ದಾವಣಗೆರೆ: ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹೊಡೆದಾಡಿಕೊಂಡು ಇರ್ತಾರೆ. ನಾವೆಲ್ಲರೂ ಸುಮ್ಮನೆ ನೋಡಿಕೊಂಡು ಇರೋಣ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, “ಯಡಿಯೂರಪ್ಪ… ಸಿದ್ದರಾಮಯ್ಯ… ಕುಮಾರಸ್ವಾಮಿ ಯಾಕ್ ಅವರ ಸುದ್ದಿ… ಅವರವರು ಹೊಡೆದಾಡಿಕೊಂಡಿರಲಿ. ನಾವ್ ಸುಮ್ಮನೆ ನೋಡೋಣ’ ಎಂದರು.
ಎಲ್ಲೇ ಹೋದರೂ ಯಡಿಯೂರಪ್ಪ, ಸರ್ಕಾರ ಬರೀ ಇದರಲ್ಲೇ ಇರ್ತೀರಿ. ಅದನ್ನು ಬಿಡ್ರಿ ಸಾಕು. ಮುಂದೆ ಎಲ್ಲಾ ಸರಿಹೋಗುತ್ತೆ. ಏನೂ ಆಗಲ್ಲ. ಎಲ್ಲಾ ನೀವೇ ಹುಟ್ಟು ಹಾಕ್ತೀರಾ ಎಂದು ಮಾಧ್ಯಮದವರ ಮೇಲೆಯೇ ಆರೋಪ ಹೊರಿಸಿದರು.
ಮೈತ್ರಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ನಿಮಗೇನಾದರೂ ಮುಖಂಡರಿಂದ ಕರೆ ಬಂದಿದೆಯಾ? ಎಂಬ ಪ್ರಶ್ನೆಗೆ, ನನ್ನನ್ನು ಯಾರೂ ಕರೆದಿಲ್ಲ. ಬೆಂಗಳೂರಿಗೆ ಬನ್ನಿ ಎಂಬುದಾಗಿ ಕರೆ ಬಂದಿಲ್ಲ ಎಂದು ತಿಳಿಸಿದರು.
ರಾಮಲಿಂಗಾರೆಡ್ಡಿ ಅವರೂ ನನ್ನಂಗೆ ಸೀನಿಯರ್. 5-6 ಬಾರಿ ಶಾಸಕರಾಗಿದ್ದಾರೆ. ಮಂತ್ರಿ ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರ ಮಗಳಿಗೂ ಟಿಕೆಟ್ ಕೊಟ್ಟಿದ್ದಾರೆ. ಆದರೂ, ರಾಜೀನಾಮೆ ಏಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಎಲ್ರಿಗೂ ಆಸೆ ಇರುತ್ತಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುತ್ತಾರೋ ಎಂಬ ಪ್ರಶ್ನೆಗೆ, “ಸಿದ್ರಾಮಯ್ಯರನ್ನು ಸಿಎಂ ಮಾಡೋರ್ಯಾರು? ಮೆಜಾರ್ಟಿ ಸಿಕ್ರೆ ಆಗ್ಲಿ’ ಎಂದರು.