Advertisement
ಅಷ್ಟಮಠದ ಪ್ರಾಂಗಣದೊಳಗೆ ಚಿಪ್ಪಿನೊಳಗೆ ಮುತ್ತಿನಂತೆ ಅಪರೂಪಕ್ಕೆ ಹೊರಪ್ರಪಂಚಕ್ಕೆ ಪ್ರಭೆ ಬೀರುತ್ತಿದ್ದ ಯತಿವರ್ಯರ ನಡುವಿನಿಂದ ಅವರು ಮೇಲೆದ್ದು, ಹೊರಜಗತ್ತಿನ ಶ್ರೀಸಾಮಾನ್ಯ, ಅದರಲ್ಲೂ ದಲಿತ ಕಾಲನಿಗಳಿಗೆ ಪ್ರವಾಸ ಹಮ್ಮಿಕೊಂಡಾಗ ಶ್ರೀಗಳನ್ನು ದೂರಿದವರಲ್ಲಿ ಎಲ್ಲ ಜಾತಿ- ವರ್ಗದವರೂ ಇದ್ದರು. ಅಸ್ಪೃಶ್ಯರ ಸ್ಪರ್ಶದಿಂದ ಕೃಷ್ಣಮಠಕ್ಕೆ ಅಪಚಾರವೆಂದು ಕೆಲವರು ಹೇಳಿ ಭುಸುಗುಟ್ಟಿದರೆ ಶ್ರೀಗಳ ಕೈಯಿಂದ ಮಂತ್ರಾಕ್ಷತೆ ಪಡೆದ ದಲಿತ ಕಾಲನಿಯಲ್ಲಿ ಹೊಸ ಸಂಭ್ರಮಾಚರಣೆ ಮಾತ್ರವಲ್ಲ, ನೂರಾರು ವರ್ಷಗಳ ಇತಿಹಾಸದಲ್ಲಿ ಶ್ರೇಷ್ಠ ಸ್ವಾಮೀಜಿ ಒಬ್ಬರ ಸಾಂತ್ವನದ ನುಡಿ ದಲಿತರ ಬದುಕಿನಲ್ಲಿ ಹೊಸ ಕನಸು ಬಿತ್ತಿತು. ಟೀಕಿಸುತ್ತಿದ್ದವರು ಸ್ವಾಮೀಜಿಗೆ ಬುದ್ಧಿ ಇಲ್ಲ ಎಂದರು.
Related Articles
ಮಾಡಿಕೊಂಡರು. ಒಮ್ಮೊಮ್ಮೆ ಅವರಿಗೆ ಅರಿವಿಧ್ದೋ ಇಲ್ಲದೆಯೋ ಸೃಷ್ಟಿಯಾದ ಗೊಂದಲಕ್ಕೆ ಪೇಜಾವರ ಶ್ರೀ ಎಂಬ ಗೋವನ್ನು ಬಲಿ ಕೊಡುವ ಯತ್ನ ಅನೇಕರಿಂದ ನಡೆಯಿತು. ದುರಂತವೆಂದರೆ ಕೃಷ್ಣ ಮಠದ ಪುಣ್ಯಕೋಟಿಯಾದ ಈ ಗೋವು ಕೂಡ ಒಮ್ಮೊಮ್ಮೆ ಹೆಬ್ಬುಲಿಯ ಬಾಯಿಯ ಬಳಿ ತಾನಾಗಿಯೇ ಹೋಗಿ ಸಂಕಟಪಟ್ಟದ್ದು ಸುಳ್ಳಲ್ಲ.
Advertisement
ನಮ್ಮ ಸರಕಾರವಿದ್ದ ದಿನಗಳವು. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮಡೆಸ್ನಾನ ವಿವಾದ ಪರಾಕಾಷ್ಠೆಗೇರಿತ್ತು. ಇವತ್ತಿನ ದಿನಗಳಲ್ಲಿ ಯಾರೋ ಉಂಡ ಎಂಜಲೆಲೆಯ ಮೇಲೆ ಹರಕೆಯ ಹೆಸರಲ್ಲಿ ಮನುಷ್ಯರು ಹೊರಳಾಡುವುದು ಎಷ್ಟು ಸರಿ ಎಂಬ ವಿಪಕ್ಷದ ವಾದಕ್ಕೆ ನಾವೂ ದನಿಗೂಡಿಸಿದ್ದೆವು. ಪರ-ವಿರುದ್ಧ ಪ್ರತಿಭಟನೆಗಳು ನಡೆದು ಮಡೆಸ್ನಾನ ನಿಷೇಧಿಸಬೇಕೆಂಬ ವಾದಕ್ಕೆ ಬಲ ಬಂತು. ಇನ್ನೇನು ಎಂಜೆಲೆಲೆಯ ಮೇಲುರುಳುವ ಸಂಪ್ರದಾಯ ಕೈಬಿಡಬೇಕೆಂಬ ನಿರ್ಧಾರ ತೆಗೆದುಕೊಳ್ಳುತ್ತಲೇ ಒಂದಷ್ಟು ಜನ ಭಾವುಕ ಭಕ್ತರು ತಮ್ಮ ಮಗುವಿಗೆ ಬಾಯಿ ಬರಲಿಲ್ಲವೆಂದೋ, ದೃಷ್ಟಿಮಾಂದ್ಯವೆಂದೋ, ಅದು ಸರಿಯಾದರೆ ಕುಕ್ಕೆಗೆ ಮಡೆಸ್ನಾನ ಮಾಡಿಸುವುದಾಗಿ ಹರಕೆ ಹೊತ್ತಿದ್ದೇವೆ, ಹರಕೆ ತೀರಿಸದಿದ್ದರೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ ಎಂದು ಬೀದಿಗಿಳಿದು ಸರಕಾರವನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಒಂದೆಡೆ ಭಾವುಕ ಭಕ್ತರ ಧಾರ್ಮಿಕ ನಂಬಿಕೆ, ಮತ್ತೂಂದೆಡೆ ಆಧುನಿಕ ಯುಗದಲ್ಲಿ ನಂಬಿಕೆಗಳನ್ನು ವೈಭವೀಕರಿಸುವ ಆಳುವ ಸರಕಾರ ಮೂಢನಂಬಿಕೆಗಳಿಗೆ ಪ್ರೋತ್ಸಾಹ ಕೊಡುತ್ತಿದೆ ಎಂಬ ಅಪವಾದ. ಆ ಹೊತ್ತಿನಲ್ಲಿ ಕಾಲಚಕ್ರ ಉರುಳಿ ನಾನು ಮಂತ್ರಿಯಾದೆ. ಸಮಸ್ಯೆ ಅತಿರೇಕಕ್ಕೇರುತ್ತಲೇ ಪೇಜಾವರ ಶ್ರೀಗಳು ಕೊಟ್ಟ ಸಲಹೆ “ಮಡೆಸ್ನಾನ ಬೇಡ. ಆದರೆ ನಂಬಿಕೆಗಳಿಗೆ ತೊಂದರೆಯಾಗದಂತೆ ದೇವರಿಗೆ ಎಡೆ ಬಡಿಸಿ ಎಡೆಸ್ನಾನವಾಗಿ ಆಚರಿಸೋಣ’ ಎಂಬುದಾಗಿತ್ತು.
ಸರಕಾರದ ಅಡ್ವೋಕೇಟ್ ಜನರಲ್ ಮೂಲಕ ಹೈಕೋರ್ಟ್‌ಗೆ ಪೇಜಾವರರ ಪ್ರಸ್ತಾವನೆ ಉಲ್ಲೇಖಸಿದ ಪ್ರಕರಣವನ್ನು ಸಲ್ಲಿಸಿದೆವು. ಘನವೆತ್ತ ನ್ಯಾಯಾಲಯ ನಂಬಿಕೆಯ ಆಧಾರದಲ್ಲಿ ಬದುಕುವ ಸಮಾಜಕ್ಕೆ ಪ್ರಸ್ತುತ ಕಾಲಘಟ್ಟದಲ್ಲಿ ಸರಕಾರ ನೀಡಿದ ಬದಲಾವಣೆಯ ಸ್ವರೂಪ ಎತ್ತಿಹಿಡಿಯುವುದಾಗಿ ಹೇಳಿತು. ಸಮಸ್ಯೆಯ ಪರಿಹಾರದ ಹಿಂದೆ ಪೇಜಾವರ ಶ್ರೀಗಳ ಸುದೀರ್ಘ ಧಾರ್ಮಿಕ ಜೀವನದ ಅನುಭವವಿತ್ತು.
ಮೊನ್ನೆ, ಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ಹಾಗೂ ನಮಾಝ್ ಒಂದರ್ಥದಲ್ಲಿ ಸರಳವೆಂದುಕೊಂಡರೂ; ಸಮರ್ಥಿಸುವವರೂ ವಿರೋಧಿಸುವವರೂ ಸಮಾನ ಸಂಖ್ಯೆಯಲ್ಲಿ ಇರುವುದರಿಂದ ಟೀಕೆ, ಟಿಪ್ಪಣಿ, ಸಮರ್ಥನೆ, ವಾಗ್ಧಂಡನೆಗಳ ಮಹಾಪೂರವೇ ಹರಿದಿದೆ. ಆಗಲೂ ಈ ಶ್ರೀಕೃಷ್ಣನ ಆರಾಧಕ ಹೆಂಗರುಳ ಯತಿಶ್ರೇಷ್ಠರು ಯಾವ ಆತಂಕವೂ ಇಲ್ಲದೆ ನಿರಮ್ಮಳವಾಗಿ ಧ್ಯಾನ ಮಾಡುವುದು ಕಂಡೆ. ಪೇಜಾವರ ಶ್ರೀಗಳ ಜನಪರ ಧ್ವನಿಗಳೆಲ್ಲ ಸಮಾಜದಲ್ಲಿ ಸಂಘರ್ಷವನ್ನು ಉಂಟು ಮಾಡಿದವು. ಅವರು ದಲಿತರ ಕೇರಿ ಪ್ರವೇಶಿಸಿದಾಗ ಸಂಪ್ರದಾಯವಾದಿಗಳು ವಿರೋಧಿಸಿದರು, ಹೊಸ ಚಿಂತಕರು ಸಮರ್ಥಿಸಿದರು; ಸಮುದ್ರೋಲ್ಲಂಘನ ಮಾಡಿದ ಸ್ವಾಮಿಗಳು ಶ್ರೀಕೃಷ್ಣ ಪೂಜೆ ತ್ಯಜಿಸಬೇಕೆಂದಾಗ ಚಿಂತಕರು ವಿರೋಧಿಸಿದರು, ಸಂಪ್ರದಾಯವಾದಿಗಳು ಸಮರ್ಥಿಸಿದರು; ಮತಾಂತರ ವಿರೋಧಿಸಿದಾಗ ಹಿಂದೂವಾದಿಗಳು ಹೊಗಳಿದರು, ಜಾತ್ಯತೀತರು ಟೀಕಿಸಿದರು; ಗೋಹತ್ಯೆ ವಿರೋಧಿಸಿ ಉಪವಾಸಕ್ಕೆ ಕುಳಿತಾಗ ಕೆಲವರು ಕೋಮುವಾದಿ ಎಂದು ಆರ್ಭಟಿಸಿದರೆ ಉಳಿದವರು ಗೋ ಸಂರಕ್ಷಕ ಸ್ವಾಮೀಜಿ ಎಂದು ಹೊಗಳಿದರು. ಮೊನ್ನೆ ಮೊನ್ನೆ ನಡೆದ ಪರ್ಯಾಯ ಪೀಠಾರೋಹಣದ ಸಮಾರಂಭದಲ್ಲಿ ಅಧಿಕಾರದಲ್ಲಿದ್ದ ಮಂತ್ರಿಗಳು ಅದ್ಯಾಕೋ ಸ್ವಾಮೀಜಿಯವರು ಹಿಂದುತ್ವದ ಹೆಸರಲ್ಲಿ ಬಿಜೆಪಿಯ ಕಡೆ ವಾಲುತ್ತಾರೆ ಎಂದು ಕುಟುಕಿದಾಗ ಸಿಡಿದೆದ್ದ ಪೇಜಾವರ ಶ್ರೀಗಳು, ಇಂದಿರಾ ಗಾಂಧಿಯವರು ತನ್ನ ಬಳಿ ಬಂದಾಗ ತಾನಾಡಿದ ಮಾತು ನೆನಪಿಸಿಕೊಂಡು, ತನ್ನ ವಿಚಾರಗಳಲ್ಲಿ ಇಂದಿರಾ ತೃಪ್ತರಾಗಿದ್ದರು, ವಿ. ಪಿ. ಸಿಂಗ್ ಕೂಡ ರಾಮಜನ್ಮಭೂಮಿ ವಿಚಾರಗಳು ಸೇರಿದಂತೆ ಅಸ್ಪೃಶ್ಯತೆಯ ನಿವಾರಣೆಯ ಬಗ್ಗೆ ತನ್ನ ನಿಲುವನ್ನು ತಾಳ್ಮೆಯಿಂದ ಕೇಳಿದ್ದರು, ಅದೇ ಮಾದರಿಯಲ್ಲಿ ಅಟಲ್, ಆಡ್ವಾಣಿಯವರು ಆತ್ಮೀಯರು; ಎಂದೆಂದೂ ಸರ್ವ ರಾಜಕೀಯ ಪಕ್ಷಗಳು ತನಗೆ ಸಮಾನ. ಆದರೆ ತಾನು ನಂಬಿದ ವಿಚಾರಗಳಿಗೆ ಮಾತ್ರ ತಾನು ಬದ್ಧ ಎಂದು ಬಿರು ನುಡಿಗಳನ್ನಾಡಿದರು.
ಒಟ್ಟಾರೆ ಪೇಜಾವರ ಶ್ರೀಗಳ ಮಾತು, ನಡತೆ, ರೀತಿ ರಿವಾಜುಗಳಲ್ಲಿ ದ್ರೋಣಾಚಾರ್ಯರ ಅಸಹಾಯ ಕರ್ತವ್ಯ ನಿಷ್ಠೆಯ ನಡುವೆಯೂ ಏಕಲವ್ಯನಿಗೆ ವಿದ್ಯೆ ನೀಡಿಯೇ ಸಿದ್ದ ಎಂಬ ಕಾರುಣ್ಯಪೂರ್ಣ ಹೃದಯ ಶ್ರೀಮಂತಿಕೆಯನ್ನು ಮರೆಮಾಚಲು ಸಾಧ್ಯವಿಲ್ಲ. ಆದಾಗ್ಯೂ ಇಂದಿನ ಗುಡುಗು ಸಿಡಿಲುಗಳನ್ನು ಎದುರಿಸಲು ಸ್ವಾಮೀಜಿಯವರು ಪಡೆದಿರುವ ಮಾನಸಿಕ ಶಕ್ತಿಯೇ ಅಭೇದ್ಯ. ನಿನ್ನೆ ಮೊನ್ನೆಯವರೆಗೂ ಶ್ರೀಗಳನ್ನು ನಿಂದಿಸುತ್ತಿದ್ದ ಬಂಡಾಯ- ಪ್ರಗತಿಪರರು ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದಕ್ಕಾಗಿ ಸ್ವಾಮೀಜಿಯನ್ನು ಬೆಂಬಲಿಸಿ ಕೊಡುತ್ತಿರುವ ಹೇಳಿಕೆ, ಖುದ್ದು ಭೇಟಿಯಾಗಿ ಮಾಡುವ ಅಭಿನಂದನೆ; ಇದರ ಜತೆಗೇ ವಿರುದ್ಧ ನಿಲುವಿನ ಪ್ರಖರವಾದಿಗಳ ಗರ್ಜನೆ, ಅವುಗಳೊಂದಿಗೆ ನಿತ್ಯ ಸುದ್ದಿಗಾಗಿ ಸುತ್ತುವ ಮಾಧ್ಯಮಗಳು- ಎಲ್ಲರನ್ನೂ ಮತ್ತು ಎಲ್ಲವನ್ನೂ ಈ 86ರ ಯತಿವರ್ಯ ಮೃದು ಮಾತುಗಳಲ್ಲಿ ನಿಭಾಯಿಸುವ ರೀತಿ ಮಾತ್ರ ವಿವರಿಸಲಸಾಧ್ಯ.
ಪೂಜ್ಯರ ಕುಶಲ ವಿಚಾರಿಸುತ್ತಲೇ “ಆದದ್ದೆಲ್ಲ ಆಗಿ ಹೋಯಿತು, ಜಾರಿ ಬಿದ್ದು ಭುಜಕ್ಕಾದ ನೋವು ಸೇರಿದಂತೆ ತಮ್ಮ ಆರೋಗ್ಯದ ಬಗ್ಗೆ ನನ್ನ ಹಿರಿಯರು ಕೇಳಿದ್ದಾರೆ’ ಎಂದೆ. ಹಾಲುಗಲ್ಲದ ಹಸುಳೆಯಾಗಿರುವಾಗಲೇ ಸನ್ಯಾಸ ಸ್ವೀಕರಿಸಿ ಎಂಟು ದಶಕಗಳ ಕಾಲ ಹಿಂದುತ್ವವೂ ಸೇರಿ ಸಮಾಜದ ಒಳಿತಿಗಾಗಿ ತನ್ನ ಸ್ವಂತದ್ದೆಲ್ಲವನ್ನೂ ಮರೆತು ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿದೇ ಉರಿಯುತ್ತಿರುವ ವಯೋವೃದ್ಧ ಪೇಜಾವರ ಶ್ರೀಗಳು ಕಣ್ಣರಳಿಸಿ ನಗುತಾ “ಶ್ರೀಕೃಷ್ಣ ನಮ್ಮೆಲ್ಲರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಾನೆ’ ಎಂದರು. ಸನ್ಯಾಸಿಯಾದರೂ ಶ್ರೀಸಾಮಾನ್ಯನ ಸಖ ಪೇಜಾವರ ಶ್ರೀಗಳ ಭುಜದ ಗಾಯ ಕೆಂಪಾಗಿತ್ತು; ಅವರ ಹೃದಯದ ನೋವಿನಂತೆ.
– ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸದಸ್ಯರು