ಮೊನಾಕೊ: ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಲಾಂಗ್‌ಜಂಪರ್ ಮುರಳಿ ಶ್ರೀಶಂಕರ್ ಮೊನಾಕೊ ಡೈಮಂಡ್ ಲೀಗ್‌ನಲ್ಲಿ ನಿರೀಕ್ಷೆಗಿಂತಲೂ ಕೆಳಮಟ್ಟದ ಪ್ರದರ್ಶನ ನೀಡಿ 6ನೇ ಸ್ಥಾನಿಯಾದರು. ಅವರ ಗರಿಷ್ಠ ನೆಗೆತ 7.94 ಮೀಟರ್ ಆಗಿತ್ತು. ಗೇಮ್ಸ್ ಬೆಳ್ಳಿ ಗೆದ್ದ ಆರೇ ದಿನಗಳಲ್ಲಿ ಮುರಳಿ ಶ್ರೀಶಂಕರ್ ಡೈಮಂಡ್ ಲೀಗ್ ಪದಾರ್ಪಣೆ ಮಾಡಿದ್ದರು.
ಮೊದಲ ಸುತ್ತಿನ ಸ್ಪರ್ಧೆ ಮುಗಿದಾಗ ಶ್ರೀಶಂಕರ್ 7.61 ಮೀ. ನೆಗೆತದೊಂದಿಗೆ 6ನೇ ಸ್ಥಾನ ಪಡೆದರು. 3ನೇ ಸುತ್ತು ಮುಗಿದಾಗ ಎಂಟಕ್ಕೆ ಕುಸಿದರೂ ಎಲಿಮಿನೇಶನ್‌ನಿಂದ ಪಾರಾದರು. ಬಳಿಕ ಕ್ರಮವಾಗಿ 7.69 ಮೀ. ಹಾಗೂ 7.94 ಮೀ. ನೆಗೆದು ಮತ್ತೆ 6ನೇ ಸ್ಥಾನಕ್ಕೆ ಬಂದರು. ಡೈಮಂಡ್ ಲೀಗ್‌ನ ಪರಿಷ್ಕೃತ ಫೈನಲ್ ತ್ರೀ ನಿಯಮದಂತೆ ಮೊದಲ 3 ಸ್ಥಾನದಲ್ಲಿದ್ದವರಿಗಷ್ಟೇ 6ನೇ ನೆಗೆತದ ಅವಕಾಶ ಲಭಿಸುತ್ತಿತ್ತು.
ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಕ್ಯೂಬಾದ ಮೈಕೆಲ್ ಮಾಸೊÕ 8.35 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದರು. ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಗ್ರೀಸ್‌ನ ಮಿಲ್ಟಿಯಾಡಿಸ್ ಟೆಂಟೊಗ್ಲೂ ಮತ್ತು ಅಮೆರಿಕದ ಮಾಕ್ವಿìಸ್ ಡೆಂಡಿ ಸಮಾನ 8.31 ಮೀ. ನೆಗೆದು ಬೆಳ್ಳಿ ಹಾಗೂ ಕಂಚು ಗೆದ್ದರು. ಹಿಂದಿನ ನೆಗೆತಗಳ ಅತ್ಯುತ್ತಮ ಸಾಧನೆಯ ಮಾನದಂಡವನ್ನು ಬಳಸಿ ಪದಕಗಳನ್ನು ನಿರ್ಧರಿಸಲಾಯಿತು. 2019ರ ವಿಶ್ವ ಚಾಂಪಿಯನ್‌ಶಿಪ್ ಬಂಗಾರ ವಿಜೇತ, ಜಮೈಕಾದ ಟಜಾಯ್ ಗೇಲ್ 4ನೇ ಸ್ಥಾನಿಯಾದರು.
8.36 ಮೀ. ಗರಿಷ್ಠ ನೆಗೆತ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶ್ರೀಶಂಕರ್ 8.08 ಮೀ. ನೆಗೆದು ದ್ವಿತೀಯ ಸ್ಥಾನಿಯಾಗಿದ್ದರು. ಆದರೆ ಇವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆ 8.36 ಮೀ. ಆಗಿದೆ. ಇದಕ್ಕೂ ಮೊದಲು ಯೂಜೀನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಶ್ರೀಶಂಕರ್ 7.96 ಮೀ. ಸಾಧನೆಯೊಂದಿಗೆ 7ನೇ ಸ್ಥಾನಿಯಾಗಿದ್ದರು. ಶ್ರೀಶಂಕರ್ ಅವರಿನ್ನು ಸ್ವಿಜರ್ಲೆಂಡ್‌ನ ಲಾಸಾನ್ನೆಯಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಟೂರ್ ಸಿಲ್ವರ್ ಲೇಬಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಕೂಟ ಆ.30ರಂದು ಆರಂಭವಾಗಲಿದೆ.