Advertisement

ನಿಮಗೇ ತಿರುಗುಬಾಣವಾಗಲಿದೆ, ನೋಡುತ್ತಿರಿ..

12:01 AM Jul 24, 2019 | Team Udayavani |

ವಿಧಾನಸಭೆ: “ನನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಹೋಗಿ ಕೆಲ ತಪ್ಪುಗಳನ್ನು ಮಾಡಿದ್ದರೂ ಒಂದಷ್ಟು ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇದೆ. ಇಂದಿಗೂ ನನ್ನನ್ನು ವಚನಭ್ರಷ್ಟ ಎಂದು ನಿಂದಿಸಿದಾಗ ತೀವ್ರ ನೋವಾಗುತ್ತದೆ. ಈಗ ಮಾಡಿರುವ ಕೃತ್ಯ ಮುಂದೆ ತಿರುಗುಬಾಣವಾಗಲಿದೆ. ಯಡಿಯೂರಪ್ಪ ಅವರು ಸರ್ಕಾರ ರಚಿಸಬಹುದು. ಆದರೆ, ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಬಾಂಬ್‌ ಬೀಳಲಿದೆ. ನೋಡುತ್ತಿರಿ. ನನಗೆ ಅಧಿಕಾರ ಬಿಟ್ಟು ಹೋಗಲು ಯಾವುದೇ ಬೇಸರವಿಲ್ಲ’ ಎಂದು ನಿರ್ಗಮಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಮಂಗಳವಾರ ಮಧ್ಯಾಹ್ನ ವಿಶ್ವಾಸ ಮತ ಯಾಚನೆ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರೆ ಅದಕ್ಕಾಗಿ ವಿಧಾನಸಭಾಧ್ಯಕ್ಷರು ಹಾಗೂ ರಾಜ್ಯದ ಜನತೆಯ ಕ್ಷಮೆಯಾಚಿಸುತ್ತೇನೆ ಎಂದರು. ಜತೆಗೆ, ರಾಜೀನಾಮೆ ನೀಡಿದ ಪಕ್ಷದ ಮೂವರು ಶಾಸಕರ ವಿರುದ್ಧವೂ ಹರಿಹಾಯ್ದ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಮುಂದೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪ್ರಕಟಿಸಿದರು. ಜತೆಗೆ 14 ತಿಂಗಳ ಆಡಳಿತಾವಧಿಯಲ್ಲಿನ ತಮ್ಮ ಕೆಲ ನಡೆಗಳ ಬಗ್ಗೆಯೂ ಸ್ಪಷ್ಟನೆ ನೀಡಿದ್ದು, ವಿದಾಯ ಭಾಷಣ ಮಾಡಿದಂತಿತ್ತು.

ಮಾತು ಆರಂಭಿಸುತ್ತಿದ್ದಂತೆ ಕುಮಾರಸ್ವಾಮಿ, ವಿಶ್ವಾಸ ಮತ ಯಾಚನೆಗೆ ನಾಲ್ಕು ದಿನ ಸಮಯ ತೆಗೆದುಕೊಂಡಿದ್ದಕ್ಕೆ ಸ್ವಲ್ಪ ಸ್ವಾರ್ಥ, ಜತೆಗೆ ವಿಶ್ವಾಸವಿತ್ತು. ತಪ್ಪು ಮಾಡುವುದು ಸಹಜ. ಮನಸ್ಸು ಬದಲಾಯಿಸಿ ವಾಪಸಾಗುವ ನಿರೀಕ್ಷೆ ಇತ್ತು. ಆದರೆ, ಸ್ಪೀಕರ್‌ ಪೀಠಕ್ಕೆ ಅಗೌರವ ತೋರುವ ಉದ್ದೇಶವಿರಲಿಲ್ಲ. ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಹಾಗೆಯೇ ನಾಡಿನ ಜನರ ಕ್ಷಮೆ ಕೋರುತ್ತೇನೆ. ಮೊದಲ ಬಾರಿ ಆಯ್ಕೆಯಾದ ಶಾಸಕರು ಕಣ್ಣೀರು ಹಾಕಿದ್ದರಿಂದ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡಿದೆ. ಸಂತೋಷದಿಂದಲೇ ಸ್ಥಾನ ತ್ಯಜಿಸಲು ಸಿದ್ಧನಿದ್ದೇನೆ. ನನಗೆ ಯಾವ ದು:ಖವಿಲ್ಲ ಎಂದು ಹೇಳಿದರು.

ನಮ್ಮ ಕುಟುಂಬ ಬಂದಿರುವುದು ರೈತರಿಂದ, ಉಳಿದಿರುವುದು ರೈತರಿಂದ. ರಾಜಕೀಯ ಕ್ಷೇತ್ರ ಪ್ರವೇಶಿಸುವುದಕ್ಕೆ ನನ್ನ ತಂದೆ ಹಾಗೂ ಪತ್ನಿಗೆ ಒಪ್ಪಿಗೆ ಇರಲಿಲ್ಲ. ಇದೇ ಕಾರಣಕ್ಕೆ ತಂದೆ ಮೊದಲಿನಿಂದಲೂ ಈ ವಿಚಾರವಾಗಿ ನನಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಅವರ ಪೂರ್ತಿ ಆಶೀರ್ವಾದ ರೇವಣ್ಣನ ಮೇಲಿತ್ತು. ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದವನು. ನನ್ನ ತಪ್ಪು ನಿರ್ಧಾರಗಳ ಬಗ್ಗೆ ಟೀಕೆ ಮಾಡಲಿ. ಆದರೆ, ತಂದೆ ಎಚ್‌.ಡಿ.ದೇವೇಗೌಡರ ಬಗ್ಗೆ ಹಗುರ ಮಾತು, ನಿಂದನೆ ಬೇಡ ಎಂದು ಕಟುವಾಗಿ ಹೇಳಿದರು.

ರಾಜ್ಯದ ರೈತರ ಸಾಲ ಮನ್ನಾಗೆ 23,500 ಕೋಟಿ ರೂ.ಕಾಯ್ದಿರಿಸಿ ಕ್ರಮ ಕೈಗೊಂಡಿದ್ದೇನೆ. ರೈತರಿಗೆ ನನ್ನಿಂದ ಮೋಸವಾಗಿಲ್ಲ. ಕೊಡಗಿನಲ್ಲಿ ನೆರೆ ಸಂಭವಿಸಿದಾಗಲೂ ಮತ ಹಾಕಿಲ್ಲ ಎಂದು ನಿರ್ಲಕ್ಷಿಸದೆ ಎಲ್ಲ ರೀತಿಯ ನೆರವು ನೀಡುವ ಕೆಲಸ ಮಾಡಿದ್ದೇನೆ. ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ತಾಯಿ ಎದುರೇ ಶಾಲಾ ಮಗು ಕೊಚ್ಚಿ ಹೋಗಿದ್ದ ಘಟನೆ ಬಳಿಕ ರಾಜ್ಯದಲ್ಲಿ 1508 ಕಾಲು ಸಂಕ ನಿರ್ಮಿಸಿ 187 ಕೋಟಿ ರೂ.ವೆಚ್ಚ ಮಾಡಲಾಗಿದೆ. 1000 ಸರ್ಕಾರಿ ಇಂಗ್ಲಿಷ್‌ ಶಾಲೆ ಆರಂಭಿಸಲಾಯಿತು. ಔರಾದ್ಕರ್‌ ಸಮಿತಿ ವರದಿ ಜಾರಿಗೊಳಿಸಿ ಪೊಲೀಸರ ವೇತನ ಹೆಚ್ಚಳ ಮಾಡಲಾಗಿದೆ ಎಂದರು.

Advertisement

ಅತೃಪ್ತರ ವಿರುದ್ಧ ಆಕ್ರೋಶ: ಮೈತ್ರಿ ಸರ್ಕಾರದಿಂದ ರಾಕ್ಷಸ ರಾಜಕಾರಣ ನಡೆಯುತ್ತಿದೆ ಎಂದು ಎಚ್‌.ವಿಶ್ವನಾಥ್‌ ಹೇಳಿರುವುದು ತೀವ್ರ ನೋವು ತಂದಿದೆ. ಅವರು ಪಕ್ಷಕ್ಕೆ ಸೇರಿದ ಮೇಲೆ ಅವರೊಂದಿಗೆ ಹೆಚ್ಚು ಒಡನಾಟ ನಡೆಸಿದ ಬಳಿಕ ಅವರ ಒಳಗೊಂದು, ಹೊರಗೊಂದು ಮನೋಭಾವ ಗೊತ್ತಾಯಿತು. ಅವರನ್ನು ಸಂಸದೀಯ ಪಟು ಎಂದು ಕರೆಯಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಗೋಪಾಲಯ್ಯ ಎರಡನೇ ಬಾರಿಗೆ ನಮಗೆ ಟೋಪಿ ಹಾಕಿದ್ದಾರೆ. ಅವರ ಸಹೋದರನ ವಿರುದ್ಧದ ಕೊಲೆ ಪ್ರಕರಣದಲ್ಲಿ ರಕ್ಷಣೆ ಮಾಡಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ನಾನು ಎಂದೂ ವೈಯಕ್ತಿಕವಾಗಿ ಸ್ಥಾನ ದುರುಪಯೋಗಪಡಿಸಿಕೊಂಡಿಲ್ಲ. ನೀವು (ಬಿಜೆಪಿ) ಕರೆಸಿಕೊಂಡಿದ್ದೀರಲ್ಲಾ ರಕ್ಷಣೆ ಕೊಡಿ ಎಂದು ಹೇಳಿದರು.

ಇನ್ನು ಕೆ.ಆರ್‌.ಪೇಟೆ ನಾರಾಯಣ ಗೌಡ ಒಮ್ಮೆ ನಮ್ಮ ತಂದೆಯ ನಿವಾಸಕ್ಕೆ ನಾಲ್ಕೈದು ಪ್ರಮುಖ ನಾಯಕರೊಂದಿಗೆ ಬಂದಿದ್ದರಂತೆ. ತಂದೆಯವರ ಕೊಠಡಿಗೆ ಹೋಗಿ ಸೂಟ್‌ಕೇಸ್‌ ಇಟ್ಟು ಮಾತಾಡಿ ಬಂದಿದ್ದಾರೆ. ನಂತರ ಗನ್‌ಮ್ಯಾನ್‌ಗಳು ಪರಿಶೀಲಿಸಿದಾಗ ಖಾದಿ ಪಂಚೆ, ಜುಬ್ಬಾ ಬಟ್ಟೆ ಇತ್ತು. ಆದರೆ, ಜತೆಯಲ್ಲಿದ್ದವರಿಗೆ ಏನೋ ಕೊಟ್ಟು ಬಂದಿದ್ದಾರೆ ಎಂದು ಬಿಂಬಿಸುವ ಗಿರಾಕಿ ಎಂದು ಕಿಡಿ ಕಾರಿದರು.

ರಾಜೀನಾಮೆ ಸಲ್ಲಿಸಲು ವಿಶ್ವನಾಥ್‌ ಬಂದಾಗ ನೀವು ಸಂಸದರು, ಸಚಿವರು, ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದವರು, ರಾಜೀನಾಮೆಯನ್ನು ಯಾವ ನಮೂನೆಯಡಿ ಸಲ್ಲಿಸಬೇಕೆಂದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದೆ. ಅದಕ್ಕೆ ಉದ್ದೇಶ ಒಂದೇ ಅಲ್ಲವೇ ಎಂದರು. ರಾಜೀನಾಮೆ ಹೇಗೆ ಕೊಡಬೇಕು ಎಂದು ಗೊತ್ತಿಲ್ಲದವರು ಅಥವಾ ಗೊತ್ತಿದ್ದರೂ ಬೇರೆ ರೀತಿ ಸಲ್ಲಿಸಿದವರು, ಗಂಟು ಕಟ್ಟಿಕೊಂಡು ಹೊರಟವರು ನನ್ನ ಬಗ್ಗೆ ವ್ಯಾಖ್ಯಾನ ಮಾಡಬೇಕೆ? 100 ಜನ್ಮ ಎತ್ತಿ ಬಂದರೂ ನನ್ನಂತೆ ಬದುಕಲು ಸಾಧ್ಯವಿಲ್ಲ.
-ಕೆ.ಆರ್‌.ರಮೇಶ್‌ ಕುಮಾರ್‌, ಸ್ಪೀಕರ್‌

ನೀವು ಸರ್ಕಾರ ರಚಿಸಬಹುದು. ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಬಾಂಬ್‌ ಬೀಳಲಿದೆ. ನಾನು ನೋಡುತ್ತೇನೆ. ಇನ್ನು ಮುಂದೆಲ್ಲಾ ನಿಮ್ಮ ಕಡೆ ಶುರುವಾಗಲಿದೆ.
-ಎಚ್‌.ಡಿ.ಕುಮಾರಸ್ವಾಮಿ

ಬಿಜೆಪಿ ವಿರುದ್ಧ ಕಿಡಿ
* ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ವಚನಭ್ರಷ್ಟ ಎಂದು ನಿಂದಿಸಿದೆ. ನಿಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಿ. ಈ ಹಿಂದೆ 20-20 ತಿಂಗಳ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಏನೆಲ್ಲಾ ಆಯಿತು. ಬಿಜೆಪಿ ರಾಷ್ಟ್ರೀಯ ನಾಯಕರಾದ ರಾಜನಾಥ ಸಿಂಗ್‌, ಯಶವಂತ ಸಿನ್ಹಾ ಅವರು ಬೆಂಗಳೂರಿಗೆ ಬಂದು ಚರ್ಚಿಸಿದ್ದು, ಅಧಿಕಾರ ಹಸ್ತಾಂತರಿಸಲು ಕೆಲ ಷರತ್ತುಗಳಿಗೆ ಸಹಿ ಹಾಕುವಂತೆ ಕೋರಿದ ಮನವಿಗೆ ಒಪ್ಪದಿದ್ದುದು ನೆನಪಿಸಿಕೊಳ್ಳಲಿ. ಪದೇ ಪದೇ ವಚನಭ್ರಷ್ಟ ಎಂದು ಟೀಕಿಸದಂತೆ ನಿಮ್ಮ ಕಾರ್ಯಕರ್ತರಿಗೆ ಹೇಳಿ.

* ನನ್ನನ್ನು ರಾಮನಗರ, ಮಂಡ್ಯ, ಹಾಸನ ಮುಖ್ಯಮಂತ್ರಿ ಎಂದು ಟೀಕಿಸಲಾಯಿತು. ಬೆಂಗಳೂರಿನ ಅಭಿವೃದ್ಧಿಗಾಗಿ 1.03 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸಬ್‌ಅರ್ಬನ್‌, ಎಲಿವೇಟೆಡ್‌ ಕಾರಿಡಾರ್‌ ಇತರ ಯೋಜನೆಗಳೂ ಸೇರಿವೆ.

* ತಾಜ್‌ ವೆಸ್ಟ್‌ಎಂಡ್‌ನ‌ಲ್ಲಿ ಇರುವುದಕ್ಕೂ ಬಿಜೆಪಿ ಟೀಕಿಸುತ್ತದೆ. ಹೌದು, ತಾಜ್‌ ವೆಸ್ಟ್‌ಎಂಡ್‌ನ‌ಲ್ಲಿ ನನ್ನ ಒಂದು ಕೊಠಡಿ ಇದೆ. ಕಳೆದ ವಿಧಾನಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾದಾಗ ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್‌ ಅವರು ಕರೆ ಮಾಡಿ ಮುಖ್ಯಮಂತ್ರಿಯಾಗಿ ಸರ್ಕಾರ ಮುನ್ನಡೆಸುವಂತೆ ಕೋರಿದಾಗ ಆ ಕೊಠಡಿಯಲ್ಲೇ ಇದ್ದೆ. ಅದು ಅದೃಷ್ಟದ ಕೊಠಡಿ ಎಂಬ ಕಾರಣಕ್ಕೆ ಅಲ್ಲೇ ವಾಸ್ತವ್ಯ ಮುಂದುವರಿಸಿದ್ದೆ. ಆದರೆ, ಹೋಟೆಲ್‌ನಲ್ಲಿ ಕುಳಿತು ವ್ಯವಹಾರ ನಡೆಸಿಲ್ಲ. ನಾನು ಸರ್ಕಾರಿ ವಾಹನವನ್ನೂ ಪಡೆಯದೆ ಖಾಸಗಿ ಕಾರು ಬಳಸುತ್ತಿದ್ದೇನೆ. ಪೆಟ್ರೋಲ್‌ ಕೂಡ ಸರ್ಕಾರದಿಂದ ಹಾಕಿಸಿಲ್ಲ. ಯಾವುದೇ ಭತ್ಯೆಗಳನ್ನು ಪಡೆದಿಲ್ಲ.

* ಐಎಂಎ ಪ್ರಕರಣದ ಮನ್ಸೂರ್‌ ಖಾನ್‌ನನ್ನು ನಮ್ಮ ಅಧಿಕಾರಿಗಳು ದುಬೈನಿಂದ ಕರೆ ತಂದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕರೆದುಕೊಂಡು ಹೋಗಿದ್ದೇಕೆ? ಯಾರನ್ನೆಲ್ಲಾ ಈ ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಕರೆದೊಯ್ಯಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ನಾನು ಉಳಿದುಕೊಂಡಿದ್ದ ಹೋಟೆಲ್‌ನಲ್ಲೂ ಐಟಿ ದಾಳಿ ನಡೆದಿತ್ತು. ಎಲ್ಲಿ ಹೋದರು ಐಟಿಯವರು?

* ಬಿಜೆಪಿಯ ಸಿ.ಟಿ.ರವಿಯವರು ಎಲ್ಲರೂ ಬಿಜೆಪಿ ಸೇರಿದರೆ ಯೋಗ್ಯತೆಗೆ ತಕ್ಕಂತೆ ಸ್ಥಾನ ನೀಡುವುದಾಗಿ ಸದನದಲ್ಲಿ ಕರೆ ಕೊಟ್ಟಿದ್ದಾರೆ. ಯಾವ ರೀತಿಯ ಯೋಗ್ಯತೆ ಬಯಸುತ್ತೀರಿ ರವಿಯವರೇ…

ಎಚ್‌.ವಿಶ್ವನಾಥ್‌ ಮಾತುಗಳಿಂದ ತೀವ್ರ ನೋವಾಗಿದೆ. ಅವರು ಸಾ.ರಾ.ಮಹೇಶ್‌ ಬಗ್ಗೆ ಬಳಸಿರುವ ಪದಗಳು ತೀವ್ರ ನೋವು ತಂದಿದೆ. ಅವರ ಸಂಭಾಷಣೆ ನಡೆಸಿರುವ ಧ್ವನಿಸುರುಳಿಯೊಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದು, ಕೇಳಿದರೆ ವಾಂತಿ ಬರುವಂತಿದೆ. ವಿಶ್ವನಾಥ್‌ರಂತಹ ಯೋಗ್ಯತೆಯವರು ಬೇಕಾ ರವಿಯವರೇ, ಅದಕ್ಕಾಗಿ ರಾಜೀನಾಮೆ ಕೊಡಿಸಿ ನಿಮ್ಮ ಕಡೆ ಕರೆದುಕೊಳ್ಳುತ್ತಿದ್ದೀರಾ…

ಮಾಧ್ಯಮಗಳ ವಿರುದ್ದ ಆಕ್ರೋಶ: ತಮ್ಮ ಭಾಷಣದಲ್ಲಿ ಕುಮಾರಸ್ವಾಮಿ ಮಾಧ್ಯಮಗಳು ಅದರಲ್ಲೂ ಸುದ್ದಿವಾಹಿನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುದ್ರಣ ಮಾಧ್ಯಮದವರು ಸ್ವಲ್ಪ ಗೌರವ ಉಳಿಸಿಕೊಂಡಿದ್ದಾರೆ. ಆದರೆ 15-20 ಸುದ್ದಿ ವಾಹಿನಿಗಳಿದ್ದು, ನಿಮ್ಮ ಮಾಧ್ಯಮವನ್ನು ನಡೆಸಲು ದೇಶವನ್ನು ಯಾಕೆ ಹಾಳು ಮಾಡುತ್ತೀರಿ? ನಿನ್ನೆ ರಾತ್ರಿ 12.30ಕ್ಕೆ ಜೆ.ಪಿ.ನಗರ ನಿವಾಸಕ್ಕೆ ಹಿಂತಿರುಗುತ್ತಿದ್ದರೆ ಸುದ್ದಿವಾಹಿನಿ ವಾಹನವೊಂದು ಹಿಂಬಾಲಿಸುತ್ತಿತ್ತು. ನಮಗೇನು ಖಾಸಗಿ ಬದುಕಿಲ್ಲವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಣಕಾಸು ವಿಧೇಯಕ ಮಂಡನೆಗೆ ಮನವಿ: ಹಣಕಾಸು ವಿಧೇಯಕ ಮಂಡನೆಯಾಗಬೇಕಿದ್ದು, ಎಲ್ಲರೂ ಒಪ್ಪಿದರೆ ಮಂಡಿಸಲಾಗುವುದು. ನಂತರ ಬದಲಾವಣೆಗೆ ಅವಕಾಶವಿರಲಿದೆ ಎಂದು ಕುಮಾರಸ್ವಾಮಿ ಕೋರಿದರು. ಈ ಬಗ್ಗೆ ಸ್ಪೀಕರ್‌ ಪ್ರತಿಪಕ್ಷ ನಾಯಕರ ಅಭಿಪ್ರಾಯ ಕೇಳಿದಾಗ ಯಡಿಯೂರಪ್ಪ ಅವರು ಸಮ್ಮತಿ ಇಲ್ಲ ಎಂದು ಹೇಳಿದರು. ಬಳಿಕ ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚನೆ ಪ್ರಕ್ರಿಯೆಗೆ ಮುಂದಾದರು.

ಶಾಸಕರ ಕ್ಷೇತ್ರಗಳಿಗೆ ಮೈತ್ರಿ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತ
-ರಮೇಶ್‌ ಜಾರಕಿಹೊಳಿ-ಗೋಕಾಕ- 262 ಕೋಟಿ ರೂ.
-ಮಹೇಶ ಕುಮಟಳ್ಳಿ-ಅಥಣಿ- 157 ಕೋಟಿ ರೂ.
-ಪ್ರತಾಪಗೌಡ ಪಾಟೀಲ್‌-ಮಸ್ಕಿ- 517 ಕೋಟಿ ರೂ.
-ಬಿ.ಸಿ.ಪಾಟೀಲ್‌-ಹೀರೆಕೇರೂರು- 147 ಕೋಟಿ ರೂ.
-ಶಿವರಾಮ್‌ ಹೆಬ್ಬಾರ್‌-ಯಲ್ಲಾಪುರ- 413 ಕೋಟಿ ರೂ.
-ಎಸ್‌.ಟಿ. ಸೋಮಶೇಖರ್‌-ಯಶವಂತಪುರ- 415 ಕೋಟಿ ರೂ.
-ಮುನಿರತ್ನ-ರಾಜರಾಜೇಶ್ವರಿನಗರ- 559 ಕೋಟಿ ರೂ.
-ಬೈರತಿ ಬಸವರಾಜ್‌-ಕೆ.ಆರ್‌.ಪುರ- 339 ಕೋಟಿ ರೂ.
-ಡಾ.ಸುಧಾಕರ್‌-ಚಿಕ್ಕಬಳ್ಳಾಪುರ- 136 ಕೋಟಿ ರೂ.
-ಎಂ.ಟಿ.ಬಿ ನಾಗರಾಜ್‌-ಹೊಸಕೋಟೆ- 132 ಕೋಟಿ ರೂ.
-ಆನಂದಸಿಂಗ್‌-ವಿಜಯನಗರ (ಹೊಸಪೇಟೆ)- 179 ಕೋಟಿ ರೂ.
-ಎಚ್‌. ವಿಶ್ವನಾಥ್‌-ಹುಣಸೂರು- 304 ಕೋಟಿ ರೂ.
-ನಾರಾಯಣಗೌಡ-ಕೆ.ಆರ್‌.ಪೇಟೆ- 474 ಕೋಟಿ ರೂ.
-ಗೋಪಾಲಯ್ಯ-ಮಹಾಲಕ್ಷ್ಮೀ ಲೇಔಟ್‌- 424 ಕೋಟಿ ರೂ.
-ಎಚ್‌.ನಾಗೇಶ-ಮುಳಬಾಗಿಲು (ಪಕ್ಷೇತರ)- 303 ಕೋಟಿ ರೂ.
-ಆರ್‌.ಶಂಕರ್‌-ರಾಣೆಬೆನ್ನೂರು (ಕೆಪಿಜೆಪಿ)- 113 ಕೋಟಿ ರೂ.

“ಉದಯವಾಣಿ’ ಪ್ರಸ್ತಾಪಿಸಿದ ಕುಮಾರಸ್ವಾಮಿ: ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚರ್ಚೆ ವೇಳೆ ಎಚ್‌.ಡಿ.ಕುಮಾರಸ್ವಾಮಿಯವರು “ಉದಯವಾಣಿ’ ಸಂಪಾದಕೀಯ ಬರಹವನ್ನು ಉಲ್ಲೇಖೀಸಿದರು. ಇಡೀ ನಾಟಕದ ಹಿಂದೆ ಬಿಜೆಪಿ ಪಾತ್ರವಿದ್ದರೂ ಅದನ್ನು ತೋರಿಸಿಕೊಳ್ಳದೆ ತಟಸ್ಥವಾಗಿ ಉಳಿದಿರುವುದಾಗಿ ತೋರಿಸಿಕೊಳ್ಳುತ್ತಿದೆ. ಇದರ ಹಿಂದೆ ವ್ಯವಸ್ಥಿತ ಕಾರ್ಯ ತಂತ್ರ ನಡೆದಿದೆ. ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಯ ಹಾದಿ ಸುಗಮಗೊಳಿಸಿದ್ದಾರೆ. ಆದರೆ, ತಮ್ಮ ಪಕ್ಷಕ್ಕೆ ನಿಷ್ಠರಾಗಿಲ್ಲದವರು ಮುಂದೆ ಬಿಜೆಪಿಗೆ ನಿಷ್ಠರಾಗಿರುವರೇ ಎಂಬ ಪ್ರಶ್ನೆ ಮೂಡುತ್ತದೆ. ಅವಕಾಶವಾದಿ ರಾಜಕಾರಣವನ್ನು ಪಾರಂಗತ ಮಾಡಿಕೊಂಡವರನ್ನು ನಂಬಿಕೊಂಡು ಸರ್ಕಾರ ರಚಿಸುವುದೆಂದರೆ ಹೇಗೆ. ಒಟ್ಟಾರೆ ಮೂರೂ ಪಕ್ಷಗಳ ಅವಕಾಶವಾದಿ ರಾಜಕಾರಣ ಬಯಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next