ಹೊಸದಿಲ್ಲಿ: ಲೋಕಪಾಲ ಆಯ್ಕೆ ಸಮಿತಿಯ ಸಭೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಹಿಷ್ಕಾರ ಹಾಕಿದ್ದಾರೆ. ವಿಪಕ್ಷ ನಾಯಕ ರನ್ನು ವಿಶೇಷ ಆಹ್ವಾನಿತರು ಎಂದು ಆಹ್ವಾನಿಸಲಾಗಿರುವುದು ಅಭಿಪ್ರಾಯ ಹತ್ತಿಕ್ಕುವ ಬಿಜೆಪಿ ಪ್ರಯತ್ನ ಎಂದು ಖರ್ಗೆ ಆರೋಪಿಸಿದ್ದಾರೆ.
ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013ರ ಪ್ರಕಾರ ಲೋಕಸಭೆಯಲ್ಲಿ ವಿಪಕ್ಷ ನಾಯಕರು ಮಾತ್ರವೇ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಆದರೆ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ವಿಪಕ್ಷ ಸ್ಥಾನಮಾನವಿಲ್ಲ. ಹೀಗಾಗಿ ಖರ್ಗೆ ವಿಪಕ್ಷ ಮುಖಂಡರಾಗಿಲ್ಲ ಎಂಬ ಕಾರಣಕ್ಕೆ ವಿಶೇಷ ಆಹ್ವಾನಿತರು ಎಂದು ಸಭೆಗೆ ಆಹ್ವಾನಿಸ ಲಾಗಿದೆ. ಗುರುವಾರ ಈ ಸಭೆ ನಡೆದಿದೆ.
ಕಾನೂನು ತಿದ್ದುಪಡಿ ಮಾಡಿ: ಈ ಸಂಬಂಧ ಸೂಕ್ತ ಕಾನೂನು ತಿದ್ದುಪಡಿ ಮಾಡಬೇಕು. ವಿಪಕ್ಷ ನಾಯಕ ಎಂಬುದರ ಬದಲಿಗೆ ಲೋಕಸಭೆ ಯಲ್ಲಿನ ಅತಿದೊಡ್ಡ ಪಕ್ಷದ ನಾಯಕ ರನ್ನು ಸದಸ್ಯರನ್ನಾಗಿ ಪರಿಗಣಿಸಬೇಕು ಎಂದು ಖರ್ಗೆ ಹೇಳಿದ್ದು, ಕೇಂದ್ರ ಸರಕಾರಕ್ಕೆ ಬರೆದ ಪತ್ರದಲ್ಲೂ ಉಲ್ಲೇಖೀಸಿದ್ದಾರೆ.
ಕಣ್ಣೊರೆಸುವ ತಂತ್ರ: ಈ ಸಭೆಯಲ್ಲಿ ವಿಶೇಷ ಆಹ್ವಾನಿತನಾಗಿ ಭಾಗವಹಿಸಲು ಅವಕಾಶ ನೀಡಿರು ವುದು ಕಣ್ಣೊರೆಸುವ ತಂತ್ರ. ನನಗೆ ಅಭಿಪ್ರಾಯ ದಾಖಲಿಸುವ, ಮತ ಚಲಾವಣೆ ಹಕ್ಕು ಇರುವುದಿಲ್ಲ. ಹೀಗಾಗಿ ಕೇವಲ ಆಯ್ಕೆ ಪ್ರಕ್ರಿಯೆಯಲ್ಲಿ ವಿಪಕ್ಷ ದವರನ್ನೂ ಸೇರಿಸಿಕೊಳ್ಳಲಾಗಿದೆ ಎಂದು ತೋರಿಸಿ ಕೊಳ್ಳುವ ತಂತ್ರವಿದು ಎಂದು ಖರ್ಗೆ ಹೇಳಿದ್ದಾರೆ.
ಮತ್ತೆ ನೇಮಕಾತಿ ನನೆಗುದಿಗೆ ?
ಈ ವಿವಾದದಿಂದಾಗಿ ಲೋಕಾಯುಕ್ತ ನೇಮಕಾತಿ ಮತ್ತೆ ನನೆಗುದಿಗೆ ಬೀಳುವ ಸಾಧ್ಯತೆಯಿದೆ. ಅತಿದೊಡ್ಡ ಪಕ್ಷದ ಮುಖಂಡ ಖರ್ಗೆ ಹಾಜರಾಗದ್ದರಿಂದ ಸಭೆಯ ನಿರ್ಧಾರ ಮಾನ್ಯವಾಗಿರುವುದಿಲ್ಲ. ಆದರೆ ಈ ಸಂಬಂಧ ಸುಪ್ರೀಂ ಕೋರ್ಟ್‌ನ ಮುಂದಿನ ವಿಚಾರಣೆಯ ವೇಳೆ ನೀಡಲಾಗುವ ಆದೇಶದ ಕಡೆಗೆ ಈಗ ಕೇಂದ್ರ ಗಮನಹರಿಸಿದೆ.