ನವದೆಹಲಿ: ಲೋನಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡ ಉಮ್ಮದ್ ಪಹಲ್ವಾನ್ ಇದ್ರಿಸಿಯನ್ನು ದೆಹಲಿಯಲ್ಲಿ ಶನಿವಾರ (ಜೂನ್ 19) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಅರುಣ್ ಸಿಂಗ್ ಬಂದುಹೋದ ಬಳಿಕ ಜಾಲಿ ಮೂಡ್ ನಲ್ಲಿದ್ದಾರೆ ಸಿಎಂ ಯಡಿಯೂರಪ್ಪ
ಗಾಜಿಯಾಬಾದ್ ಪೊಲೀಸರ ತಂಡ ದೆಹಲಿಯ ಲೋಕ್ ನಾರಾಯಣ್ ಜೈಪ್ರಕಾಸ್ ಆಸ್ಪತ್ರೆಯ ಬಳಿ ಉಮ್ಮರ್ ಪಹಲ್ವಾನ್ ಮತ್ತು ಗುಲ್ಶನ್ ಸೇರಿದಂತೆ ಇಬ್ಬರನ್ನು ಬಂಧಿಸಿದೆ. ಲೋನಿ ಘಟನೆಗೆ ಸಂಬಂಧಿಸಿದಂತೆ ಉಮ್ಮರ್ ಪಹಲ್ವಾನ್ ಅವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಗಾಗಿ ಗಾಜಿಯಾಬಾದ್ ಗೆ ಕರೆತರಲಾಗುವುದು ಎಂದು ಗಾಜಿಯಾಬಾದ್ ಎಸ್ ಎಸ್ ಪಿ ಅಮಿತ್ ಪಾಠಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಿರಿಯ ಮುಸ್ಲಿಂ ವ್ಯಕ್ತಿ ಮೇಲಿನ ಹಲ್ಲೆಗೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೋಮು ಘರ್ಷಣೆಗೆ ಸಂಚು ರೂಪಿಸಿದ್ದ ಉಮ್ಮದ್ ಪಹಲ್ವಾನ್ ಗಾಗಿ ಗಾಜಿಯಾಬಾದ್ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು.
ಲೋನಿ ಗಡಿ ಭಾಗದ ಪೊಲೀಸ್ ಠಾಣೆಯಲ್ಲಿ ಇದ್ರಿಸಿ ವಿರುದ್ಧ ಪ್ರಕರಣ ದಾಖಲಾಗಿತ್ತು, ಹಿರಿಯ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯಿಸಲಾಗಿತ್ತು ಎಂದು ಆರೋಪಿಸಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಕೆಲವು ಕಾಂಗ್ರೆಸ್ ಮುಖಂಡರು, ನ್ಯೂಸ್ ವೆಬ್ ಸೈಟ್ಸ್, ಟ್ವಿಟರ್ ವಿರುದ್ಧ ಗಾಜಿಯಾಬಾದ್ ಪೊಲೀಸರು ಪ್ರತ್ಯೇಕ ಎಫ್ ಐಆರ್ ದಾಖಲಿಸಿದ್ದರು.