ಹೊಸದಿಲ್ಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಲವು ಹಿರಿಯರು ಸೋತಿದ್ದು, ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಮುಖ ಐವರು ಹಿರಿಯ ನಾಯಕರ ಆಸನ ಖಾಲಿಯಾಗಿದೆ. ಅಷ್ಟೇ ಅಲ್ಲ, ಇಡೀ ಲೋಕಸಭೆ ಈಗ ಸಂಪೂರ್ಣ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಸ್ಪೀಕರ್ ಎದುರಿನ ಭಾಗದಲ್ಲಿ ಈಗ ಎನ್‌ಡಿಎಗೆ ಹೆಚ್ಚಿನ ಆಸನಗಳು ಸಿಗಲಿದ್ದು, ಕಾಂಗ್ರೆಸ್‌ಗೆ ಕೇವಲ ಎರಡೇ ಆಸನ ಮುಂದಿನ ಸಾಲಿನಲ್ಲಿ ಸಿಗಲಿವೆ.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಈ ಬಾರಿ ಲೋಕಸಭೆಯಲ್ಲಿಲ್ಲ. ಎಐಎಡಿಎಂಕೆ ನಾಯಕ ತಂಬಿದುರೈ ಕೂಡ ಸೋತಿದ್ದಾರೆ. ಹೀಗಾಗಿ ಅವರು, 17ನೇ ಲೋಕಸಭೆಯಲ್ಲಿ ಮೊದಲ ಸಾಲಿನಲ್ಲಿ ಕಾಣಸಿಗಲಾರರು.
ಲೋಕಸಭೆಯಲ್ಲಿ ಮೊದಲ ಸಾಲಿನಲ್ಲಿ ಸಾಮಾನ್ಯವಾಗಿ ಹಿರಿಯ ಸಂಸದರು, ಮಾಜಿ ಪ್ರಧಾನಿಗಳು, ಹೆಚ್ಚು ಸದಸ್ಯ ಬಲ ಹೊಂದಿ ರುವ ಪಕ್ಷಗಳ ನಾಯಕರಿಗೆ ಮೀಸಲಿಡ ಲಾಗುತ್ತದೆ. ಬಿಜೆಡಿಯ ಭತೃìಹರಿ ಮಹತಾಬ್ ಮತ್ತು ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ 2014ರಿಂದ ಮೊದಲ ಸಾಲಿನಲ್ಲೇ ಕುಳಿತಿದ್ದರು. ಆದರೆ ಈ ಬಾರಿ ಎರಡೂ ಪಕ್ಷಗಳ ಸದಸ್ಯರ ಸಂಖ್ಯೆ 22 ಹಾಗೂ 10ಕ್ಕೆ ಇಳಿದಿದ್ದರಿಂದ ಇವರು ಮೊದಲ ಸಾಲಿನಿಂದ ಹಿಂದಿನ ಸಾಲಿಗೆ ಸಾಗುವ ಸಾಧ್ಯತೆಯಿದೆ.
ಇದರಿಂದ ಬಿಜೆಪಿ ಒಟ್ಟು 2 ಹೆಚ್ಚುವರಿ ಸೀಟುಗಳನ್ನು ಪಡೆಯಲಿದ್ದು, ಎನ್‌ಡಿಎಯ ಕೋಟಾ 12 ಸೀಟುಗಳಿಗೆ ಏರಿಕೆ ಯಾಗಲಿದೆ. ಸ್ಪೀಕರ್ ಎದುರು ಬಲಭಾಗದ ಮೊದಲ ಸಾಲಿನ ಮೊದಲ ಆಸನ ಪ್ರಧಾನಿಯದ್ದು. ಅವರ ಬಲ ಆಸನವು ಹಿರಿಯ ಸಚಿವರಿಗೆ ನೀಡಲಾಗುತ್ತದೆ. 2014ರಲ್ಲಿ ಈ ಆಸನದಲ್ಲಿ ರಾಜನಾಥ್ ಸಿಂಗ್ ಇದ್ದರು. ಅಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುಳಿತುಕೊಳ್ಳುವ ಸಾಧ್ಯತೆಯಿದೆ.