ಉಡುಪಿ: ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿ ಅವರು ಕುಂಜಿಬೆಟ್ಟುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಸತಿ ನಿಲಯ ಹಳೆಯದ್ದಾಗಿದ್ದು, ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದರು. ವಸತಿ ನಿಲಯದ ಜಾಗ ಭೂ ವಿವಾದದಲ್ಲಿ ಇರುವುದರಿಂದ ನೂತನ ಕಟ್ಟಡ ನಿರ್ಮಿಸಲು ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಉಪ ನಿರ್ದೇಶಕ ರಮೇಶ್ ಅವರು ಲೋಕಾಯುಕ್ತರಿಗೆ ವಿವರಿಸಿದರು.
ಹಾಸ್ಟೆಲ್ ಸುತ್ತ 7.88 ಎಕರೆ ಸರಕಾರಿ ಜಾಗದಲ್ಲಿ 70 ಸೆಂಟ್ಸ್ ಕಾಂಪೌಂಡ್‌ನಲ್ಲಿ ಹಾಸ್ಟೆಲ್ ನಡೆಸಲಾಗುತ್ತಿದೆ ಉಳಿದ ಜಾಗ ಭೂ ವಿವಾದದಲ್ಲಿದೆ ಎಂದರು. ಈ ಬಗ್ಗೆ ದಾಖಲೆ ಸಹಿತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಲೋಕಾಯುಕ್ತರು ಸೂಚಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಲೋಕಾಯುಕ್ತರಿಗೆ ತಿಳಿಸಿದರು.
ವಸತಿ ನಿಲಯ ಆವರಣದಲ್ಲಿ ಬಾಲಕರಿಗೆ ವಿತರಿಸಲು ನಿಲ್ಲಿಸಲಾಗಿದ್ದ ಸೈಕಲ್‌ಗಳನ್ನು ಲೋಕಾಯುಕ್ತರು ಮುಟ್ಟಿ ಪರಿಶೀಲಿಸಿದರು. ಯಾವ ಸಂಸ್ಥೆಯ ಸೈಕಲ್ ಮತ್ತು ಸೈಕಲ್ ಗುಣಮಟ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಾಲಕರು ಮಲಗುವ ಕೋಣೆ, ಬೆಡ್, ಮಂಚ, ಸೊಳ್ಳೆ ಪರದೆ, ಶೌಚಗೃಹವನ್ನು ನೋಡಿದರು. ಅಡುಗೆ ಮನೆ ಮತ್ತು ಸ್ಟೋರ್‌ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವತ್ಛತೆ, ನಿರ್ವಹಣೆ ಬಗ್ಗೆ ಪ್ರಶಂಸಿಸಿ ಹೀಗೆ ವಸತಿ ನಿಲಯವನ್ನು ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಳ್ಳಬೇಕು.
ಗಾರ್ಡನ್‌ನಲ್ಲಿ ತುಳಸಿ ಗಿಡವನ್ನು ಬೆಳೆಸುವಂತೆ ವಸತಿ ನಿಲಯ ವಾರ್ಡನ್ ಭಾರತಿ ಪದ್ಮಶಾಲಿ ಅವರಿಗೆ ಸಲಹೆ ನೀಡಿದರು. ಕುಂಜಿಬೆಟ್ಟಿನಲ್ಲಿರುವ ಬಿಸಿಎಂ ನರ್ಸಿಂಗ್ ಹಾಸ್ಟೆಲ್‌ಗೆ ಮತ್ತು 80 ಬಡಗಬೆಟ್ಟಿನಲ್ಲಿರುವ ಬಿಸಿಎಂ ಹಾಸ್ಟೆಲ್ ಲೋಕಾಯುಕ್ತರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಕರಣದ ಬಗ್ಗೆ ಪರಿಶೀಲನೆ
ಕುಂಜಿಬೆಟ್ಟು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್ ಜಾಗಕ್ಕೆ ಸಂಬಂಧಿಸಿ ಖಾಸಗಿ ವ್ಯಕ್ತಿಯೊಬ್ಬರು ಭೂ ನ್ಯಾಯಾಧಿಕರಣದಲ್ಲಿ ದಾವೆ ಹೂಡಿದ್ದಾರೆ. ಈ ವಿವಾದದಿಂದಾಗಿ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ದೂರು ಸುಳ್ಳು ಎಂದು ಕಂಡು ಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
– ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತ ನ್ಯಾಯಮೂರ್ತಿ