Advertisement

ಆದಾಯಕ್ಕಿಂತ ಅಧಿಕ ಆಸ್ತಿ: ಲೋಕೋಪಯೋಗಿ ಎಂಜಿನಿಯರ್‌ ಖುಲಾಸೆ

10:42 PM Feb 11, 2023 | Team Udayavani |

ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಅರುಣ್‌ ಪ್ರಕಾಶ್‌ ಡಿ’ಸೋಜಾ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

Advertisement

ಬಂಟ್ವಾಳದಲ್ಲಿ ಸಹಾಯಕ ಜೂನಿಯರ್‌ ಆಗಿದ್ದ ಅವರ ಬಂಟ್ವಾಳದಲ್ಲಿದ್ದ ಮನೆಗೆ 2014ರ ಡಿ.19ರಂದು ಮಂಗಳೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಿವಿಧ ದಾಖಲೆಗಳು, ಚಿನ್ನಾಭರಣಗಳು, ನಗದು, ಠೇವಣಿಪತ್ರ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದರು. ಲಂಚ ವಿರೋಧಿ ಕಾಯ್ದೆ 1988ರ ಕಲಂ 13(1)(ಇ )ಮತ್ತು 13(2)ರಂತೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಆರೋಪಿ ಪರ ನ್ಯಾಯವಾದಿ ದಿನೇಶ್‌ ಹೆಗ್ಡೆ ಉಳೆಪಾಡಿ ವಾದಿಸಿದ್ದರು. ಲೋಕಾಯುಕ್ತ ಪೊಲೀಸರು ಯಾವುದೇ ವೈಜ್ಞಾನಿಕ ವಿಧಾನ ಅನುಸರಿಸದೆ ಸುಳ್ಳು ಆರೋಪ ಪಟ್ಟಿಯನ್ನು ದಾಖಲಿಸಿದ್ದಾರೆ. ಆಭರಣಗಳಿಗೆ ಸಂಬಂಧಿಸಿ ಆಯಾ ಕಾಲ ಘಟ್ಟದಲ್ಲಿ ಚಾಲ್ತಿಯಲ್ಲಿದ್ದ ಮೌಲ್ಯದ ಬದಲು ದಾಳಿ ಮಾಡಿದ ದಿನಾಂಕದ ಮೌಲ್ಯ ಪರಿಗಣಿಸಿದ್ದಾರೆ. ಆರೋಪಿಯ ಪತ್ನಿ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದು, ಅವರಿಗೆ ಹಿರಿಯರಿಂದ ಆಸ್ತಿ, ಬಂಗಾರದ ಒಡವೆಗಳು ಬಳುವಳಿಯಾಗಿ ಬಂದಿತ್ತು. ಅವುಗಳಲ್ಲಿ ಕೆಲವು ಆಸ್ತಿಗಳನ್ನು ಮಾರಾಟ ಮಾಡಿದ ಹಣವೂ ಇತ್ತು. ಇವೆಲ್ಲವನ್ನೂ ಆರೋಪಿಯ ಖಾತೆಗೆ ಪರಿಗಣಿಸಿ ಸುಳ್ಳು ಆರೋಪ ಮಾಡಲಾಗಿದೆ. ಆರೋಪಿ ಯಾವುದೇ ಆಸ್ತಿ ಸಂಪಾದನೆ ಮಾಡಿದ್ದ ಬಗ್ಗೆ ದಾಖಲೆಗಳು ಇಲ್ಲ. ತನ್ನ ಸೇವಾ ಅವಧಿಯಲ್ಲಿ ಯಾವುದೇ ಬಂಗಾರದ ಒಡವೆಗಳನ್ನು ಖರೀದಿಸಿಲ್ಲ. ವಶಪಡಿಸಿಕೊಂಡಿರುವ ಬಂಗಾರ ಗಳಲ್ಲಿ ಸ್ವಲ್ಪ ಅಂಶ ಅವರ ತಾಯಿಗೆ ಸಂಬಂಧಿಸಿದ್ದು, ಅವರು 2008ರಲ್ಲಿ ಮೃತಪಟ್ಟಿದ್ದಾರೆ. ಬಳಿಕ ಇಬ್ಬರು ಸಹೋದರ ಮತ್ತು ಒಬ್ಬ ಸಹೋದರಿಯೊಂದಿಗೆ ಜಂಟಿ ಹಕ್ಕನ್ನು ಹೊಂದಿದ್ದಾರೆ. ಉಳಿದ ಚಿನ್ನ ಮತ್ತು ಠೇವಣಿ ಪತ್ನಿಗೆ ಸಂಬಂಧಿಸಿದ್ದಾಗಿದೆ.

ಲೋಕಾಯುಕ್ತ ಪೊಲೀಸರು ಆರೋಪಿ ಮತ್ತು ಆತನ ಪತ್ನಿಯ ಆದಾಯಗಳನ್ನು ಬೇರೆ ಬೇರೆಯಾಗಿ ಪರಿಗಣಿಸದೆ ಆರೋಪಿಯ ಖಾತೆಗೆ ಸೇರಿಸಿದ್ದಾರೆ. ಇದು ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ತನಿಖೆ ಎಂದು ವಾದಿಸಿದ್ದರು.

ವಾದವನ್ನು ಪುರಸ್ಕರಿಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಫೆ.10ರಂದು ಅಂತಿಮ ತೀರ್ಮಾನ ಪ್ರಕಟಿಸಿ ಆರೋಪಿಯನ್ನು ದೋಷಮುಕ್ತಗೊಳಿಸಿದೆ. ವಶಪಡಿಸಿಕೊಂಡಿರುವ ಎಲ್ಲ ಸೊತ್ತು, ದಾಖಲೆಗಳನ್ನು ಹಿಂದಿರುಗಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Advertisement

ಇದನ್ನೂ ಓದಿ: ಸುಳ್ಯ: ಪಯಸ್ವಿನಿ ನದಿಯಲ್ಲಿ ಮುಳುಗಿ ಪುತ್ತೂರಿನ ಇಬ್ಬರು ಯುವಕರು ಸಾವು

Advertisement

Udayavani is now on Telegram. Click here to join our channel and stay updated with the latest news.

Next