ಹಾವೇರಿ: ರಾಜ್ಯದ ಹಲವು ಬಿಜೆಪಿ ಸಂಸದರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದಿಲ್ಲ ಎಂಬ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹಾವೇರಿಯಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಇದಕ್ಕೆ ಪುಷ್ಠಿ ನೀಡುವಂತೆ ಹೇಳಿಕೆ ನೀಡಿದ್ದಾರೆ.
“ಹಾವೇರಿಯ ಲೋಕಸಭಾ ಚುನಾವಣೆ ಇರಬಹುದು, ಯಾವುದೇ ಚುನಾವಣೆಗೆ ಟಿಕೆಟ್ ಮುಂದುವರಿಸುವ ಅವಶ್ಯಕತೆ ಇಲ್ಲ” ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಹತ್ತುಕ್ಕೂ ಹೆಚ್ಚು ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಮಿಸ್ಸಾಗಲಿದೆ ಎನ್ನುವ ಚರ್ಚೆ ಬೆನ್ನಲ್ಲೇ ಟಿಕೆಟ್ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಈಶ್ವರಪ್ಪ ಹೇಳಿರುವುದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಹಿರಿಯರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಇದೇ ಟ್ರೆಂಡ್ ಲೋಕಸಭೆಗೂ ಮುಂದುವರಿಯುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಹಾವೇರಿಯ ಸಿಂದಗಿಮಠಕ್ಕೆ ಕುಟುಂಬ ಸಮೇತ ಮಠಕ್ಕೆ ಆಗಮಿಸಿದ ಕೆಎಸ್ ಈಶ್ವರಪ್ಪ ಅವರು ರುದ್ರ ಹೋಮ, ಶತರುದ್ರಾಭಿಷೇಕದಲ್ಲಿ ಭಾಗಿಯಾದರು. “ಕಳೆದ 25 ವರ್ಷಗಳಿಂದ ಸಿಂದಗಿ ಮಠದ ಸಂಪರ್ಕದಲ್ಲಿದ್ದೇನೆ. ಅನೇಕ ಸಲ ಸಿಂದಗಿಮಠಕ್ಕೆ ಭೇಟಿ ನೀಡಿದ್ದೇನೆ. ಲೋಕ ಕಲ್ಯಾಣಕ್ಕಾಗಿ ರುದ್ದಹೋಮ ಶತರುದ್ರಾಭಿಷೇಕ ಮಾಡಿಸುತ್ತಿದ್ದೇನೆ” ಎಂದರು.
ಇದನ್ನೂ ಓದಿ:Roti Ghar..: ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ? ಒಂದು ರುಪಾಯಿಗೆ ಫುಲ್ ಮೀಲ್ಸ್!
ಲೋಕ ಸಮರಕ್ಕೆ ಯಾರು ಆಗಬೇಕು ಎನ್ನುವುದನ್ನು ರಾಜ್ಯ, ರಾಷ್ಟ್ರ ಸಮಿತಿಯವರು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ನಾನು ಬದ್ದ. ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ರಾಜಕಾರಣ ಬೇಡ ಎನ್ನುವ ಸೂಚನೆ ಬಂದಿತ್ತು. ಸೂಚನೆ ಬಂದ ಐದು ನಿಮಿಷದಲ್ಲಿ ನಾನು ಪತ್ರ ಬರೆದಿದ್ಧೆ. ಇದನ್ನು ಮೆಚ್ಚಿ ಪ್ರಧಾನ ಮಂತ್ರಿಗಳು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಅದನ್ನು ಬಿಟ್ಟರೆ ಮಗನಿಗೆ ಲೋಕಸಭಾ ಟಿಕೆಟ್ ನೀಡುವ ಮಾತುಕತೆ ಆಗಿರಲಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ನನಗೆ ಯಾವುದೇ ಪ್ರಾಮಿಸ್ ಬಂದಿಲ್ಲ, ನಾನು ಕೇಳಿಲ್ಲ ಎಂದರು.
ಶಿವಕುಮಾರ್ ಉದಾಸಿಯವರು ಚುನಾವಣೆಗೆ ನಿಲ್ಲುವುದಿಲ್ಲಎಂದು ನನ್ನ ಬಳಿ ಹೇಳಿದ್ದಾರೆ. ಈ ಭಾಗದ ಮಾಜಿ ಶಾಸಕರು, ಮಠಾಧೀಶರು ಹಾವೇರಿ ಕ್ಷೇತ್ರದಿಂದ ಚುನಾವಣೆಗೆ ಒಳ್ಳೆಯದು ಎಂದು ಹೇಳಿದ್ದಾರೆ. ಜನರು, ಕಾರ್ಯಕರ್ತರು ಅಪೇಕ್ಷೆ ಪಡುತ್ತಿದ್ದಾರೆ ಎಂದರು.