Advertisement
ಸ್ಪೇನ್‌ನಲ್ಲಿ ಬುಲ್ ಫೈಟಿಂಗ್ ಪ್ರಸಿದ್ಧ ಕ್ರೀಡೆ. ಅದರಲ್ಲಿ ಗೂಳಿಯನ್ನು ಅಟ್ಟಾಡಿಸುವ ವ್ಯಕ್ತಿಯನ್ನು “ಮೆಟಡೋರ್’ ಎನ್ನುತ್ತಾರೆ. ಈ ಮೆಟಡೋರ್ ತೊಡುವ ಉಡುಪು ಯುನಿಫಾರ್ಮ್ನಂತಿರುತ್ತದೆ! ಮೆಡಲ್ (ಪದಕ) ನಂತೆ ಕಾಣುವ ಅಲಂಕಾರಿಕ ವಸ್ತುಗಳನ್ನು ಭುಜಗಳ ಮೇಲೆ ತೊಟ್ಟಿರುತ್ತಾರೆ. ಹಾಗಾಗಿ, ಮೆಟಡೋರ್ ತೊಡುವ ಜಾಕೆಟ್ ಬಹಳ ಆಕರ್ಷಕವಾಗಿರುತ್ತದೆ. ಇದೇ ಜಾಕೆಟ್‌ನಿಂದ ಪ್ರೇರಣೆ ಪಡೆದ ವಸ್ತ್ರ ವಿನ್ಯಾಸಕರು ಮತ್ತೂಂದು ಉಡುಪನ್ನು ಫ್ಯಾಷನ್‌ಲೋಕಕ್ಕೆ ಪರಿಚಯಿಸಿದರು. ಅದುವೇ ಶ್ರಗ್. ನೋಡಲು ಅಂಗಿಯಂತಿರುವ ಇದಕ್ಕೆ ಬಟನ್ (ಗುಂಡಿ)ಗಳಿರುವುದಿಲ್ಲ. ಹಾಗಾಗಿ ಇದನ್ನು ಮೇಲುಡುಪಿನಂತೆ ಧರಿಸಬೇಕಾಗುತ್ತದೆ. ಅಂದರೆ, ಇವುಗಳನ್ನು ರವಿಕೆಯಂತೆ ತೊಡುವ ಹಾಗಿಲ್ಲ. ಇವುಗಳನ್ನು ಜಾಕೆಟ್‌ನಂತೆಯೇ ಉಡುಪಿನ ಮೇಲೆ ತೊಡಲಾಗುತ್ತದೆ. ಅಂಗಿ, ಡ್ರೆಸ್, ಸೀರೆ, ಚೂಡಿದಾರ ಅಥವಾ ಇನ್ಯಾವುದೇ ಧರಿಸಿನ ಮೇಲೆ ಕೋಟಿನಂತೆ ತೊಡಲಾಗುತ್ತದೆ.
ಶ್ರಗ್‌ಅನ್ನು ಹೆಚ್ಚಾಗಿ ಕ್ಯಾಶುಯಲ್ ಪ್ಯಾಂಟ್, ಶರ್ಟ್ ಜೊತೆ ಉಡುತ್ತಾರೆ. ಆದರೆ ವೆಸ್ಟರ್ನ್ (ಪಾಶ್ಚಾತ್ಯ) ಶ್ರಗ್ ಇದೀಗ ಇಂಡಿಯನ್ ಆಗಿದೆ! ಇಂಡಿಯನ್ ಪ್ರಿಂಟ್ ಶ್ರಗ್‌ಗಳಲ್ಲಿ ಸಾಂಪ್ರದಾಯಿಕ ಕಲೆಗಳನ್ನು ಮೂಡಿಸಲಾಗುತ್ತಿದೆ. ವಾರ್ಲಿ, ಪಿಥೋರ, ತಂಜಾವೂರು, ಮೈಸೂರು, ಕಂಗ್ರಾ, ಪಟ್ಟಚಿತ್ರ, ಮೀನಕಾರಿ, ಮಧುಬನಿ, ಕಲಂಕಾರಿ ಸೇರಿದಂತೆ ಬಗೆ ಬಗೆಯ ಶೈಲಿಯ ಚಿತ್ರಕಲೆಗಳನ್ನು ಇಂಡಿಯನ್ ಪ್ರಿಂಟ್ ಉಳ್ಳ ಶ್ರಗ್‌ಗಳಲ್ಲಿ ಬಿಡಿಸಲಾಗುತ್ತದೆ. ಆದ್ದರಿಂದ ಈ ಶ್ರಗ್‌ಅನ್ನು ಹಬ್ಬ, ಪೂಜೆ, ಮದುವೆ ಸೇರಿದಂತೆ ಎಲ್ಲ ಕಾರ್ಯಕ್ರಮಕ್ಕೂ ಧರಿಸಬಹುದು.
Related Articles
Advertisement
ಗಡಿಬಿಡಿ ಉಡುಗೆಬಣ್ಣ ಬಣ್ಣದ ಬಟ್ಟೆ ಮೇಲೆ ಪ್ಲೇನ್ ಶ್ರಗ್ ತೊಟ್ಟರೆ, ಪ್ಲೇನ್ ಉಡುಗೆ ಮೇಲೆ ಬಣ್ಣ ಬಣ್ಣದ ಶ್ರಗ್ ತೊಡಲಾಗುತ್ತದೆ. ಇವುಗಳಲ್ಲಿ ಬಟನ್, ಲಾಡಿ, ದಾರ, ಜಿಪ್ ಅಥವಾ ವೆಲೊ ಇಲ್ಲದೆ ಇರುವ ಕಾರಣ ಇವುಗಳನ್ನು ಗಡಿಬಿಡಿಯಲ್ಲೂ ತೊಡಬಹುದು! ಇನ್ನು ಬಟ್ಟೆಯ ಮೆಟೀರಿಯಲ್ ನೋಡಿ ಹೋಗುವುದಾದರೆ, ವೆಲ್ವೆಟ್ (ಮಕ್ಮಲ್), ಫರ್ (ತುಪ್ಪಳ ಚರ್ಮ ಅಥವಾ ಮೃದು ರೋಮದಿಂದ ಮಾಡಿದ ಬಟ್ಟೆ), ಲೇಸ್, ಉಣ್ಣೆ ಹೀಗೆ ಹಲವು ಬಗೆಗಳಿವೆ. ಜೀನ್ಸ್ ಮೇಲೆ ಧರಿಸಲು ಸರಳ ಶ್ರಗ್, ಚೂಡಿದಾರ ಮೇಲೆ ತೊಡಲು ಟ್ಯಾಝೆಲ್ ಶ್ರಗ್, ಸಲ್ವಾರ್ ಕಮೀಜ್ ಹಾಗು ಅನಾರ್ಕಲಿ ಡ್ರೆಸ್ ಮೇಲೆ ತೊಡಲು ಬ್ಲಾಕ್ ಪ್ರಿಂಟೆಡ್ ಶ್ರಗ್‌ಗಳೂ ಲಭ್ಯವಿವೆ. ಅಲ್ಲದೆ, ನಮಗಿಷ್ಟದ ಪ್ರಿಂಟ್, ಮೆಟೀರಿಯಲ್ ಅಥವಾ ಬಣ್ಣದ ಬಟ್ಟೆಯನ್ನು ಹೊಲಿಸಿ ಶ್ರಗ್ ಮಾಡಿಸಬಹುದು. ಶ್ರಗ್‌ನಿಂದ ಯಾವುದೇ ಸರಳ ಉಡುಪು ಡಿಫರೆಂಟ್ ಆಗಿ ಪರಿವರ್ತಿಸಬಹುದು. ಇನ್ನು ಕ್ಲಾಸಿಕ್ ಬ್ಲಾಕ್ ಶ್ರಗ್ ಅನ್ನು ಫಾರ್ಮಲ್ಸ… ಅಲ್ಲದೆ ಯಾವುದೇ ಬಟ್ಟೆ ಜೊತೆ ತೊಡಬಹುದು. ಲೇಯರ್ಡ್ ಶ್ರಗ್ ನೋಡಲು ಒಂದರ ಮೇಲೊಂದು ಕೋಟ್ ತೊಟ್ಟಂತೆ ಕಾಣುತ್ತದೆ ಆದರೆ ಅದು ಒಂದೇ ಶ್ರಗ್ ಆಗಿರುತ್ತದೆ. ಒಂದೇ ಕೋಟ್‌ನಲ್ಲಿ ಎರಡು ಅಥವಾ ಹೆಚ್ಚು ಪದರಗಳಿರುವ ಕಾರಣ, ಅವನ್ನು ಲೇಯರ್ (ಪದರ) ಶ್ರಗ್ ಎಂದು ಕರೆಯಲಾಗುತ್ತದೆ. ಸಿನಿಮಾ ನಟಿಯರೂ ಈ ಟ್ರೆಂಡ್‌ಗೆ ಮಾರುಹೋಗಿದ್ದಾರೆ. ಸಿನಿಮಾದ ಪ್ರಮೋಷನ್, ಪ್ರಸ್ ಮೀಟ್ ಅಲ್ಲದೆ ಚಲನಚಿತ್ರಗಳಲ್ಲೂ ಈ ಶೈಲಿಯನ್ನು ಅಳವಡಿಸಿ, ಯುವತಿಯರು ಅನುಕರಣೆ ಮಾಡುವಂತೆ ಪ್ರೇರೇಪಿಸುತ್ತ ಬಂದಿದ್ದಾರೆ. ಸ್ವೆಟರ್‌ನಷ್ಟು ಬಿಗಿಯಾಗಿರದ ಈ ಶ್ರಗ್ ಸಡಿಲವಾಗಿದ್ದರೂ ಚಳಿಯಿಂದ ರಕ್ಷಣೆ ನೀಡುತ್ತದೆ. ಆದ್ದರಿಂದ ನಿಮಗಿಷ್ಟದ ಶ್ರಗ್ ಅನ್ನು ಈ ಚಳಿಗಾಲದಲ್ಲಿ ಉಟ್ಟು ಮಿಂಚಿ!