ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕರಸತ್ತು ಮುಂದುವರೆದಿದ್ದು, ತಮ್ಮ ಹೆಸರು ಪ್ರಕಟಗೊಳ್ಳದೇ ಆಕಾಂಕ್ಷಿಗಳಿಗೆ ನಿದ್ದೆಗೆಡಿಸಿದ್ದ ಮೊದಲ ಪಟ್ಟಿ ಬಳಿಕ ಇದೀಗ 2ನೇ ಪಟ್ಟಿ ಬಿಡುಗಡೆ ದಿನಗಣನೆ ಶುರುವಾಗಿದ್ದು, ಸ್ಪರ್ಧೆಗೆ ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಠಿಸಿದೆ.
ಕಾಂಗ್ರೆಸ್ ಈಗಾಗಲೇ 7 ಮಂದಿ ಅಂತಿಮ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಪ್ರಕಟಿಸದೇ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕುತೂಹಲ ಮುಂದು ವರೆದಿದೆ. ಬಿಜೆಪಿ ಕೂಡ ಒಂದರೆಡು ದಿನದಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದು, ಮೊದಲ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಗೊಳ್ಳುತ್ತಾ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಭ್ಯರ್ಥಿ ಹೆಸರು ಪ್ರಕಟ ಮಾತ್ರ ಬಾಕಿ: ಈಗಾಗಲೇ ಒಂದು ಹಂತಕ್ಕೆ ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಬಿಜೆಪಿಗೆ ಒಲಿಯುವುದು ಪಕ್ಕಾ ಆಗಿದ್ದು, ಅಂತಿಮ ಅಭ್ಯರ್ಥಿ ಹೆಸರು ಪ್ರಕಟ ಮಾತ್ರ ಬಾಕಿ ಇದೆ. ಡಾ.ಕೆ. ಸುಧಾಕರ್, ಅಲೋಕ್ ಕುಮಾರ್ ಹೆಸರು ಮುಂಚೂಣಿಯಲ್ಲಿದ್ದರೂ ಹಲವು ದಿನಗಳಿಂದ ಮತ್ತೆ ಸುಧಾಕರ್‌ಗೆ ಟಿಕೆಟ್ ಖಚಿತ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿವೆ. ಮತ್ತೂಂದಡೆ ಕಾಂಗ್ರೆಸ್‌ನಲ್ಲಿ ರಕ್ಷಾ ರಾಮಯ ಹೆಸರು ಅಂತಿಮ ಹುರಿಯಾಳು ಎನ್ನುತ್ತಿದ್ದರೂ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಗೊಳ್ಳದೇ ಇರುವುದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ಮುಂದುವರೆದಿದೆ.
ಒಂದು ಕಡೆ ವೀರಪ್ಪ ಮೊಯ್ಲಿ,ಮತ್ತೂಂದು ಕಡೆ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಕಾಂಗ್ರೆಸ್ ಟಿಕೆಟ್‌ಗೆ ಭಾರೀ ಪೈಪೋಟಿ ನಡೆಸುತ್ತಿರುವುದರಿಂದ ಸಹಜವಾಗಿಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ತೀವ್ರ ಕುತೂಹಲ ಮೂಡಿಸಿದೆ.
ಒಟ್ಟಾರೆ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಸ್ಪರ್ಧಾ ಆಕಾಂಕ್ಷಿಗಳ ಆಯ್ಕೆ ವಿಚಾರ ಕ್ಲೈಮ್ಯಾಕ್ಸ್ ತಲುಪಿಸಿದ್ದು, ಅವರ ರಾಜಕೀಯ ಭವಿಷ್ಯ ದೆಹಲಿ ಮಟ್ಟದ ಪಕ್ಷಗಳ ವರಿಷ್ಠರ ಅಂಗಳ ಮುಟ್ಟಿದೆ. ಬಹುತೇಕ ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟಗೊಳ್ಳುವ ಮೊದಲೇ ಕ್ಷೇತ್ರದ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಆಗುತ್ತಾ ಎಂದು ರಾಜಕೀಯ ಪಕ್ಷಗಳ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರು ಅಂತೂ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.
ಜಾತಿ ಸಮೀಕರಣ, ಹಣದ ಲೆಕ್ಕಾಚಾರ! : ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಒಂದು ಕಾಲಕ್ಕೆ ಅಹಿಂದ ವರ್ಗಕ್ಕೆ ಹೆಚ್ಚು ಮಣೆ ಹಾಕಿದ್ದ ಕ್ಷೇತ್ರದಲ್ಲೀಗ ರಾಜಕೀಯ ಪಕ್ಷಗಳು ಪ್ರಬಲ ಕೋಮಿನ ಅಭ್ಯರ್ಥಿಗಳಿಗೆ ಮಣೆ ಹಾಕಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಜಾತಿ ಸಮೀಕರಣದ ಜೊತೆಗೆ ಹಣ ಬಲದ ಲೆಕ್ಕಾಚಾರದಲ್ಲಿ ತೊಡಗಿವೆ. ಬಿಜೆಪಿ ಒಕ್ಕಲಿಗ ಸಮುದಾಯಕ್ಕೆ ಹಾಗೂ ಕಾಂಗ್ರೆಸ್ ಬಲಿಜ ಸಮುದಾಯಕ್ಕೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಆ ರೀತಿಯಾದರೆ ಬಿಜೆಪಿ ಪಕ್ಷದಿಂದ ಡಾ.ಕೆ. ಸುಧಾಕರ್ ಹಾಗೂ ಕಾಂಗ್ರೆಸ್‌ನಿಂದ ರಕ್ಷಾ ರಾಮಯ್ಯ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನುತ್ತಿದ್ದು ಅಂತಿಮ ಪಟ್ಟಿ ಪ್ರಕಟಗೊಳ್ಳುವವರೆಗೂ ಸ್ಪರ್ಧಾ ಆಕಾಂಕ್ಷಿಗಳನ್ನು ತುದಿಗಾಲಲ್ಲಿ ನಿಲ್ಲಿಸಿವೆ.
– ಕಾಗತಿ ನಾಗರಾಜಪ್ಪ