಿದವರು ಯಾರು..? “ಲೂಟಿ’ ಮಾಡೋಕೆ ಅವರು ಮಾಡಿದ ಪ್ಲಾನ್‌ ಏನು..? ಕೋಟ್ಯಾಂತರ ರೂಪಾಯಿ ಹಣವನ್ನು ದೋಚಿದ ಲೂಟಿಕೋರರನ್ನು ದುರ್ಗಾ ಭವಾನಿ ಖೆಡ್ಡಾಕ್ಕೆ ಬೀಳಿಸುತ್ತಾಳಾ..? ಅಥವಾ ಲೂಟಿಕೋರರಿಗೆ ದೋಚಿದ ಹಣ ದಕ್ಕುತ್ತದೆಯಾ..? ಇದೇ “ಲೂಟಿ’ ಚಿತ್ರದ ಕ್ಲೈಮ್ಯಾಕ್ಸ್‌. 

Advertisement

ಇನ್ನು “ಲೂಟಿ’ ಚಿತ್ರದ ಕಥಾಹಂದರದ ಕನ್ನಡಕ್ಕೇನೂ ಹೊಸದಲ್ಲ. ಬ್ಯಾಂಕ್‌ ಮತ್ತಿತರ ಹಣದ ಮೂಲದ ಲೂಟಿಗೆ ಸ್ಕೆಚ್‌ ಹಾಕುವುದು. ಅದನ್ನು ಲೂಟಿ ಮಾಡಿ ಪರಾರಿಯಾಗುವುದು. ಕೊನೆಗೆ ಅದರಿಂದ ಪಾರಾಗುವುದು ಅಥವಾ ಪ್ರಾಣ ಬಿಡುವುದು ಇಂತಹ ಲೆಕ್ಕವಿಲ್ಲವಿಲ್ಲದಷ್ಟು ಚಿತ್ರಗಳು ಈಗಾಗಲೇ ಕನ್ನಡದಲ್ಲಿ ಬಂದು ಹೋಗಿವೆ. ಆ ಚಿತ್ರಗಳ ಸಾಲಿಗೆ ಈ ವಾರ “ಲೂಟಿ’ ಚಿತ್ರ ಹೊಸ ಸೇರ್ಪಡೆ ಎಂಬುದನ್ನು ಬಿಟ್ಟರೆ ಚಿತ್ರದ ಕಥೆ, ಚಿತ್ರಕಥೆಯ ಬಗ್ಗೆ ವಿಶೇಷವಾಗಿ ಹೇಳುವಂಥದ್ದೇನಿಲ್ಲ.

ಸರಳವಾಗಿ ಹೇಳಬಹುದಾದ ಕಥೆಯೊಂದಕ್ಕೆ ಇಲ್ಲಸಲ್ಲದ ಸಂಗತಿಗಳನ್ನು ಸೇರಿಸಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಿರ್ದೇಶಕರು, ಥಿಯೇಟರ್‌ನಲ್ಲಿ ಪ್ರೇಕ್ಷಕರ ತಾಳ್ಮೆಯನ್ನೂ ಪರೀಕ್ಷಿಸುತ್ತಾರೆ. ಚಿತ್ರದ ಬಹುತೇಕ ದೃಶ್ಯಗಳನ್ನು ನೋಡಿದರೆ, ಚಿತ್ರವನ್ನು ಯಾವ ಶೈಲಿಯಲ್ಲಿ ಪ್ರೇಕ್ಷಕರ ಮುಂದಿಡಬೇಕು ಎಂಬ ಸ್ಪಷ್ಟತೆಯೇ ನಿರ್ದೇಶಕರಿಗೆ ಇಲ್ಲದಂತೆ ಕಾಣುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, “ಲೂಟಿ’ ಅನ್ನು “ಚಿತ್ರ’ ಎನ್ನುವ ಬದಲು ಹತ್ತಾರು ಚಿತ್ರಗಳನ್ನು ಸೇರಿಸಿ ಮಾಡಿದ “ಚಿತ್ರನ್ನ’ ಎನ್ನಬಹುದು.

ಬಹು ವರ್ಷಗಳ ನಂತರ “ಲೂಟಿ’ ಚಿತ್ರದ ಮೂಲಕ ಎಸಿಪಿ ದುರ್ಗಾ ಭವಾನಿ ಪಾತ್ರದಲ್ಲಿ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿರುವ ನಟಿ ಇಶಾ ಕೊಪ್ಪಿಕರ್‌, ತಮ್ಮ ಪಾತ್ರ ಪೋಷಣೆಗೆ ಸಾಕಷ್ಟು ಪರಿಶ್ರಮ ಹಾಕಿರುವುದು ಕಾಣುತ್ತದೆ. ಆದರೆ ಅತ್ಯಂತ ಪೇಲವ ದೃಶ್ಯಗಳಿಂದಾಗಿ, ಅದ್ಯಾವುದೂ ಪ್ರೇಕ್ಷಕರ ಮನಸ್ಸಿನಲ್ಲಿ ಪರಿಣಾಮಕಾರಿಯಾಗಿ ಉಳಿಯುವುದಿಲ್ಲ. ಉಳಿದಂತೆ ಧ್ರುವ ಶರ್ಮ, ಶ್ವೇತಾ ಪಂಡಿತ್‌, ಕಡ್ಡಿಪುಡಿ ಚಂದ್ರು, ಸಾಧುಕೋಕಿಲ, ನರ್ಸ್‌ ಜಯಲಕ್ಷ್ಮೀ, ಮೋಹನ್‌ ಜುನೇಜಾ ಪಾತ್ರಗಳ ಅಗತ್ಯವೇನಿತ್ತು ಎಂಬುದು ದೇವರೆ ಬಲ್ಲ.

ಬಹುದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದ್ದರೂ, ಯಾವ ಪಾತ್ರಗಳನ್ನೂ ಸಮರ್ಥವಾಗಿ ಬಳಸಿಕೊಂಡಿಲ್ಲ. ಚಿತ್ರದ ಛಾಯಾಗ್ರಹಣ, ಸಂಕಲನ, ಸಂಗೀತ ಯಾವುದರ ಬಗ್ಗೆಯೂ ಮಾತನಾಡದಿರುವುದೇ ಒಳಿತು. ಒಟ್ಟಾರೆ ಸಾಕಷ್ಟು ಪೂರ್ವ ಸಿದ್ಧತೆ, ಹೊಸತನದ ತುಡಿತವಿದ್ದರೆ ಮಾತ್ರ ಪ್ರೇಕ್ಷಕರ ಮನಸ್ಸು ಮತ್ತು ಬಾಕ್ಸಾಫೀಸ್‌ ಎರಡನ್ನೂ ಲೂಟಿ ಮಾಡಬಹುದು ಎಂಬ ವಾಸ್ತವವನ್ನು ಲೂಟಿ ಚಿತ್ರತಂಡ ಮರೆತಂತಿದೆ

Advertisement

ಚಿತ್ರ: ಲೂಟಿ
ನಿರ್ದೇಶನ: ಗಿರೀಶ್‌ ಕಂಪ್ಲಾಪುರ್‌ 
ನಿರ್ಮಾಣ: ನಿರಂಜನ್‌ ಎನ್‌.ಎಂ
ತಾರಾಗಣ: ಇಶಾ ಕೊಪ್ಪಿಕರ್‌, ಧ್ರುವ ಶರ್ಮ, ದಿಲೀಪ್‌ ರಾಜ್‌, ಕಡ್ಡಿಪುಡಿ ಚಂದ್ರು, ಶ್ವೇತಾ ಪಂಡಿತ್‌, ಸಾಧುಕೋಕಿಲ, ಮೋಹನ್‌ ಜುನೇಜಾ ಇತರರು.

* ಜಿ.ಎಸ್‌ ಕಾರ್ತಿಕ ಸುಧನ್‌ 

Advertisement

Udayavani is now on Telegram. Click here to join our channel and stay updated with the latest news.

Next