Advertisement

Election: ಚಾ.ನಗರ ಲೋಕಸಭಾ ಟಿಕೆಟ್‌ಗೆ ಕಸರತ್ತು… ಅಭ್ಯರ್ಥಿಗಳಾಗಲು ತೆರೆಮರೆಯ ತಾಲೀಮು

11:57 AM Aug 11, 2023 | Team Udayavani |

ಚಾಮರಾಜನಗರ: ಲೋಕಸಭಾ ಚುನಾವಣೆಗೆ ಏಳೆಂಟು ತಿಂಗಳಿದ್ದು, ಪ್ರಮುಖ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಸಿದ್ಧತೆಗಳನ್ನು ನಡೆಸುತ್ತಿವೆ. ಟಿಕೆಟ್‌ ಗಿಟ್ಟಿಸಲು ಯತ್ನಿಸುತ್ತಿರುವ ಆಕಾಂಕ್ಷಿಗಳು ಮೆಲ್ಲಗೆ ತಾಲೀಮು ನಡೆಸುತ್ತಿದ್ದಾರೆ.

Advertisement

ವಿಧಾನಸಭಾ ಚುನಾವಣೆ ನಡೆದು ಮೂರು ತಿಂಗಳಾಗುತ್ತಾ ಬಂದಿದೆ. ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿಸಿಕೊಂಡಿದೆ. ಚುನಾವಣೆಯಲ್ಲಿ ನಾವು ನೀಡಿದ್ದ ಭರವಸೆಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಆದ್ಯತೆ ಎಂದು ಮುಖ್ಯಮಂತ್ರಿ, ಸಚಿವರು ಹೇಳಿಕೊಂಡರೂ, ಮುಂದಿನ ವರ್ಷದ ಮೊದಲ ತ್ತೈಮಾಸಿಕದಲ್ಲಿ ಬರಲಿರುವ ಲೋಕಸಭಾ ಚುನಾವಣೆಗೆ ಈ ಯೋಜನೆಗಳನ್ನು ಅಡಿಪಾಯವಾಗಿ ಬಳಸಿಕೊಳ್ಳುವ ಮುಂದಾಲೋಚನೆಯೂ ಇದರಲ್ಲಡಗಿದೆ.

ಇನ್ನು ಅಧಿಕಾರ ಕಳೆದುಕೊಂಡಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ, ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿರುವ ವರ್ಚಸ್ಸನ್ನು ಮತ್ತೆ ಗಳಿಸಲು ಯತ್ನಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಸ್ತುತ ರಾಜಕೀಯ ಚಿತ್ರಣ ಹೀಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ಎಂದಾಕ್ಷಣ ಅನೇಕರಿಗೆ ತಕ್ಷಣ ನೆನಪಿಗೆ ಬರುವ ಹೆಸರು ಮಾಜಿ ಸಂಸದ ಆರ್‌. ಧ್ರುವನಾರಾಯಣ. ಸಂಸದರಾಗಿ ಒಂದು ಕ್ಷೇತ್ರಕ್ಕೆ ಯಾವ ರೀತಿ ಅಭಿವೃದ್ಧಿ ಕೆಲಸಗಳನ್ನು ಜಾರಿಗೊಳಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಧ್ರುವನಾರಾಯಣ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಅವರ ಅವಧಿಯಲ್ಲಿ ಅತ್ಯಂತ ಹೆಚ್ಚು ಅಭಿವೃದ್ಧಿ ಕೆಲಸಗಳು ನಡೆದವು. ಎರಡು ಅವಧಿಯ ತಮ್ಮ ಅಭಿವೃದ್ಧಿ ಕೆಲಸಗಳಿಂದ ಅವರು, ಸಮೀಕ್ಷೆಯೊಂದರಲ್ಲಿ ರಾಜ್ಯದಲ್ಲೇ ನಂ.1 ಸಂಸದ ಎಂಬ ಹೆಗ್ಗಳಿಕೆ ಹೊಂದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್‌ ಅವರಿಂದ ಕೆಲವೇ ಮತಗಳ ಅಂತರದಿಂದ ಸೋತರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ತಯಾರಿ ನಡೆಸುತ್ತಿರುವಾಗಲೇ ಅಕಾಲಿಕವಾಗಿ ನಿಧನರಾದರು.

Advertisement

ಪ್ರಸ್ತುತ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹನೂರು ಒಂದನ್ನು ಬಿಟ್ಟರೆ, ಉಳಿದ ಏಳರಲ್ಲಿ ಕಾಂಗ್ರೆಸ್‌ ಶಾಸಕರು ಅಧಿಕಾರದಲ್ಲಿದ್ದಾರೆ. (ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ನಂಜನಗೂಡು, ತಿ. ನರಸೀಪುರ, ವರುಣಾ, ಎಚ್‌.ಡಿ. ಕೋಟೆ)

ಬಿಜೆಪಿ ಸವಾಲು
ಬಿಜೆಪಿ ವಿಷಯಕ್ಕೆ ಬಂದರೆ, ಈಗಿನ ಲೋಕಸಭಾ ಸದಸ್ಯರಾಗಿರುವ ವಿ. ಶ್ರೀನಿವಾಸಪ್ರಸಾದ್‌ ಅವರು ಮತ್ತೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಅವರ ಅನಾರೋಗ್ಯದ ಕಾರಣ ಈ ಅವಧಿಯಲ್ಲೇ ಅವರು ನಿರೀಕ್ಷಿತ ರೀತಿಯಲ್ಲಿ ಕೆಲಸ ನಿರ್ವಹಿಸಲಾಗಲಿಲ್ಲ. ಆದರೂ ಚಾಮರಾಜನ‌ಗರ ಲೋಕಸಭಾ ಕ್ಷೇತ್ರದಲ್ಲಿ ಪ್ರಸಾದ್‌ ಅವರು ತಮ್ಮದೇ ವರ್ಚಸ್ಸು, ಓಟ್‌ ಬ್ಯಾಂಕ್‌ ಹೊಂದಿದ್ದಾರೆ. ಪ್ರಸಾದ್‌ ಅವರ ನಾಯಕತ್ವದಲ್ಲಿ ಅವರ ಸಲಹೆ ಪಡೆದು ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಚುನಾವಣೆಯಲ್ಲಿ ಮೋದಿ ಅಲೆ ತುಸು ಕೆಲಸ ಮಾಡಿದರೂ ವೈಯಕ್ತಿಕವಾಗಿ ಮತಗಳನ್ನು ಸೆಳೆಯಬಲ್ಲ ನಾಯಕರು ಸದ್ಯಕ್ಕೆ ಕಂಡು ಬರುತ್ತಿಲ್ಲ. ಚಾ.ನಗರ ಲೋಕಸಭಾ ಕ್ಷೇತ್ರದಲ್ಲಿ 7‌ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಇದರ ನಡುವೆಯೂ ಬಿಜೆಪಿ ಮತಗಳಿಸುವುದು ಸವಾಲಿನ ವಿಷಯವಾಗಿದೆ.

ಕಾಂಗ್ರೆಸ್‌ ಸವಾಲು
ಕಾಂಗ್ರೆಸ್‌ ವಿಷಯಕ್ಕೆ ಬಂದರೆ ಮಾಜಿ ಸಂಸದ ಧ್ರುವನಾರಾಯಣ ಎಂಟು ವಿಧಾನಸಭಾ ಕ್ಷೇತ್ರಗಳ ನಾಡಿಮಿಡಿತವನ್ನು ಬಲ್ಲವರಾಗಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರ ಗೈರು ಹಾಜರಿ ಕಾಂಗ್ರೆಸ್‌ ಪಕ್ಷಕ್ಕೆ ಎದ್ದು ಕಾಣಲಿದೆ. ಅವರಷ್ಟೇ ಸಮರ್ಥರಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸವಾಲು ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗಣನೀಯವಾಗಿ ಮತ ಪಡೆದಿತ್ತು. ಮೋದಿ ಅಲೆ ಹಾಗೂ ಶ್ರೀನಿವಾಸ್‌ ಪ್ರಸಾದ್‌ ವರ್ಚಸ್ಸು ಬಿಜೆಪಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಬಾರಿಯೂ ಮೋದಿ ಅಲೆ ತಕ್ಕಮಟ್ಟಿಗೆ ಇದೆ. ಲೋಕಸಭಾ ಚುನಾವಣೆ ವಿಷಯಕ್ಕೆ ಬಂದರೆ ಬಿಜೆಪಿಗೆ ಮತ ಹಾಕುವವರ ಪ್ರಮಾಣ ಹೆಚ್ಚಿದೆ. ಕಾಂಗ್ರೆಸ್‌ ಇದನ್ನು ನಿಭಾಯಿಸಿಕೊಂಡು ಹೋಗಬೇಕಿದೆ. ಗ್ಯಾರಂಟಿ ಯೋಜನೆಗಳು ಕೈಹಿಡಿದರೆ ಕಾಂಗ್ರೆಸ್‌ಗೆ ಹೆಚ್ಚು ಮತ ತಂದುಕೊಡುವ
ಸಾಧ್ಯತೆ ಇದೆ.

ಎರಡೂ ಪಕ್ಷಗಳಲ್ಲೂ ಅಭ್ಯರ್ಥಿಯಾಗಲು ಆಕ್ಷಾಂಕಿಗಳ ದಂಡು
ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲೂ ಆಕಾಂಕ್ಷಿಗಳ ದಂಡೇ ಇದೆ. ಎಂಟರಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿರುವುದರಿಂದ ಕಾಂಗ್ರೆಸ್‌ ಪಕ್ಷದಲ್ಲಿ ಇನ್ನಷ್ಟು ಹೆಚ್ಚಿನ ರಶ್‌ ಇದೆ. ಸಚಿವ ಎಚ್‌.ಸಿ. ಮಹದೇವಪ್ಪ ಅವರ ಪುತ್ರ ತಿ. ನರಸೀಪುರದ ಸುನೀಲ್‌ ಬೋಸ್‌, ಮಾಜಿ ಶಾಸಕ ಕೊಳ್ಳೇಗಾಲದ ಜಿ.ಎನ್‌. ನಂಜುಂಡಸ್ವಾಮಿ, ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ಡಿ.ಎನ್‌. ನಟರಾಜು ಆಕಾಂಕ್ಷಿಗಳಾಗಿದ್ದು, ಚಟುವಟಿಕೆಯಲ್ಲಿದ್ದಾರೆ. ಇನ್ನೊಂದೆಡೆ. ಧ್ರುವನಾರಾಯಣ ಅವರ ಪುತ್ರ ದರ್ಶನ್‌ ಅವರನ್ನು ಲೋಕಸಭೆಗೆ ಕಳಿಸಬೇಕೆಂಬ ಚಿಂತನೆ ಪಕ್ಷದೊಳಗಿದೆ ಎನ್ನಲಾಗುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಚಾಮರಾಜನಗರ ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಅವರ ಪುತ್ರಿ ಡಾ. ರೇಣುಕಾದೇವಿ ಅಥವಾ ನಂಜುಂಡಸ್ವಾಮಿ ಪುತ್ರ ಮಹೇಶ್‌ ಕುದರ್‌ ಅವರು ಪ್ರಮುಖ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಡಾ. ರೇಣುಕಾದೇವಿ ಅವರು ಸಂತೆಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಹೆರಿಗೆ ಆಸ್ಪತ್ರೆಯ ಗೈನಕಾಲಜಿಸ್ಟ್‌ ಆಗಿ ಉತ್ತಮವಾಗಿ ಕೆಲಸ ನಿರ್ವಹಿಸಿ ಹೆಸರು ಪಡೆದಿದ್ದಾರೆ. ಅವರನ್ನು ರಾಜಕೀಯ ಮುನ್ನಲೆಗೆ ತರಲು ಅವರ ಕುಟುಂಬ ಪ್ರಯತ್ನಗಳನ್ನು ನಡೆಸಿದೆ. ಬಿಜೆಪಿಯಲ್ಲಿ ಮಾಜಿ ಸಚಿವ ಕೋಟೆ ಶಿವಣ್ಣ, ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಂ, ಮಾಜಿ ಶಾಸಕ ಎಸ್‌. ಬಾಲರಾಜು, ಶ್ರೀನಿವಾಸಪ್ರಸಾದ್‌ ಅವರ ಅಳಿಯ ಡಾ. ಮೋಹನ್‌, ವಿಧಾನಪರಿಷತ್‌ ಮಾಜಿ ಸದಸ್ಯ ಸಿ. ರಮೇಶ್‌ ಆಕಾಂಕ್ಷಿಗಳಾಗಿದ್ದಾರೆ. ಶ್ರೀನಿವಾಸ ಪ್ರಸಾದ್‌ ಅವರ ಇನ್ನೋರ್ವ ಅಳಿಯ ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ, ದಲಿತ ಮಹಾಸಭಾ ಅಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಸಹ ಆಕಾಂಕ್ಷಿಯಾಗಿದ್ದಾರೆನ್ನಲಾಗಿದೆ.

– ಕೆ.ಎಸ್‌. ಬನಶಂಕರ ಆರಾಧ್ಯ

ಇದನ್ನೂ ಓದಿ: Inspiration: ಕೂಲಿ ಕೆಲಸ ಮಾಡಿಕೊಂಡಿದ್ದರೂ ತಮಗಿದ್ದ ಜಾಗವನ್ನೇ ಶಾಲೆಗೆ ನೀಡಿದ ಮಹಾದಾನಿ

Advertisement

Udayavani is now on Telegram. Click here to join our channel and stay updated with the latest news.

Next