Advertisement

ನೋಡಿ ಪ್ಲ್ಯಾನ್‌ ಮಾಡಿ

10:25 AM Mar 17, 2020 | mahesh |

ಮನೆಯ ವಿನ್ಯಾಸ ಮಾಡುವಾಗ ನಮಗೆ ಅಕ್ಕಪಕ್ಕದವರ ನಿವೇಶನಗಳ, ಅಲ್ಲಿ ಕಟ್ಟಿರುವ ಮನೆಗಳ ಮೇಲೆ ನಿಯಂತ್ರಣ ಇಲ್ಲದಿದ್ದರೂ, ಆ ಕಡೆಯಿಂದ ನಮಗೆ ಹೆಚ್ಚು ಕಿರಿಕಿರಿ ಆಗದಂತೆ ನೋಡಿಕೊಳ್ಳಬೇಕು.

Advertisement

ಮನೆಯ ವಿನ್ಯಾಸ ಮಾಡುವಾಗ ನಮಗೆ ಅಕ್ಕಪಕ್ಕದವರ ನಿವೇಶನಗಳ, ಅಲ್ಲಿ ಕಟ್ಟಿರುವ ಮನೆಗಳ ಮೇಲೆ ನಿಯಂತ್ರಣ ಇಲ್ಲದಿದ್ದರೂ, ಆ ಕಡೆಯಿಂದ ನಮಗೆ ಹೆಚ್ಚು ಕಿರಿಕಿರಿ ಆಗದಂತೆ ನೋಡಿಕೊಳ್ಳಬಹುದು. ಪಕ್ಕದ ಮನೆಯ ಶೌಚಗೃಹದ ಪಕ್ಕದಲ್ಲಿ ನಮ್ಮ ಊಟದ ಮನೆ ಬಾರದಂತೆ ನೋಡಿಕೊಳ್ಳುವುದು ಕಷ್ಟ ಏನಲ್ಲ. ಹಾಗೆಯೇ ನಾವು ಓದುವ ಸ್ಥಳ- ಸ್ಟಡಿ ರೂಮ್‌ ಪಕ್ಕದ ಮನೆಯ ಅಡಿಗೆ ಕೋಣೆಯೋ ಇಲ್ಲ ಲಿವಿಂಗ್‌ ರೂಮ್‌ ಬಂದರೆ ಒಂದಷ್ಟು ಕಿರಿಕಿರಿ ಆಗುವುದು ತಪ್ಪುವುದಿಲ್ಲ. ಇದೇ ರೀತಿಯಲ್ಲಿ, ನಾವು ನಮ್ಮ ಮನೆಗೆ ಎಲ್ಲಿಂದ ಧಾರಾಳವಾಗಿ ಬೆಳಕು ಬರುತ್ತದೆ ಎಂಬುದರ ಬಗ್ಗೆಯೂ ಕಾಳಜಿ ವಹಿಸಬೇಕು. ಪಕ್ಕದವರು ತೀರಾ ನಿವೇಶನದ ಅಂಚಿಗೆ ಕಟ್ಟಿಕೊಂಡಿದ್ದರೆ, ಆ ಕಡೆಯಿಂದ ಹೆಚ್ಚು ಬೆಳಕು ಬರುವುದು ಸಂಶಯ. ನಮಗೆ ಸಾಕಷ್ಟು ಗಾಳಿ ಬೆಳಕು ಬರಬೇಕೆಂದರೆ, ಆ ಕಡೆ ನಾವು ಹೆಚ್ಚು ತೆರೆದ ಸ್ಥಳವನ್ನು ಬಿಡಬೇಕಾಗುತ್ತದೆ. ಇನ್ನು ರಸ್ತೆ ಕಡೆ, ಅದು ಹೆಚ್ಚು ವಾಹನ ಸಂಚಾರ ಇರುವ ಮುಖ್ಯರಸ್ತೆ ಆಗಿದ್ದರೆ, ಅದರಿಂದಾಗಿ ಒಳನುಗ್ಗುವ ಧೂಳು, ಶಬ್ದಮಾಲಿನ್ಯ, ರಾತ್ರಿ ಹೊತ್ತು ನುಗ್ಗಿಬರುವ ಹೆಡ್‌ಲೈಟ್‌ ಹಾವಳಿಯನ್ನೂ ಪರಿಗಣಿಸಬೇಕಾಗುತ್ತದೆ.

ಇವನ್ನು ಖಾತರಿ ಪಡಿಸಿಕೊಳ್ಳಿ
ಪಕ್ಕದ ಸೈಟ್‌ಗಿಂತ ನಮ್ಮ ನಿವೇಶನ ಎತ್ತರದಲ್ಲಿ ಇದ್ದರೆ, ಸಾಮಾನ್ಯವಾಗಿ ಹೆಚ್ಚು ಕಿರಿಕಿರಿ ಆಗುವುದಿಲ್ಲ, ಆದರೆ ಅದೇನಾದರೂ ಕೆಳಗಿದ್ದರೆ, ಪಕ್ಕದಿಂದ ಹಾವಳಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಎತ್ತರದ ನಿವೇಶನದಿಂದ ಸ್ಯಾನಿಟರಿ ನೀರು ಜಿನುಗುವುದರಿಂದ ಹಿಡಿದು, ಅವರ ಮನೆಯ ಸಂಪ್‌ ಸೋರಿದರೆ, ನಮ್ಮ ಮನೆಯ ನೆಲ ತೇವ ಹೊಡೆಯಬಹುದು. ಬೆಂಗಳೂರಿನಂಥ ನಗರಗಳಲ್ಲಿ ಏರು ತಗ್ಗುಗಳು ಸಾಮಾನ್ಯವಾಗಿದ್ದು, ಪಕ್ಕದ ನಿವೇಶನದ ಮಟ್ಟದ ಬಗ್ಗೆ ಯೋಚಿಸಿ ಮನೆಯ ವಿನ್ಯಾಸ ಮಾಡುವುದು ಒಳ್ಳೆಯದು. ಕೆಲವೊಮ್ಮೆ ಗಿಡ- ಮರಗಳ ಬೇರುಗಳೂ ಕೂಡ ಕಾಂಪೌಂಡ್‌ ಗೋಡೆಯನ್ನು ಸಡಿಲಗೊಳಿಸುವ ಸಾಧ್ಯತೆ ಇರುತ್ತದೆ. ಪಕ್ಕದ ಇಲ್ಲವೆ ಹಿಂಬದಿಯ ಮನೆಯ ಯುಟಿಲಿಟಿ ಸ್ಥಳ ಅಂದರೆ ಬಟ್ಟೆ ಒಣಗಿ ಹಾಕುವ ಸ್ಥಳ ನಮ್ಮ ಬೆಡ್‌ರೂಮ್‌ ಕಿಟಕಿಯ ಪಕ್ಕ ಬಾರದಂತೆಯೂ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ನೆರೆಯವರ ಯುಟಿಲಿಟಿ ಜಾಗದ ಪಕ್ಕದಲ್ಲೇ ನಮ್ಮ ಮನೆಯದ್ದೂ ಬಂದರೆ ತೊಂದರೆ ಇರುವುದಿಲ್ಲ.

ಖಾಲಿ ನಿವೇಶನಗಳ ಕಿರಿಕಿರಿ
ಕೆಲವೊಮ್ಮೆ ನಾವು ಮನೆಕಟ್ಟಿ ಹತ್ತಾರು ವರ್ಷಗಳಾದರೂ ಪಕ್ಕದ ನಿವೇಶನ ಹಾಗೆಯೇ ಉಳಿದು, ನಮಗೆ ಆಕಡೆಯಿಂದ ಗಾಳಿ ಬೆಳಕು ಧಾರಾಳವಾಗಿ ಬಂದರೂ, ಅದರ ನಿರ್ವಹಣೆ ಸರಿಯಿಲ್ಲದಿದ್ದರೆ, ಧೂಳು, ಹುಳಹುಪ್ಪಟೆಯ ಹಾವಳಿಯೂ ಜೋರಾಗಿ ಇರುತ್ತದೆ. ಇನ್ನು ಪಾರ್ಥೇನಿಯಂ ಮಾದರಿಯ ಅಲರ್ಜಿ – ಶ್ವಾಸಕೋಶದ ಬೇನೆ ತರುವ ಗಿಡಗಳಿದ್ದರಂತೂ ಖಾಲಿ ನಿವೇಶನದಿಂದ ಆಗುವ ಲಾಭಕ್ಕಿಂತ ತೊಂದರೆಯೇ ಹೆಚ್ಚಾಗುತ್ತದೆ. ಮನೆ ಕಟ್ಟುವ ಮೊದಲು ಅಕ್ಕಪಕ್ಕದವರನ್ನು ವಿಚಾರಿಸಿ, ಸೂಕ್ಷ್ಮವಾಗಿ ಎಷ್ಟು ದಿನ ಖಾಲಿ ನಿವೇಶನ ಹಾಗೆಯೇ ಉಳಿಯುತ್ತದೆ ಎಂದು ತಿಳಿದುಕೊಳ್ಳಬಹುದು. ಅದರ ಮಾಲೀಕರು ಬೇರೆ ಊರಲ್ಲೋ ಇಲ್ಲ ಈಗಾಗಲೇ ಮನೆ ಇದ್ದು, ನಿವೇಶನವನ್ನು ಖರೀದಿಸಿ ಲಾಭ ಗಳಿಸಲು ಸುಮ್ಮನೆ ಬಿಟ್ಟಿದ್ದರೆ, ಅದು ನಾಲ್ಕಾರು ವರ್ಷ ಹಾಗೆಯೇ ಇರುತ್ತದೆ ಎಂದೇ ನಿರ್ಧರಿಸಬಹುದು! ಕೆಲವೊಮ್ಮೆ ಖಾಲಿ ನಿವೇಶನದ ಕಡೆ ಪಕ್ಕದವರು ಕಾಂಪೌಂಡ್‌ ಕಟ್ಟುವ ಹಾಗಿದ್ದರೂ, ಅದರ ಬದಲು ಸುಮ್ಮನೆ ಬೇಲಿ ಹಾಕಿದ್ದರೆ, ನಮಗೇ ಹೆಚ್ಚು ಕಿರಿಕಿರಿ ಆಗುತ್ತದೆ. ಅಂಥ ಸಂದರ್ಭದಲ್ಲಿ ಅನಿವಾರ್ಯವಾಗಿ ಎತ್ತರದ ಕಾಂಪೌಂಡ್‌ ಗೋಡೆ ಹಾಕಿ, ನಮ್ಮ ನಿವೇಶನದಲ್ಲಿಯೇ ಧಾರಾಳವಾಗಿ ಗಾಳಿ- ಬೆಳಕು ಬರುವಂತೆ ಮಾಡಿಕೊಳ್ಳಬೇಕು.

ಪರದೆಯಿಂದ ಪದರಗಳ ರಕ್ಷಣೆ
ಕೆಲವೊಮ್ಮೆ ಬರೀ ಒಂದು ಕಾಂಪೌಂಡ್‌ ಗೋಡೆ ಕಟ್ಟಿದರೆ, ನಮಗೆ ಸಾಕಷ್ಟು ರಕ್ಷಣೆ ಸಿಗುವುದಿಲ್ಲ. ರಸ್ತೆಯ ಶಬ್ದ ಜೋರಾಗಿದ್ದರೆ, ಗೋಡೆಗೆ ವೆರಿrಕಲ್‌ ಗಾರ್ಡನ್‌ ಮಾದರಿಯಲ್ಲಿ ಅಲಂಕಾರಿಕವಾಗಿ ಒಂದಷ್ಟು ಹಸಿರನ್ನು ಮನೆಯ ಹೊರಗೆ ಇಲ್ಲವೆ ಕಾಂಪೌಂಡ್‌ ವಿನ್ಯಾಸದಲ್ಲಿಯೇ ಅಳವಡಿಸಿಕೊಳ್ಳಬೇಕು. ನಾವು ರಸ್ತೆಬದಿಯ ಕಾಂಪೌಂಡ್‌ ಅನ್ನು ತೀರ ಎತ್ತರಕ್ಕೂ ಹಾಕಿಕೊಳ್ಳಲು ಆಗುವುದಿಲ್ಲ. ಮನೆಗೆ ಮುಖ್ಯವಾಗಿ ಗಾಳಿಬೆಳಕು ಬರುವುದು ರಸ್ತೆಕಡೆಯಿಂದ.

Advertisement

ಇತ್ತೀಚಿನ ದಿನಗಳಲ್ಲಿ ನಿವೇಶನಗಳಲ್ಲಿ ಮನೆಯ ಅಕ್ಕಪಕ್ಕ ಬಿಡುವ ತೆರೆದ ಸ್ಥಳಗಳೂ ತೀರ ಕಡಿಮೆ ಆಗುತ್ತಿದ್ದು, ನಾವು ರಸ್ತೆಗಳನೇ° ಮುಖ್ಯವಾಗಿ ಗಾಳಿ ಬೆಳಕಿಗೆ ಆಧರಿಸಿದ್ದೇವೆ. ಹಾಗಾಗಿ ಈ ಕಡೆ ತೀರಾ ಮುಚ್ಚಿದಂತೆಯೂ ಇರದೆ, ಒಂದೆರಡು ಪದರಗಳಲ್ಲಿ ತಡೆಗಳನ್ನು ನಿರ್ಮಿಸಿ, ರಸ್ತೆಯ ಮಾಲಿನ್ಯ ನೇರವಾಗಿ ಮನೆಯನ್ನು ಪ್ರವೇಶಿಸದಂತೆ ವಿನ್ಯಾಸ ಮಾಡಬೇಕು. ಹೀಗೆ ಮಾಡಲು ನಮಗೆ ಹೆಚ್ಚಿನ ಸ್ಥಳವೇನೂ ಬೇಡ, ಕೇವಲ ಮೂರು ನಾಲ್ಕು ಅಡಿ ಅಗಲದ ತೆರೆದ ಸ್ಥಳವಿದ್ದರೂ, ಹಸಿರು ಗೋಡೆ ನಿರ್ಮಿಸುವುದರ ಜೊತೆ ಒಂದಷ್ಟು ಜಾಲಿ- ಸ್ಕ್ರೀನ್‌ ಬಳಸಿಯೂ ಮಾಲಿನ್ಯಕ್ಕೆ ತಡೆ ಒಡ್ಡಬಹುದು. ಇತ್ತೀಚಿನ ದಿನಗಳಲ್ಲಿ ಉಕ್ಕು ಇಲ್ಲ ಸ್ಟೇನ್‌ಲೆಸ್‌ಸ್ಟೀಲ್‌ ರೇಖುಗಳಿಂದ ಮಾಡಿದ ಕಲಾತ್ಮಕವಾಗಿ ಕಡೆದ ಪರದೆಗಳೂ ಲಭ್ಯ. ಇವು ನೋಡಲು ಸುಂದರವಾಗಿರುವಂತೆಯೂ ಹೆಚ್ಚು ನಿರ್ವಹಣೆ ಇಲ್ಲದೆ ಸಾಕಷ್ಟು ರಕ್ಷಣೆಯನ್ನೂ ನೀಡಬಲ್ಲವು.

ಅಕ್ಕ ಪಕ್ಕದಲ್ಲಿ ಮುಂದೆ ಏನು ಮಾಡುತ್ತಾರೆ ಎಂದು ನಿರ್ಧರಿಸುವುದು ಸುಲಭ ಅಲ್ಲದಿದ್ದರೂ ಈಗಾಗಲೇ ಮನೆಗಳು ಇದ್ದರೆ, ಅವುಗಳನ್ನು ನೋಡಿ, ನಮ್ಮ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಮಾಡಬೇಕಾಗುತ್ತದೆ. ನಿವೇಶನ ನಮ್ಮದು, ಮನೆಯೂ ನಮ್ಮದೇ ಆಗಿರಬಹುದು, ಆದರೆ ಅಕ್ಕಪಕ್ಕದಿಂದಾಗುವ ಲಾಭ ನಷ್ಟಗಳನ್ನು ಗಮನಿಸಿಯೇ ಪ್ಲ್ಯಾನ್‌ ಮಾಡಿ ಮುಂದುವರಿಯಬೇಕು. ಇದು ಆರೋಗ್ಯದ ದೃಷ್ಟಿಯಿಂದಲೂ ಅಗತ್ಯವಾಗಿದೆ.
ರಸ್ತೆಗಿಂತ ನಿವೇಶನ ಕೆಳಗಿದ್ದರೆ?
ಮಳೆನೀರು ಹಾಗೂ ತಾಜ್ಯನೀರನ್ನು ಹೊರಹಾಕಲು ನಮ್ಮ ಮನೆ ರಸ್ತೆಗಿಂತ ಎತ್ತರದಲ್ಲಿದ್ದರೆ ಅನುಕೂಲಕರ. ಮಳೆ ನೀರನ್ನಾದರೂ ಕೊಯ್ಲು ಮಾಡಿ, ಹೊರಹೋಗದಿದ್ದರೂ ಪರವಾಗಿಲ್ಲ, ಅಂತರ್ಜಲ ವೃದ್ಧಿ ಆಗಲಿ ಎಂದು ಇಂಗುಗುಂಡಿಗಳನ್ನು ತೋಡಿ ಹರಿಸಿಬಿಡಬಹುದು. ಆದರೆ ಸ್ಯಾನಿಟರಿ ನೀರು ಅನಿವಾರ್ಯವಾಗಿ ಹೊರಹೋಗಲೇ ಬೇಕಾಗುತ್ತದೆ. ಹಾಗಾಗಿ ಮನೆಯನ್ನು ಇಲ್ಲವೆ ಸ್ಯಾನಿಟರಿ ಸ್ಥಳ ಅಂದರೆ ಟಾಯ್ಲೆಟ್‌ಗಳಿರುವ ಜಾಗ ಕಡೇ ಪಕ್ಷ ಎರಡು ಅಡಿ ರಸ್ತೆಯಿಂದ ಎತ್ತರದಲ್ಲಿರುವಂತೆ ವಿನ್ಯಾಸ ಮಾಡಬೇಕಾಗುತ್ತದೆ. ಇಡೀ ಮನೆಯನ್ನು ಎತ್ತರಿಸಲು ಹೆಚ್ಚು ಖರ್ಚು ಬರುವುದರಿಂದ, ವಿವಿಧ ಮಟ್ಟದಲ್ಲಿ ಕೋಣೆಗಳನ್ನು ವಿನ್ಯಾಸಮಾಡಿಕೊಂಡು, ಹೆಚ್ಚು ಭರ್ತಿ ಬಾರದಂತೆ ನೋಡಿಕೊಳ್ಳಬಹುದು. ಧೂಳು, ಶಬ್ದಮಾಲಿನ್ಯವೂ ಕೆಳಗಿನ ಸ್ಥಳಕ್ಕೆ ಬೇಗ ರವಾನೆ ಆಗುತ್ತದೆ, ಆದುದರಿಂದ, ನಿವೇಶನ ರಸ್ತೆಗಿಂತ ಕೆಳಗಿದ್ದರೆ, ರಸ್ತೆಗೂ ಮನೆಗೂ ತಡೆಗೋಡೆಗಳಂತೆ ಹಸಿರಿನಿಂದ ಇಲ್ಲವೇ ಇತರೆ ಮಾದರಿಗಳಿಂದ ರಕ್ಷಿಸಿಕೊಳ್ಳಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗೆ ಫೋನ್‌ 9844132826

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next