Advertisement

ಲೋಕ ಸಮರ: ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

08:36 AM May 22, 2019 | Team Udayavani |

ಚಿಕ್ಕಬಳ್ಳಾಪುರ: ಕಳೆದ ಏ.18 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಟ್ಟು 2,284 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ.23 ರಂದು ನಗರದ ಹೊರ ವಲಯದ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಯು ಆಗಿರುವ ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 9,10,472 ಮಂದಿ ಪುರುಷ, 8.97,681 ಮಹಿಳಾ ಹಾಗೂ 238 ಇತರೆ ಮತದಾರರು ಸೇರಿ 18,08,391 ಮಂದಿ ಪೈಕಿ 7,06.695 ಪುರುಷ, 6,78,656 ಮಹಿಳೆಯರ ಹಾಗೂ ಇತರೆ 36 ಮಂದಿ ಸೇರಿ ಒಟ್ಟು 13,85,387 ಮಂದಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದು, ಶೇ.76.61 ಮತದಾನ ದಾಖಲುಗೊಂಡಿದೆ ಎಂದರು.

10 ಕೊಠಡಿಗಳಲ್ಲಿ ಮತ ಎಣಿಕೆ: ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಕೊಠಡಿಯಲ್ಲಿ ಮತ ಎಣಿಕೆ ನಡೆದರೆ, ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಎರಡು ಕೊಠಡಿಗಳಲ್ಲಿ ಹಾಗೂ ಅಂಚೆ ಮತಗಳಿಗೆ ಒಂದು ಕೊಠಡಿ ಸೇರಿ ಒಟ್ಟು 10 ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮತ ಎಣಿಕೆ ಕಾರ್ಯಕ್ಕೆ ತಲಾ 10 ಟೇಬಲ್ಗಳಂತೆ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಹಾಗೂ ಅಂಚೆ ಮತಗಳ ಎಣಿಕೆಗೆ 4, ಇಟಿಪಿಬಿಎಸ್‌ಗೆ 1 ಸೇರಿ ಒಟ್ಟು 89 ಟೇಬಲ್ಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದರು.

ಮತ ಎಣಿಕೆಗೆ 89 ಮೇಲ್ವಿಚಾರಕರು: ಮತ ಎಣಿಕೆ ಕಾರ್ಯವನ್ನು ಒಟ್ಟು 222 ಸುತ್ತುಗಳಲ್ಲಿ ನಡೆಯಲಿದೆ. ಆ ಪೈಕಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ 27, ಬಾಗೇಪಲ್ಲಿ 27, ಚಿಕ್ಕಬಳ್ಳಾಪುರ 26, ಯಲಹಂಕ 27, ಹೊಸಕೋಟೆ 29, ದೇವನಹಳ್ಳಿ 30, ದೊಡ್ಡಬಳ್ಳಾಪುರ 28, ನೆಲಮಂಗಲ 28 ಸೇರಿ ಒಟ್ಟು 222 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

Advertisement

ಹೊಸಕೋಟೆ ಹಾಗೂ ದೇವನಹಳ್ಳಿ ಕ್ಷೇತ್ರಗಳಲ್ಲಿ ಉಳಿದ ಕ್ಷೇತ್ರಗಳಿಂದ ಹೆಚ್ಚು ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮತ ಎಣಿಕೆ ವೇಳೆ ಸುಗಮ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರತಿ ಕ್ಷೇತ್ರಕ್ಕೆ ತಲಾ 10 ಹಾಗೂ ಯಲಹಂಕ ಕ್ಷೇತ್ರಕ್ಕೆ 14 ಮಂದಿ ಸೇರಿ ಒಟ್ಟು 89 ಮಂದಿ ಎಣಿಕೆ ಮೇಲ್ವಿಚಾರಕರನ್ನು ಕೂಡ ನೇಮಿಸಲಾಗಿದೆ.

ಎಣಿಕೆಗೆ ಒಟ್ಟು 90 ರಿಂದ 120 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಣಿಕೆ ಸೂಕ್ಷ್ಮ ವೀಕ್ಷಕರಾಗಿ ಒಟ್ಟು 89 ಮಂದಿಯನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೊದಲು ಅಂಚೆ ಮತ ಎಣಿಕೆ: ಮೊದಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಬಳಿಕವಷ್ಟೇ ಇವಿಎಂ ಮತಗಳ ಎಣಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿಗಳು, ಬೂತ್‌ ಏಜೆಂಟರು, ಎಣಿಕೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಮಾಧ್ಯಮದವರನ್ನು ಹೊರತುಪಡಿಸಿ ಬೇರೆ ಯಾರನ್ನು ಕೂಡ ಒಳಗೆ ಬಿಡುವುದಿಲ್ಲ.

ಪ್ರತಿಯೊಬ್ಬರಿಗೂ ಗುರುತಿಚಿನ ಚೀಟಿ ವಿತರಿಸಲಾಗಿದ್ದು, ಗುರುತಿನ ಚೀಟಿ ತೋರಿಸಿದರೆ ಮಾತ್ರ ಒಳಗೆ ಬಿಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ ಇವಿಎಂ ಹಾಗು ವಿವಿಪ್ಯಾಟ್ ಯಂತ್ರಗಳನ್ನು ತಂದು ಕೊಡುವ ಸಿಬ್ಬಂದಿಗೆ ಪ್ರತ್ಯೇಕವಾಗಿ ಸಮವಸ್ತ್ರ ವಿತರಿಸಲಾಗುವುದು ಎಂದು ತಿಳಿಸಿದರು.

2,380 ಅಂಚೆ ಮತಗಳ ಸ್ವೀಕಾರ: ಜಿಲ್ಲೆಯಲ್ಲಿ ಇದುವರೆಗೂ ಕೇವಲ 2,380 ಅಂಚೆ ಮತಗಳ ಸ್ವೀಕಾರ ಆಗಿದೆ. ಆ ಪೈಕಿ ಗೌರಿಬಿದನೂರು ಕ್ಷೇತ್ರದಲ್ಲಿ 265, ಬಾಗೇಪಲ್ಲಿ 39, ಚಿಕ್ಕಬಳ್ಳಾಪುರ 533, ಯಲಹಂಕ ಕ್ಷೇತ್ರದಲ್ಲಿ 733, ಹೊಸಕೋಟೆ ಕ್ಷೇತ್ರದಲ್ಲಿ 169, ದೇವನಹಳ್ಳಿ ಕ್ಷೇತ್ರದಲ್ಲಿ 111, ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 238, ನೆಲಮಂಗಲ ಕ್ಷೇತ್ರದಲ್ಲಿ ಒಟ್ಟು 292 ಸೇರಿ ಒಟ್ಟು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 2,380 ಅಂಚೆ ಮತಗಳು ಸಲ್ಲಿಕೆಯಾಗಿವೆ. ಮೇ.23 ರಂದು ಬೆಳಗ್ಗೆ 8 ಗಂಟೆಯ ವ ರೆಗೂ ಉಳಿದ ಅಂಚೆ ಮತಗಳ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದರು.

ಮತ ಎಣಿಕೆಗೆ ವಿಧಾನಸಭಾ ಕ್ಷೇತ್ರವಾರು ವಿವರ:

ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ, ಮದ್ಯ ಮಾರಾಟ ಬಂದ್‌

ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೇ 22 ರ ಮಧ್ಯರಾತ್ರಿಯಿಂದ 23 ರ ಮಧ್ಯರಾತ್ರಿಯವರೆಗೂ ಕೂಡ ಜಿಲ್ಲೆಯ ಎಲ್ಲಾ ಬಾರ್‌ ಆ್ಯಂಡ್‌ ರೆಸ್ಟೋರೆಂಟ್, ವೈನ್‌ಶಾಪ್‌ಗ್ಳನ್ನು ಬಂದ್‌ ಮಾಡಿ ಸಂಪೂರ್ಣ ಶುಷ್ಕ ದಿನ ಆಚರಿಸಲಾಗುವುದು. ಅದೇ ರೀತಿ ಮೇ 23 ರ ಬೆಳಗ್ಗೆ 6 ರಿಂದ 24 ರ ಮಧ್ಯರಾತ್ರಿ 12 ರ ತನಕ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ಅನ್ವಯ ಷರತ್ತುಗಳಿಗೆ ಒಳಪಡಿಸಿ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರದಲ್ಲಿ ಮಾಧ್ಯಮ ಕೇಂದ್ರ ಸ್ಥಾಪನೆ:

ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿರುವ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸುಸಜ್ಜಿತವಾದ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದ್ದು ಪತ್ರಕರ್ತರಿಗೆ ಅನುಕೂಲವಾಗುವಂತೆ 10 ಕಂಪ್ಯೂಟರ್‌, ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತಿ ಸುತ್ತಿನ ಮತಗಳ ವಿವರವನ್ನು ಚುನಾವಣಾ ಆಯೋಗದ ಸುವಿಧಾ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದ ಕಾಲಕಾಲಕ್ಕೆ ಮಾಧ್ಯಮಗಳಿಗೆ ತಿಳಿಸಲಾಗುವುದು. ಮತ ಎಣಿಕೆಗೂ ಮೊದಲು ಸ್ಟ್ರಾಂಗ್‌ ರೂಮ್‌ ತೆರೆಯುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರತಿ ಕ್ಷೇತ್ರದಲ್ಲಿ 5 ವಿವಿಪ್ಯಾಟ್ ಸ್ಲಿಪ್‌ ಎಣಿಕೆ:ಸುಪ್ರೀಂ ಕೋರ್ಟ್‌ ಆದೇಶದಂತೆ ಈ ಬಾರಿ ಲೋಕಸಭಾ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ಇವಿಎಂ ಮತಗಳ ಎಣಿಕೆ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಮತಗಟ್ಟೆಗಳ ವಿವಿಪ್ಯಾಟ್‌ಗಳ ಸ್ಲಿಪ್‌ಗ್ಳನ್ನು ಎಣಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು
Advertisement

Udayavani is now on Telegram. Click here to join our channel and stay updated with the latest news.

Next