Advertisement

ಲಂಬೋದರ ಹಾಸ್ಯಪ್ರಸಂಗ

12:30 AM Mar 22, 2019 | |

ಲಂಬೋದರನಿಗೂ ಲಂಡನ್‌ಗೂ ಎತ್ತಣಿಂದೆತ್ತ ಸಂಬಂಧ … ಈಗ ಆ ಸಂಬಂಧವನ್ನು ಬಿಚ್ಚಿಡಲು ಸಿನಿಮಾವೊಂದು ಬರುತ್ತಿದೆ. ಅದು “ಲಂಡನ್‌ನಲ್ಲಿ ಲಂಬೋದರ’. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ “ಲಂಡನ್‌ನಲ್ಲಿ ಲಂಬೋದರ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ನಿರ್ದೇಶಕ ರಿಷಭ್‌ ಶೆಟ್ಟಿ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು. ಜೊತೆಗೊಂದು ಕಿವಿಮಾತು ಹೇಳಿದರು. “ಸಿನಿಮಾದ ಟ್ರೇಲರ್‌ ಚೆನ್ನಾಗಿದೆ. ಇಲ್ಲಿಂದ ಲಂಡನ್‌ಗೆ ಹೋಗಿ ಅರ್ಧ ಸಿನಿಮಾ ಚಿತ್ರೀಕರಣ ಮಾಡುವುದು ಸುಲಭವಲ್ಲ. ಅಂತಹ ಕೆಲಸವನ್ನು ಈ ಚಿತ್ರತಂಡ ಮಾಡಿದೆ. ಈ ತರಹದ ಚಿತ್ರಗಳನ್ನು ಇಷ್ಟಪಡುವ ವರ್ಗವೇ ಬೇರೆ ಇದೆ. ಹಾಗಾಗಿ, ಸಿನಿಮಾ ತಂಡ ಪ್ರಮೋಶನ್‌ನಲ್ಲಿ ಹಿಂದೆ ಬೀಳಬಾರದು. ಕಷ್ಟಪಟ್ಟು ಮಾಡಿದ ಕೆಲಸವನ್ನು ಜನರಿಗೆ ತಲುಪಿಸಬೇಕಾದರೆ ಸಿನಿಮಾದ ಪ್ರಮೋಶನ್‌ ಮುಖ್ಯ. ಆ ನಿಟ್ಟಿನಲ್ಲಿ ಚಿತ್ರತಂಡ ಪ್ರಯತ್ನಿಸಬೇಕು’ ಎಂದರು. 

Advertisement

ಈ ಚಿತ್ರದಲ್ಲಿ ಸಂತೋಷ್‌ ನಾಯಕರಾಗಿ ನಟಿಸಿದ್ದಾರೆ. ಐಟಿ ಕ್ಷೇತ್ರದಿಂದ ಬಂದಿರುವ ಸಂತೋಷ್‌ ಅವರಿಗೆ “ಲಂಡನ್‌ನಲ್ಲಿ ಲಂಬೋದರ’ ಚಿತ್ರ ಒಳ್ಳೆಯ ಅನುಭವ ಕೊಟ್ಟಿದೆಯಂತೆ. ಏನಾದರೂ ಸಾಧಿಸಬೇಕೆಂದು ಲಂಡನ್‌ಗೆ ಹೋಗಿ ಅಲ್ಲಿ ಪರದಾಡುವ ಸ್ಥಿತಿಯ ಸುತ್ತ ಇವರ ಪಾತ್ರ ಸಾಗುತ್ತದೆಯಂತೆ. “ಚಿತ್ರದಲ್ಲಿ ನಾನು ಬಿಟ್ಟರೆ ಉಳಿದವರೆಲ್ಲರೂ ಅನುಭವಸ್ಥರು. ಹಾಗಾಗಿ, ಅವರಿಂದ ಸಾಕಷ್ಟು ಕಲಿತೆ’ ಎಂದರು. ಚಿತ್ರದಲ್ಲಿ ಶೃತಿ ಪ್ರಕಾಶ್‌ ನಾಯಕಿ. ಅವರಿಲ್ಲಿ ಕನ್ನಡ, ಕರ್ನಾಟಕವನ್ನು ಪ್ರೀತಿಸುವ ಪ್ರತಿಭಾವಂತ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರವನ್ನು ರಾಜ್‌ಸೂರ್ಯ ನಿರ್ದೇಶಿಸಿದ್ದಾರೆ. ಇವರಿಗಿದು ಮೊದಲ ಚಿತ್ರ. ಬೆಂಗಳೂರಿನ ಯುವಕನೊಬ್ಬ ಹಲವು ನಂಬಿಕೆಗಳನ್ನು ಹೊತ್ತು, ಲಂಡನ್‌ಗೆ ಹಾರುತ್ತಾನೆ. ಅಲ್ಲಿ ಹೋದವನಿಗೆ ಎದುರಾಗುವ ಕಷ್ಟಗಳು ಮತ್ತು ಒಂದಷ್ಟು ಸಮಸ್ಯೆಗಳು ಹೇಗೆ ಹಾಸ್ಯರೂಪ ಪಡೆಯುತ್ತವೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ ಎಂಬುದು ನಿರ್ದೇಶಕರ ಮಾತು. ವಿದೇಶದಲ್ಲಿರುವ ಸಿನಿಮಾ ಪ್ರೀತಿಸುವ ಕೆಲವು ಕನ್ನಡಿಗರು ಪ್ರೀತಿಯಿಂದಲೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗ ಪ್ರಣವ್‌ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next