Advertisement

“ಧ್ಯಾನದ ವೇಳೆ ಉಗ್ರರು ದೇಶದೊಳಗೆ ಬಂದಂತೆ ಗೋಚರವಾಯ್ತು’

06:41 AM Apr 28, 2019 | Team Udayavani |

ಬೆಂಗಳೂರು/ಮಹದೇವಪುರ: “ಏಕಾಂತದಲ್ಲಿ ಧ್ಯಾನ ಮಾಡುವಾಗ ತಮಿಳುನಾಡಿನ ರಾಮನಾಥಪುರಕ್ಕೆ 19 ಮಂದಿ ಉಗ್ರರು ಪ್ರವೇಶಿಸಿದ್ದಾರೆ ಎಂಬುದು ಗೋಚರವಾಯಿತು. ಹೀಗಾಗಿ, ಕೂಡಲೇ ದೇಶದ ಭದ್ರತೆ ಕಾಪಾಡುವ ಉದ್ದೇಶದಿಂದ ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆ.’

Advertisement

ಇದು, ಶುಕ್ರವಾರ ಸಂಜೆ ತಮಿಳುನಾಡಿಗೆ ಉಗ್ರರು ನುಸುಳಿದ್ದಾರೆಂದು ನಗರ ಪೊಲೀಸ್‌ ಸಹಾಯವಾಣಿಗೆ ಹುಸಿ ಕರೆ ಮಾಡಿ, ಇದೀಗ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಮಾಜಿ ಯೋಧ ಹೊಸಕೋಟೆಯ ಆವಲಹಳ್ಳಿ ಮುನಿವೆಂಕಟೇಶ್ವರ ಲೇಔಟ್‌ ನಿವಾಸಿ ಸುಂದರಮೂರ್ತಿಯ ತಪ್ಪೊಪ್ಪಿಗೆ ಹೇಳಿಕೆ.

ಯರಕಾಡನ ಮೂಲದ ಸುಂದರಮೂರ್ತಿ 1984ರಲ್ಲಿ ಸೇನೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಂಟು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ 1992ರಲ್ಲಿ ನಿವೃತ್ತಿ ಹೊಂದಿದ್ದ. ನಂತರ, ಟಿಪ್ಪರ್‌ ಚಾಲಕನಾಗಿ ನಗರದಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿಯ ಮೂವರು ಮಕ್ಕಳ ಪೈಕಿ ಮೂರನೇ ಪುತ್ರನ ಜತೆ ಮುನಿವೆಂಕಟೇಶ್ವರ ಲೇಔಟ್‌ನಲ್ಲಿ ವಾಸಿಸುತ್ತಿದ್ದ.

ಮದ್ಯದ ಚಟ ಅಂಟಿಸಿಕೊಂಡಿರುವ ಸುಂದರಮೂರ್ತಿ, ಸಂಜೆ ಕೆಲಸ ಮುಗಿದ ಬಳಿಕ ಪ್ರತಿನಿತ್ಯ ಕುಡಿಯುತ್ತಿದ್ದ. ಮದ್ಯದ ಅಮಲಿನಲ್ಲಿ ಪೊಲೀಸ್‌ ಸಹಾಯವಾಣಿಗೆ ಸುಳ್ಳು ಮಾಹಿತಿ ನೀಡಿದ್ದಾನೆಂದು ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಹೇಳಿದರು.

ಈ ಹಿಂದೆಯೂ ಕರೆ: ಆರೋಪಿ ಮದ್ಯದ ಅಮಲಿನಲ್ಲಿ ಈ ಹಿಂದೆ ಕರೆ ಮಾಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದ್ದು, ನಾಗಪಟ್ಟಣಂನಿಂದ ಚೆನ್ನೈನ ಕಂಟ್ರೋಲ್‌ ರೂಂಗೆ ಈತನೇ ಕರೆ ಮಾಡಿರುವ ಸಾಧ್ಯತೆಯಿದೆ. ಈ ಸಂಬಂಧ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶ್ರೀಲಂಕಾದಲ್ಲಿ ಸರಣಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಈ ರೀತಿ ಕರೆ ಮಾಡಿ ತೊಂದರೆ ಕೊಡುವ ಉದ್ದೇಶದಿಂದಲೇ ಆರೋಪಿ ಕೃತ್ಯ ಎಸಗಿದ್ದಾನೆಂದು ಅಲೋಕ್‌ ಕುಮಾರ್‌ ಹೇಳಿದರು.

Advertisement

“ನನ್ನ ಕನಸಿನಲ್ಲಿ ದೇವರು ಬರುತ್ತಿದ್ದ. ರಾಮನಾಥಪುರಂನಲ್ಲಿ ಸ್ಫೋಟ ಮಾಡುತ್ತಾರೆ ಎನ್ನುವುದು ಗೊತ್ತಾಯಿತು. ಧ್ಯಾನದಲ್ಲಿ ಉಗ್ರರು ದೇಶಕ್ಕೆ ಕಾಲಿಟ್ಟಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ, ಎಚ್ಚರಿಕೆ ನೀಡಲು ಕರೆ ಮಾಡಿದ್ದೆ’. ಎಂದು ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡಿದ್ದಾನೆ ಎಂದು ಅವರು ಹೇಳಿದರು.

ಸುಳಿವು ನೀಡಿದ ಮೊಬೈಲ್‌: ಪ್ರಕರಣ ಸಂಬಂಧ ತನಿಖೆ ಕೈಗೊಂಡ ಸಿಸಿಬಿ ಎಸಿಪಿ ಲಕ್ಷ್ಮೀ ನಾರಾಯಣ್‌ ನೇತೃತ್ವದ ತಂಡಕ್ಕೆ ಆರೋಪಿಯು ಲಾರಿಯಲ್ಲಿ ತಮಿಳುನಾಡಿನ ಕಡೆ ಹೋಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಬೆಂಗಳೂರು ಗ್ರಾಮಾಂತರ ಎಸ್‌.ಪಿ ರಾಮ್‌ನಿವಾಸ್‌ ಸಪೆಟ್‌ ಹಾಗೂ ಕೋಲಾರ ಎಸ್‌.ಪಿ ಅವರಿಗೆ ಮಾಹಿತಿ ರವಾನಿಸಲಾಗಿತ್ತು.

ಬಳಿಕ, ಮೊಬೈಲ್‌ ಟವರ್‌ ಲೊಕೇಶನ್‌ ಆಧರಿಸಿ ಸ್ಥಳ ಪರಿಶೀಲಿಸಿದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗೀತಾ ಆಸ್ಪತ್ರೆ ಬಳಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂತು. ಆತನ ಮೊಬೈಲ್‌ಗೆ ಪೊಲೀಸರು ಕರೆ ಮಾಡಿದಾಗ ತಮಿಳಿನಲ್ಲಿ ಕಾಲರ್‌ ಟ್ಯೂನ್‌ ಕೇಳಿ ಬಂದಿತ್ತು.

ಆದರೆ, ಆತ ಕರೆ ಸ್ವೀಕರಿಸಿರಲಿಲ್ಲ. ನಂತರ, ಆರೋಪಿ ಫೋನ್‌ ಸ್ವಿಚ್ಡ್ ಆಫ್ ಮಾಡಿದ್ದ. ನಂತರ, ತಾಂತ್ರಿಕ ಕಾರ್ಯಾಚರಣೆ ನಡೆಸಿ ರಾತ್ರಿ 9 ಗಂಟೆಗೆ ಸುಮಾರಿಗೆ ಆರೋಪಿಯನ್ನು ಬಂಧಿಸಲಾಗಿದೆ. ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮನಾದ ಪುತ್ರ: ಆರೋಪಿಯ ಮೂವರು ಮಕ್ಕಳಲ್ಲಿ ಇಬ್ಬರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಪೈಕಿ ಒಬ್ಬ ಪುತ್ರ 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ಮತ್ತೂಬ್ಬ ಪುತ್ರ ಈಗಲೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next