Advertisement

Chess World Cup 2023 ಈ ಸಾಧನೆ ಸಣ್ಣದೇನಲ್ಲ! ಪ್ರಜ್ಞಾನಂದ ಸಂದರ್ಶನ

01:24 AM Aug 26, 2023 | Team Udayavani |

ಭವಿಷ್ಯದ ವಿಶ್ವನಾಥನ್‌ ಆನಂದ್‌ ಎಂದೇ ಪ್ರಸಿದ್ಧಿಯಾಗಿರುವ ಆರ್‌. ಪ್ರಜ್ಞಾನಂದ ಚೆಸ್‌ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಫಿಡೆ ಚೆಸ್‌ ವಿಶ್ವಕಪ್‌ ಫೈನಲ್‌ನಲ್ಲಿ ವಿಶ್ವ ನಂ. 1 ಮ್ಯಾಗ್ನಸ್‌ ಕಾರ್ಲ್ಸನ್‌ ವಿರುದ್ಧ ವೀರೋಚಿತವಾಗಿ ಆಡಿ, ಸೋತರೂ ದೇಶವಾಸಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸುದ್ದಿ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಅವರು ವಿಶ್ವಕಪ್‌ನಲ್ಲಿ ಎದುರಾದ ಸವಾಲುಗಳು, ನಡೆದುಬಂದ ದಾರಿ ಬಗ್ಗೆ ಮಾತನಾಡಿದ್ದಾರೆ.

Advertisement

ಇಡೀ ವಿಶ್ವಕಪ್‌ನಲ್ಲಿ ನೀವು ಉತ್ತಮ ಪ್ರದರ್ಶನ ನೀಡಿದ್ದೀರಿ, ವಿಶ್ವ ನಂ. 2 ಮತ್ತು ನಂ. 3 ಆಟಗಾರರನ್ನು ಟೈಬ್ರೇಕರ್‌ನಲ್ಲಿ ಸೋಲಿಸಿದ್ದೀರಿ. ಹೇಗೆನ್ನಿಸುತ್ತಿದೆ?
ಹೌದು, ಇಂಥ ದೊಡ್ಡ ಟೂರ್ನಿಗಳಲ್ಲಿ ಎರಡನೇ ಸ್ಥಾನ ಬರುವುದು ಸಣ್ಣದೇನಲ್ಲ. ಹೀಗಾಗಿ ನನಗೆ ಈ ಟೂರ್ನಿ ಅತ್ಯುತ್ತಮ ಎಂದೆನಿಸಿದೆ. ಎಂದಿಗೂ ನನ್ನ ನೆನಪಿನಲ್ಲಿ ಉಳಿದಿರುತ್ತದೆ.

ಬಹಳಷ್ಟು ದಿನಗಳವರೆಗೆ ಈ ಟೂರ್ನಿ ನಡೆಯಿತು. ಇದರಲ್ಲಿ ನೀವು ಕಲಿತದ್ದೇನು? ಪಡೆದುಕೊಂಡದ್ದೇನು?
ಉತ್ತಮವಾಗಿ ಸಿದ್ಧಗೊಂಡರೆ ಮುಂದೆ ದೊಡ್ಡ ಸಂಗತಿಗಳನ್ನು ಸಲೀಸಾಗಿ ಎದುರಿಸಬಹುದು. 20 ದಿನಗಳ ಕಾಲ ಈ ಟೂರ್ನಿ ನಡೆದದ್ದು ನನಗೆ ಅನುಕೂಲವಾಯಿತು.

ಕೆಲವು ತಿಂಗಳುಗಳಿಂದ ಟೈಬ್ರೇಕರ್‌ಗಳಲ್ಲಿ ನೀವು ಉತ್ತಮ ಸಾಧನೆ ಮಾಡುತ್ತಿದ್ದೀರಿ. ದೊಡ್ಡ ದೊಡ್ಡ  ಆಟಗಾರರನ್ನೇ ಸೋಲಿಸಿದ್ದೀರಿ. ಇದಕ್ಕೆ ನೀವು ಹೇಗೆ ತಯಾರಾದಿರಿ? ಅದರಲ್ಲೂ ಫೈನಲ್‌ ಪಂದ್ಯದಲ್ಲಿ ಕಾರ್ಲ್ಸನ್‌ ವಿರುದ್ಧ ಯಾವ ತಂತ್ರ ಉಪಯೋಗಿಸಿದಿರಿ?
ಫೈನಲ್‌ ಪಂದ್ಯಕ್ಕೆ ಚೆನ್ನಾಗಿ ತಯಾರಾಗಿದ್ದೆ. ಗೇಮ್‌ 1ರಿಂದಲೇ ನಾನು ನನ್ನ ತಂತ್ರಗಾರಿಕೆ ಅನುಸರಿಸಲು ಆರಂಭಿಸಿದ್ದೆ. ಮ್ಯಾಗ್ನಸ್‌ ಕಾರ್ಲ್ಸನ್‌ ನನ್ನ ಮೇಲೆ ಒತ್ತಡ ಹಾಕುತ್ತಿದ್ದರು. ಆದರೆ ಕಡೆಯ ದಿನದ ಟೈಬ್ರೇಕರ್‌ನ ರ್ಯಾಪಿಡ್‌ ಸುತ್ತಿನಲ್ಲಿ ನನ್ನಿಂದ ಕೆಲವು ತಪ್ಪುಗಳಾದವು. ಹೀಗಾಗಿ ಪಂದ್ಯ ಸೋಲಬೇಕಾಯಿತು.

-ನಿಮ್ಮ ಪಕ್ಕದಲ್ಲೇ ನಿಮ್ಮ ಅಮ್ಮ ಕುಳಿತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ನಿಮ್ಮೊಂದಿಗೆ ಕುಳಿತಿರುವ ಚಿತ್ರ ವೈರಲ್‌ ಆಗಿದೆ. ನಿಮಗೆ ಅಮ್ಮನ ಕಡೆಯಿಂದ ಯಾವ ರೀತಿಯ ಬೆಂಬಲ ಸಿಕ್ಕಿತು?
ಹೌದು, ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಒಂದು ತಿಂಗಳಿಂದ ಇಲ್ಲೇ ಇದ್ದೇನೆ. ಅವರಿಗೂ ದಣಿವಾಗಿದೆ. ದಿನವೂ ನನಗಾಗಿ ಮನೆ ಅಡುಗೆ ಮಾಡಿಕೊಡುತ್ತಿದ್ದರು. ಪ್ರತಿಯೊಂದು ಕಠಿನ ಗೇಮ್‌ ಎದುರಾದಾಗಲೂ ಅವರು ಧೈರ್ಯ ತುಂಬುತ್ತಿದ್ದರು. ನಾವಿಬ್ಬರು ಸಣ್ಣದೊಂದು ವಾಕ್‌ ಮಾಡುತ್ತಿದ್ದೆವು. ಅಮ್ಮ ಕೇವಲ ನನಗಷ್ಟೇ ಅಲ್ಲ, ನನ್ನ ಸಹೋದರಿಗೂ ಅಷ್ಟೇ ಬೆಂಬಲ ನೀಡುತ್ತಿದ್ದರು.

Advertisement

ಕೆಲವು ದಿನಗಳಿಂದ ದೇಶಾದ್ಯಂತ ಎರಡು ವಿಷಯದ ಬಗ್ಗೆ ಚರ್ಚೆ ಇತ್ತು. ಒಂದು ಚೆಸ್‌ ವಿಶ್ವಕಪ್‌ ಫೈನಲ್‌ಗೆ ಹೋಗಿದ್ದ ನೀವು, ಇನ್ನೊಂದು ಚಂದ್ರಯಾನ -3ನಲ್ಲಿದ್ದ ಪ್ರಗ್ಯಾನ್‌ ರೋವರ್‌. ಈ ಬಗ್ಗೆ ನಿಮಗೆ ಏನನಿಸುತ್ತಿದೆ?
ಚಂದ್ರಯಾನ-3ರ ಬಗ್ಗೆ ತೀವ್ರ ಆಸಕ್ತಿ ಇತ್ತು. ಅದು ಚಂದ್ರನಲ್ಲಿ ಇಳಿಯುವಾಗ ನೇರ ಪ್ರಸಾರ ನೋಡಬೇಕು ಎಂಬ ಆಸೆಯೂ ಇತ್ತು. ಆದರೆ ಆಗಲಿಲ್ಲ. ಚಂದ್ರಯಾನ 3ರ ಯಶಸ್ಸು ದೇಶವಾಸಿಗಳಾದ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಈಗ ನನಗೆ ಖುಷಿಯ ವಿಚಾರವೆಂದರೆ, ದೇಶದ ಹಲವಾರು ಮಂದಿ ಈಗ ಚೆಸ್‌ ಆಟವನ್ನು ನೋಡುತ್ತಿದ್ದಾರೆ. ಚೆಸ್‌ ಬಗ್ಗೆ ಆಸಕ್ತಿ ಹೆಚ್ಚಾಗಿದೆ.

ಮ್ಯಾಗ್ನಸ್‌ ಕಾರ್ಲ್ಸನ್‌ ಮತ್ತು ನೀವು ಗ್ಲೋಬಲ್‌ ಚೆಸ್‌ ಲೀಗ್‌ನಲ್ಲಿ ಜತೆಯಾಗಿ ಆಡುತ್ತಿದ್ದಿರಿ. ಅವರ ಜತೆಗೆ ಚೆಸ್‌ ತಂತ್ರಗಳ ಬಗ್ಗೆ ಹಂಚಿಕೊಳ್ಳುತ್ತಿದ್ದೀರಾ?
ನಿರ್ದಿಷ್ಟವಾಗಿ ಇಂಥದ್ದೇ ಎಂದೇನೂ ಇಲ್ಲ. ಅವರು ಜಾಗತಿಕವಾಗಿ ಶ್ರೇಷ್ಠ ಚೆಸ್‌ ಆಟಗಾರ. ಸಾಮಾನ್ಯವಾಗಿ ನಾವಿಬ್ಬರು ಮಾತನಾಡಿಕೊಳ್ಳುತ್ತಿದ್ದೆವು. ಅವರು ಚೆಸ್‌ ಬಗ್ಗೆ ಹೇಗೆ ಯೋಚನೆ ಮಾಡುತ್ತಿದ್ದರು ಎಂಬುದನ್ನು ನಾನು ಗಮನಿಸುತ್ತಿದ್ದೆ. ಇದು ನನಗೊಂದು ಉತ್ತಮ ಅನುಭವ.

ಈಗ ಚೆಸ್‌ ವಿಶ್ವಕಪ್‌ ಮುಗಿದಿದೆ. ಮುಂದಿನ ಯೋಜನೆ ಏನು?
ನಾನು ಇನ್ನಷ್ಟು ಚೆನ್ನಾಗಿ ಚೆಸ್‌ ಆಡುತ್ತೇನೆ ಅಷ್ಟೇ. ಇಲ್ಲಿಂದ ಅಂದರೆ ಅಜರ್‌ಬೈಜಾನ್‌ನ ಬಾಕುವಿನಿಂದ ಜರ್ಮನಿಗೆ ತೆರಳಿ, ಅಲ್ಲಿ ರ್ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ಭಾಗಿಯಾಗುತ್ತೇನೆ.

ಇತ್ತೀಚೆಗೆ ನೀವು ಬಹಳಷ್ಟು ಬದಲಾಗಿದ್ದೀರಿ, ಆತ್ಮವಿಶ್ವಾಸದಿಂದ ಆಟ ಆಡುತ್ತಿದ್ದೀರಿ ಎಂದು ವಿಶ್ವನಾಥನ್‌ ಆನಂದ್‌ ಕೂಡ ಹೇಳಿದ್ದಾರೆ. ನಿಮ್ಮ ಆಟ ಬದಲಾಗಲು ಕಾರಣವೇನು?
ಗ್ಲೋಬಲ್‌ ಟೂರ್ನಿಯಲ್ಲಿ ಬಹಳಷ್ಟು ಕಲಿತೆ. ಹಾಗೆಯೇ ಕಳೆದ ಕೆಲವು ಟೂರ್ನಿಗಳಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದೇನೆ.

ಚೆಸ್‌ ಅಭಿಮಾನಿಗಳಿಗೆ ಮತ್ತು ನಿಮ್ಮ ಅಭಿಮಾನಿಗಳಿಗೆ ಏನಾದರೂ ಸಲಹೆ ಕೊಡುವಿರಾ?
ನಾನು ಹೇಳುವುದು ಇಷ್ಟೇ. ಚೆಸ್‌ ಆಟವನ್ನು ಖುಷಿಯಿಂದ ಆಡಿ.

Advertisement

Udayavani is now on Telegram. Click here to join our channel and stay updated with the latest news.

Next