Advertisement
ರಾಹುಲ್ ಈ ಹೇಳಿಕೆ ನೀಡುತ್ತಿದ್ದಂತೆಯೇ ಸದನ ನಗೆಗಡಲಲ್ಲಿ ತೇಲಿದ್ದು, ಕೇಂದ್ರ ಸಚಿವರು ಸೇರಿದಂತೆ ಬಿಜೆಪಿಯ ನಾಯಕರೆಲ್ಲರೂ ಗೊಳ್ಳೆಂದು ನಕ್ಕಿದ್ದು ಕಂಡುಬಂತು. ಇನ್ನು, ರಾಹುಲ್ ಹೇಳಿಕೆಯ ವೀಡಿಯೋ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಸಂಬಿತ್ ಪಾತ್ರಾ, “ರಾಹುಲ್ ಅವರಿಗೆ ಇಂಥ ಅದ್ಭುತ ಜ್ಞಾನ ಬರುವುದು ಜಾರ್ಜ್ ಸೊರೊಸ್‌ರಿಂದ. ರಾಹುಲ್ ಅವರು ಪ್ರಮಾದಗಳ ಅನಭಿಷಿಕ್ತ ದೊರೆಯಾಗಿಯೇ ಉಳಿದಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ, ಮಹಾಭಾರತದಲ್ಲಿನ ದ್ರೋಣಾಚಾರ್ಯ-ಏಕಲವ್ಯ ಕಥೆಯನ್ನು ಪ್ರಸ್ತಾವಿ ಸುವ ಮೂಲಕ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಈ ಮೂಲಕ ಉದ್ಯಮಿ ಗೌತಮ್ ಅದಾನಿಗೆ ಕೇಂದ್ರ ಮಣೆ ಹಾಕುತ್ತಿರುವ ಬಗ್ಗೆ ಉಲ್ಲೇಖೀಸಿದ್ದಾರೆ. “ಏಕಲವ್ಯ ಎಂಬ ಯುವಕ ಮುಂಜಾನೆಯೇ ಎದ್ದು ಬಿಲ್ವಿದ್ಯೆ ಅಭ್ಯಾಸ ಮಾಡುತ್ತಿದ್ದ. ಇದು ಆತನ ತಪಸ್ಸಾಗಿತ್ತು. ತಪಸ್ಸು ಎಂದರೆ ಶರೀರದಲ್ಲಿ ತಾಪವನ್ನು ಉತ್ಪತ್ತಿ ಮಾಡುವುದು’ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಂತೆ, ಇಡೀ ಸದನದ ನಗೆಗಡಲಲ್ಲಿ ತೇಲಿತು. ಮಾತು ಮುಂದುವರಿಸಿದ ರಾಹುಲ್, “ಆ ಏಕಲವ್ಯನ ಬೆರಳುಗಳನ್ನು ದ್ರೋಣಾಚಾರ್ಯರು ಕತ್ತರಿಸಿದರೆ, ಈಗ ಮೋದಿ ಸರಕಾರವು ದೇಶದ ಯುವಕರ ಬೆರಳುಗಳನ್ನು ಕತ್ತರಿಸುತ್ತಿದೆ. ದೇಶದ ವಿವಿಧ ಕ್ಷೇತ್ರಗಳನ್ನು ಒಬ್ಬ ಉದ್ಯಮಿಯ ಕೈಗೆ ನೀಡುತ್ತಿದೆ. ಧಾರಾವಿಯನ್ನು ಅದಾನಿಗೆ ಕೊಟ್ಟೊಡನೆ, ದೇಶದ ಇತರ ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬೆರಳು ಕತ್ತರಿಸಿದಂತೆ, ದೇಶದ ಬಂದರು, ಏರ್‌ಪೋರ್ಟ್‌ಗಳು, ರಕ್ಷಣ ಉದ್ದಿಮೆಗಳನ್ನು ಅದಾನಿಗೆ ಹಸ್ತಾಂತರಿಸಿದೊಡನೆ, ನ್ಯಾಯಯುತವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಉದ್ದಿಮೆಗಳ ಬೆರಳು ಕತ್ತರಿಸಿದಂತೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.