Advertisement

ದತ್ತು ತೆಗೆದುಕೊಳ್ಳುವವರಿಗೆ ದೀರ್ಘಾವಧಿ ಪ್ರಕ್ರಿಯೆ ತೊಡಕು

10:19 PM Dec 29, 2020 | Team Udayavani |

ಉಡುಪಿ: ವಿವಿಧ ಕಾರಣಗಳಿಗಾಗಿ ಮಕ್ಕಳನ್ನು ಪಡೆಯಲು ಇಚ್ಛಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿಯೂ ಯಾವುದಾದರೊಂದು ಮಗು ಪತ್ತೆಯಾದರೆ ದತ್ತು ಸ್ವೀಕರಿಸಲು ಕರೆಗಳ ಸುರಿಮಳೆಯೇ ಬರುತ್ತದೆ. ಆದರೆ ಇದರ ಪ್ರಕ್ರಿಯೆ ದೀರ್ಫಾವಧಿಯಾಗಿದ್ದು ಅನಂತರವಷ್ಟೇ ಮಕ್ಕಳನ್ನು ದತ್ತು ಪಡೆಯಬಹುದಾಗಿದೆ.

Advertisement

4 ವರ್ಷದೊಳಗಿನ ಮಕ್ಕಳನ್ನು ದತ್ತು ಪಡೆಯಲು ಬಯಸುವ ದಂಪತಿಯ ಒಟ್ಟು ವಯಸ್ಸು 90 ಮೀರಿರಬಾರದು. ಹಾಗೆಯೇ ಏಕ ಪೋಷಕರ ವಯಸ್ಸು 45ಕ್ಕಿಂತ ಅಧಿಕ ಮೀರಿರಬಾರದು. 4ರಿಂದ8 ವರ್ಷದ ಮಕ್ಕಳನ್ನು ದತ್ತು ತೆಗೆದುಕೊಳ್ಳಬಯಸುವ ದಂಪತಿಗಳ ಒಟ್ಟು ವಯಸ್ಸು 100ಕ್ಕಿಂತ ಅಧಿಕ ಮೀರಿರಬಾರದು. ಹಾಗೆಯೇ ಏಕಪೋಷಕರ ವಯಸ್ಸು 50ಕ್ಕಿಂತ ಅಧಿಕ ಇರಬಾರದು. 8ರಿಂದ18 ವರ್ಷದೊಳಗಿನ ಮಕ್ಕಳನ್ನು ದತ್ತು ಪಡೆಯಲು ಬಯಸುವ ದಂಪತಿಯ ಒಟ್ಟು ವಯಸ್ಸು 110 ಮೀರಿರಬಾರದು. ಏಕಪೋಷಕರ ವಯಸ್ಸು 55ಕ್ಕಿಂತ ಅಧಿಕ ಇರಕೂಡದು ಎಂಬ ನಿಯಮಾವಳಿಗಳಿವೆ. ಹಾಗೆಯೇ ಏಕಪೋಷಕ ಪುರುಷರು ಹೆಣ್ಣುಮಕ್ಕಳನ್ನು ದತ್ತು ಸ್ವೀಕರಿಸುವಂತಿಲ್ಲ. ಏಕಪೋಷಕ ಮಹಿಳೆಯರು ಗಂಡು ಮಕ್ಕಳನ್ನು ದತ್ತು ಸ್ವೀಕಾರ ಮಾಡುವಂತಿಲ್ಲ ಎಂಬಂತಹ ನಿಯಮಗಳಿವೆ.

ದತ್ತು ಸ್ವೀಕಾರಕ್ಕೆ ಲಭ್ಯ
ಪರಿಸ್ಥಿತಿಯ ಒತ್ತಡದಿಂದ ನೈಜ ತಂದೆ-ತಾಯಿಗಳು ಅಥವಾ ಪೋಷಕರು ತಮ್ಮ ಸ್ವಇಚ್ಛೆಯಿಂದ ಮಕ್ಕಳನ್ನು ಪರಿತ್ಯಜಿಸಿ ಯಾವುದಾದರೂ ಒಂದು ಸೇವಾ ಸಂಸ್ಥೆಗೆ ಒಪ್ಪಿಸುತ್ತಾರೆ. ಇದರಲ್ಲಿ ಅವಿವಾಹಿತ ತಾಯಂದಿರ ಮಕ್ಕಳೂ ಸೇರಿರುತ್ತಾರೆ. ಮಗುವನ್ನು ಪರಿತ್ಯಜಿಸಿದ ಪಾಲಕರು ಅಥವಾ ಪೋಷಕರು ಪರಿತ್ಯಜಿಸಿದ ಬಗ್ಗೆ ಲಿಖೀತ ದಾಖಲೆಯನ್ನು ನೀಡಬೇಕು. ಅನಂತರ ಸಂಬಂಧಪಟ್ಟ ಸಂಸ್ಥೆಯು ಅಂತಹ ಮಗುವು ದತ್ತು ನೀಡಲು ಅರ್ಹವಿದೆ ಎಂದು ನ್ಯಾಯಾಲಯದ ಮುಂದೆ ಹೇಳಬೇಕಾಗುತ್ತದೆ.

ಅನುಮತಿ ಅಗತ್ಯ
ಸಾರ್ವಜನಿಕ ಸ್ಥಳಗಳಲ್ಲಿ ಕಳೆದು ಹೋದ ಅಥವಾ ಆಸ್ಪತ್ರೆಯಲ್ಲಿ ಅನಾಥವಾಗಿ ದೊರಕುವ ಮಕ್ಕಳನ್ನು ಆರಕ್ಷಕರು ತಮ್ಮ ವಶಕ್ಕೆ ತೆಗೆದುಕೊಂಡು ಬಾಲ ನ್ಯಾಯಾಲಯ ಮಂಡಳಿಯ ಮುಂದೆ ಹಾಜರುಪಡಿಸುತ್ತಾರೆ. ನ್ಯಾಯಾಲಯವು ಮಕ್ಕಳ ನೈಜ ಪಾಲಕರನ್ನು ಹುಡುಕಲು ನಿರ್ದೇಶಿಸಿದ ಅನಂತರ ವಿಚಾರಣೆಯಿಂದ ನೈಜ ಪಾಲಕರು/ಪೋಷಕರು ದೊರಕದಿದ್ದಾಗ ಅಂತಹ ಮಗುವನ್ನು ಅನಾಥ ಎಂದು ನಿರ್ಧರಿಸಲಾಗುತ್ತವೆ. ಅಂತಹ ಮಕ್ಕಳು ದತ್ತು ಸ್ವೀಕಾರಕ್ಕೆ ದೊರಕುತ್ತಾರೆ. ಸಂಸ್ಥೆಗಳಿಗೆ ಕಮಿಟ್‌ ಆಗಿರುವ ಮಕ್ಕಳನ್ನು ಇಂತಹ ಮಕ್ಕಳ ಸಂರಕ್ಷಕರಾದ ರಾಜ್ಯ ಸರಕಾರದ ಅನುಮತಿಯನ್ನು ಪಡೆದು ದತ್ತು ನೀಡಬಹುದು.

ವಿಶೇಷ ರಕ್ಷಣೆಯ ಅಗತ್ಯವಿರುವ ಮಕ್ಕಳು ಅಂದರೆ ಅಂಗವಿಕಲರು, ಮಂದ ಮತಿಯರು ಆಗಿದ್ದಲ್ಲಿ ಅಂತಹ ಮಕ್ಕಳನ್ನು ದತ್ತು ನೀಡಲು ಅವಕಾಶವಿರುತ್ತದೆ.

Advertisement

ಅರ್ಹತೆ ಅಗತ್ಯ
ಮಕ್ಕಳನ್ನು ದತ್ತು ಸ್ವೀಕರಿಸಲು ಹಲವಾರು ನಿಯಮಾವಳಿಗಳಿದೆ. ಕಾನೂನು ಪ್ರಕ್ರಿಯೆ ಸಹಿತ ಎಲ್ಲ ರೀತಿಯಿಂದ ಅರ್ಹತೆ ಇದ್ದರೆ ಮಾತ್ರ ದತ್ತು ಸ್ವೀಕಾರ ಮಾಡಬಹುದಾಗಿದೆ. ಮುಖ್ಯವಾಗಿ ದತ್ತು ತೆಗೆದುಕೊಳ್ಳಲು ಬಯಸುವವರ ಹಿನ್ನೆಲೆಯನ್ನೂ ಪರಿಶೀಲನೆಗೊಳಪಡಿಸಲಾಗುತ್ತದೆ.
-ಸದಾನಂದ ನಾಯಕ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next