Advertisement

ಆರೋಗ್ಯಕರ ಮಣ್ಣಿನ ಮಡಿಕೆಗಳತ್ತ ಮತ್ತೆ ಹರಿಯುತ್ತಿದೆ ಚಿತ್ತ 

11:32 AM Nov 14, 2018 | |

ಆಲಂಕಾರು: ಜನತೆಯ ಬದಲಾದ ಜೀವನ ಶೈಲಿಯಲ್ಲಿ ದಿನನಿತ್ಯದ ಉಪಯೋಗಕ್ಕೆ ಉಪಯೋಗಿಸುವ ಪಾತ್ರೆಗಳು ಬದಲಾಗತೊಡಗಿದವು. ಪಾಶ್ಚಾತ್ಯ ಜೀವನ ಶೈಲಿಗೆ ಮಾರು ಹೋಗಿ ಸ್ಟೀಲ್‌, ಅಲ್ಯೂಮಿನಿಯಂ ಪಾತ್ರೆಗಳು ಲಗ್ಗೆಯಿಟ್ಟು ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಉಪಯೋಗಿಸಿಕೊಂಡು ಬರುತ್ತಿದ್ದ ಮಣ್ಣಿನ ಪಾತ್ರೆಗಳು ತೆರೆಮರೆಗೆ ಸರಿಯಿತು. ಇದರಿಂದಾಗಿ ನಮ್ಮಿಂದ ದೂರದಲ್ಲಿದ್ದ ಅನಾರೋಗ್ಯ ಸಾಮೀಪ್ಯಕ್ಕೆ ಬಂತು.

Advertisement

ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಆರೋಗ್ಯದ ದೃಷ್ಟಿಯಿಂದ ಜನತೆ ಮತ್ತೆ ಬದಲಾವಣೆ ಬಯಸಿರುವುದು ವಿಶೇಷವಾಗಿದೆ. ಈಗ ಜನರು ಮಣ್ಣಿನ ಪಾತ್ರೆಗಳಿಗೆ ಮಾರು ಹೋಗಿದ್ದಾರೆ. ಆದರೆ ಜನತೆಯ ಬೇಡಿಕೆಗಳಿಗೆ ತಕ್ಕಂತೆ ಮಡಿಕೆ ತಯಾರಿಸಿ ಕೊಡಲಾಗದೆ ಮಡಿಕೆ ತಯಾರಕರು ಒತ್ತಡದಲ್ಲಿದ್ದಾರೆ. ಮಡಿಕೆಗೆ ಮುಂದಕ್ಕೆ ಬೇಡಿಕೆ ಹೆಚ್ಚಿದಂತೆ ತಯಾರಕರು ಕ್ಷೀಣಿಸಬಹುದು. ಅದಕ್ಕಾಗಿ ಈಗಲೇ ಕುಂಬಾರಿಕೆಗೆ ಸರಕಾರಗಳು ಉತ್ತೇಜನ ನೀಡಬೇಕಿದೆ.

ಬೇಸಗೆಯಲ್ಲಿ ಭಾರಿ ಬೇಡಿಕೆ
ಬೇಸಗೆಯ ಧಗೆ ನೀಗಿಸಲು ಜನ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಬೇಸಗೆಯ ಸಂದರ್ಭ ತಂಪು ನೀರಿಗಾಗಿ ಹಾತೊರೆಯುತ್ತಾರೆ. ಫ್ರಿಡ್ಜ್  ಗಳಲ್ಲಿ ಇಟ್ಟು ಕೃತಕ ತಂಪು ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವುದರಿಂದ ಇದೀಗ ಮಣ್ಣಿನ ಮಡಿಕೆಯಲ್ಲಿ ನೀರು ಸಂಗ್ರಹಿಸಿಟ್ಟು ಕುಡಿಯುವ ಹಂತಕ್ಕೆ ಬಂದಿದ್ದಾರೆ. ಈ ಕಾರಣಕ್ಕಾಗಿ ಬೇಸಗೆ ಬಂತೆಂದರೆ ಮಣ್ಣಿನ ಮಡಿಕೆಗಳಿಗೆ ಭಾರಿ ಬೇಡಿಕೆ ಇರುತ್ತದೆ.

ಶೇಡಿ ಮಣ್ಣನ್ನು ಸುತ್ತ ಹಚ್ಚಿ ಸ್ವಲ್ಪ ನೀರು ಹಾಕಿ ತೇವಾಂಶ ಇರುವಂತೆ ನೋಡಿಕೊಂಡು ಕುಡಿಯುವ ನೀರಿನ ಮಣ್ಣಿನ ಮಡಿಕೆಯನ್ನು ತಯಾರಿಸಲಾಗುತ್ತದೆ. ಇಂತಹ ಮಡಿಕೆಯಲ್ಲಿ ನೀರು ಫ್ರಿಡ್ಜ್ ನೀರಿಗಿಂತಲೂ ತಂಪಾಗಿರುವುದರ ಜತೆಗೆ ಆರೋಗ್ಯಪೂರ್ಣ ನೀರು ನಮ್ಮ ದೇಹ ಸೇರುತ್ತದೆ.

ಮಣ್ಣಿನ ಅಭಾವ
ಪುತ್ತೂರು ತಾಲೂಕಿನಲ್ಲಿ ಎಲ್ಲಿಯೂ ಮಡಿಕೆ ಮಣ್ಣು ಸಿಗದಿರುವುದರಿಂದ ಅನ್ಯ ತಾಲೂಕಿನಿಂದ ಮಣ್ಣು ತರಬೇಕಾದ ಅನಿವಾರ್ಯತೆ ಬಂದೊದಗಿದೆ.ಬೆಳ್ತಂಗಡಿ ತಾ|ನ ದಿಡುಪೆ ಮತ್ತು ಕಾಜೂರು ಎನ್ನುವಲ್ಲಿ ಮಡಿಕೆಗೆ ಬೇಕಾದ ಮಣ್ಣು ದೊರೆಯುತ್ತದೆ. ಈ ಹಿಂದೆ ಆಲಂಕಾರು ಗ್ರಾಮದ ಕೊಂಡಾಡಿ ಕೊಪ್ಪದ ಬಳಿ ಮಣ್ಣು ದೊರೆಯುತ್ತಿತ್ತು. ಆದರೆ ಆ ಜಾಗದಲ್ಲಿ ರಬ್ಬರ್‌ ಬೆಳೆದಿರುವ ಕಾರಣ ಮಣ್ಣು ತೆಗೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೇರೆ ತಾಲೂಕಿಗೆ ಹೋಗಿ ಮಣ್ಣು ತರಬೇಕಾಗಿದೆ.

Advertisement

4 ಮನೆಗಳಲ್ಲಿ ಮಡಿಕೆ ತಯಾರಿ
ಒಂದೊಮ್ಮೆ ಕುಲಕಸುಬಾಗಿ ಮಡಿಕೆ ತಯಾರಿಕೆಯೇ ಕುಂಬಾರರ ಕುಟುಂಬಗಳಿಗೆ ಆಧಾರವಾಗಿತ್ತು. ಆದರೆ ಕಾಲ ಬದಲಾದಂತೆ ಮಡಿಕೆಗೆ ಬೇಡಿಕೆ ಕಡಿಮೆಯಾದಂತೆ ಮಡಿಕೆ ತಯಾರಿಕಾ ಕುಟುಂಬವು ಬದಲಿ ಉದ್ಯೋಗವನ್ನು ಅವಲಂಬಿಸಿತ್ತು. ಆಲಂಕಾರು ಒಂದು ಗ್ರಾಮದಲ್ಲಿ ಈಗಾಗಲೇ 60 ಕುಂಬಾರ ಕುಟುಂಬಗಳಿವೆ. ಈ ಹಿಂದೆ 40 ಕುಟುಂಬದ ಸದಸ್ಯರು ಮಡಿಕೆ ಮಾಡುವುದರ ಮೂಲಕವೇ ಜೀವನ ಸಾಗಿಸುತ್ತಿದ್ದರು. ಆದರೆ ಬದಲಾದ ಕಾಲಘ ಟ್ಟದಲ್ಲಿ ಇದೀಗ ಕೇವಲ 4 ಮನೆಯ ಹಿರಿಯ ಸದಸ್ಯರು ಮಾತ್ರ ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಯಾರಾಗುವ ಪಾತ್ರೆ, ಪರಿಕರಗಳು
ಅನ್ನದ ಮಡಿಕೆ, ಪದಾರ್ಥದ ಪಾತ್ರೆ, ನೀರಿನ ಕೊಡಪಾನ, ಹಂಡೆ, ಭತ್ತ ಬೇಯಿಸುವ ಹಂಡೆ, ಕಾವಲಿ, ಬಾವಡೆ, ದೇಗುಲದ ಮುಗುಳಿ, ಹೂಜಿ ಮೊದಲಾದ ಪಾತ್ರ ಪರಿಕರಗಳು ಮಣ್ಣಿನಿಂದ ಮೂಡಿಬರುತ್ತದೆ.

ಬೇಡಿಕೆ ಇಲ್ಲ
ಮಣ್ಣಿನ ಮಡಿಕೆಗೆ ಬೇಡಿಕೆ ಕಡಿಮೆಯಾಗಲು ಅಡುಗೆ ಅನಿಲವೂ ಮೂಲ ಕಾರಣವಾಗಿದೆ. ಅಲ್ಯೂಮಿನಿಯಂ, ಸ್ಟೀಲ್‌ ಪಾತ್ರೆಗಳಲ್ಲಿ ಅಡುಗೆ ಮಾಡಿದಷ್ಟು ಬೇಗ ಮಣ್ಣಿನ ಮಡಿಕೆ ಬಳಸಿ ಗ್ಯಾಸ್‌ನಲ್ಲಿ ಅಡುಗೆ ಮಾಡಲು ಆಗದು. ಸ್ಟೀಲ್‌ ಪಾತ್ರೆಗಳಿಗೆ ಕಡಿಮೆ ಅನಿಲ ಬಳಸಿ ಅಡುಗೆ ಮಾಡಬಹುದಾಗಿದೆ. ಈ ಕಾರಣಕ್ಕಾಗಿಯೇ ಬೇಡಿಕೆ ಇಲ್ಲ. 

ಮಾಸಿಕ ವೇತನ ಸಿಗಲಿ
ಜೀವನ ಪರ್ಯಂತ ಮಡಿಕೆ ತಯಾರಿಯನ್ನೇ ಕಾಯಕವನ್ನಾಗಿ ಮಾಡಿ ತಮ್ಮ ಇಳಿ ವಯಸ್ಸಿನಲ್ಲಿ ಪುಡಿಗಾಸಿಗೂ ಪರದಾಡಬೇಕಾದ ಅನಿವಾರ್ಯತೆ ಕುಂಬಾರ ಕುಟುಂಬದ್ದಾಗಿದೆ. ಬೇರೆ ಯಾವುದೇ ಕೆಲಸ ಕಾರ್ಯಗಳಲ್ಲಿಯಾದರೆ ಭವಿಷ್ಯನಿಧಿ ಇಳಿ ವಯಸ್ಸಿಗೆ ಆಶ್ರಯವಾಗುತ್ತದೆ. ಆದರೆ ಕುಂಬಾರರಿಗೆ ಇದು ಇಲ್ಲ. ಈ ಕಾರಣಕ್ಕಾಗಿ ಬಾರರ ಗುಡಿ ಕೈಗಾರಿಕಾ ಸಂಘದ ಮೂಲಕ ಎಲ್ಲ ಮಡಿಕೆ ತಯಾರಿಕಾ ಕುಟುಂಬದವರಿಗೆ ಮಾಸಿಕ ವೇತನ ದೊರೆಯುವಂತಾಗಬೇಕು. ಸರಕಾರ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಕುಂಬಾರರ ಹಿತ ಕಾಯುವಂತಾಗಬೇಕು.
ನಾಡ್ತಿಲ ಕೊಪ್ಪ  ಮುತ್ತಪ್ಪ ಕುಂಬಾರ
  ಮಡಿಕೆ ತಯಾರಕ

 ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next