ಕೊಚ್ಚಿ: ಸಂದರ್ಶನದ ವೇಳೆ ವಿದೇಶಿ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ, ದೈಹಿಕ ಕಿರುಕುಳಕ್ಕೆ ಮುಂದಾದ ಆರೋಪದ ಮೇಲೆ ಕೇರಳದ ಖ್ಯಾತ ಯೂಟ್ಯೂಬರ್ ಗೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ʼಮಲ್ಲು ಟ್ರಾವೆಲರ್ʼ ಎನ್ನುವ ಯೂಟ್ಯೂಬ್ ಚಾನೆಲ್ ನ್ನು ಹೊಂದಿರುವ ಶಾಕಿರ್ ಸುಭಾನ್ ಅವರ ವಿರುದ್ಧ ಕೇರಳ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಸೌದಿ ಅರೇಬಿಯಾದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿದೆ. ಈ ಘಟನೆ ಸೆಪ್ಟೆಂಬರ್ 13 ರಂದು (ಬುಧವಾರ) ಕೊಚ್ಚಿಯ ಹೋಟೆಲ್‌ನಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.
ಶಾಕಿರ್ ಕೊಚ್ಚಿಯಲ್ಲಿ ನೆಲೆಸಿರುವ ಸೌದಿ ಅರೇಬಿಯಾದ ಮಹಿಳೆಯೊಂದಿಗೆ ಸಂದರ್ಶನ ನಡೆಸಲು ಹೊಟೇಲ್ ವೊಂದರಲ್ಲಿ ಭೇಟಿ ಆಗಿದ್ದಾರೆ. ಮಹಿಳೆ ತನ್ನ ಭಾವಿ ಪತಿಯೊಂದಿಗೆ ಬಂದಿದ್ದಾರೆ. ಈ ವೇಳೆ ಪತಿ ಹೊರಗೆ ಹೋಗಿದ್ದಾಗ ಯೂಟ್ಯೂಬರ್ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಮುಂದಾಗಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ.
ಆದರೆ ಈ ಆರೋಪವನ್ನು ಯೂಟ್ಯೂಬರ್ ನಿರಾಕರಿಸಿದ್ದು, ಮಹಿಳೆ ಹಾಗೂ ಅವರ ಭಾವಿ ಪತಿ ಆರ್ಥಿಕವಾಗಿ ನೆರವು ಕೇಳಲು ತನ್ನ ಬಳಿ ಬಂದಿದ್ದರು ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿ ಹೇಳಿದ್ದಾರೆ.
ಸದ್ಯ ಯೂಟ್ಯೂಬರ್ ಶಾಕಿರ್ ಕೆನಾಡದಲ್ಲಿದ್ದು, ಅವರು ಕೇರಳಕ್ಕೆ ಕಾಲಿಟ್ಟ ಕೂಡಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ʼಮಲ್ಲು ಟ್ರಾವೆಲರ್ʼ ಚಾನೆಲ್ 2.70 ಮಿಲಿಯನ್ ಗೂ ಅಧಿಕ ಚಂದಾದಾರರನ್ನು ಹೊಂದಿರುವ ಶಾಕಿರ್ ಟ್ರಾವೆಲ್ ವ್ಲಾಗ್ ಗಳಿಂದ ಜನಪ್ರಿಯರಾಗಿದ್ದಾರೆ. ಕೋವಿಡ್ -19 ಸಮಯದಲ್ಲಿ ಕ್ವಾರಂಟೈನ್ ಪ್ರೋಟೋಕಾಲ್‌ಗಳನ್ನು ಹಿಂಬಾಲಿಸಿದ ವಿಡಿಯೋಗಳನ್ನು ಮಾಡಿ ಖ್ಯಾತಿ ಆಗಿದ್ದರು.