ನೆಲಮಂಗಲ: ನಗರದ ಉಪನೋಂದಣಾಧಿಕಾರಿ ಕಚೇರಿಯ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ವೆಂಕಟೇಶ್ ಸೇರಿದಂತೆ ಇಬ್ಬರು ಡಿವೈಎಸ್ ಪಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲಾತಿಗಳನ್ನು ರಾತ್ರಿ 10ರವರೆಗೂ ಪರಿಶೀಲನೆ ನಡೆಸಿದ್ದಾರೆ.
ನಗರದ ಉಪನೋಂದಣಾಧಿಕಾರಿ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಂಚ ಹಾಗೂ ವಿವಿಧ ಪ್ರಕರಣಗಳ ಬಗ್ಗೆ ದೂರುಗಳ ಆರೋಪದ ಹಿನ್ನೆಲೆ, ಲೋಕಾಯುಕ್ತರು ದಾಳಿ ಮಾಡಿದ್ದಾರೆ ಎನ್ನಲಾಗಿದ್ದು, ಸಂಜೆ 5.30ಸುಮಾರಿಗೆ ಕಚೇರಿ ಪ್ರವೇಶಿಸಿದ ಅಧಿಕಾರಿಗಳು ಕಚೇರಿ ಬಾಗಿಲು ಮುಚ್ಚಿ ಪರಿಶೀಲನೆ ಆರಂಭಿಸಿದ್ದಾರೆ. ಕೆಲಸಕ್ಕೆ ಬಂದ ಸಾರ್ವಜನಿಕರನ್ನು ಪರಿಶೀಲನೆ ಮಾಡಿ ಹೊರಗೆ ಬಿಟ್ಟಿದ್ದು, ಸಿಬ್ಬಂದಿ ಹಾಗೂ ಅಧಿಕಾರಿಗಳು ಹೊರಗೆ ಹೋಗದಂತೆ ಲಾಕ್ ಮಾಡಿದ್ದಾರೆ.
ನಾಲ್ಕು ವಾಹನದಲ್ಲಿ ಬಂದ ಅಧಿಕಾರಿಗಳು: ನೆಲಮಂಗಲ ಉಪನೋಂದಣಾಧಿಕಾರಿಗಳ ಕಚೇರಿಗೆ ಇಬ್ಬರು ಡಿವೈಎಸ್‌ಪಿ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ನಾಲ್ಕು ವಾಹನಗಳಲ್ಲಿ ಆಗಮಿಸಿ ಕಚೇರಿ ಮೇಲೆ ದಾಳಿ ಮಾಡಿದ್ದು, ಸಬ್‌ರಿಜಿಸ್ಟರ್ ಅಂಬಿಕಾ ಪಟೇಲ್, ಸತೀಶ್ ಹಾಗೂ ಸಿಬ್ಬಂದಿ ವಿಚಾರಣೆ ಮಾಡಿದ್ದಾರೆ.
ಲೋಕಾಯುಕ್ತರಿಗೆ ಯಾಮಾರಿಸಿದರು?: ಕೆಲವು ಮಧ್ಯವರ್ತಿಗಳು ಸಂಜೆ ಆದ ಕಾರಣ ಲೋಕಾಯುಕ್ತರು ಬರುವುದಿಲ್ಲ ಎಂದು ಕಚೇರಿಗೆ ಆಗಮಿಸಿ ವ್ಯವಹಾರ ಮಾಡುತ್ತಿದ್ದು, ಲೋಕಾಯುಕ್ತರು ದಾಳಿ ಮಾಡಿದಾಗ ನಾವು ಸಾಕ್ಷಿದಾರರು, ರಿಜಿಸ್ಟರ್‌ಗೆ ಬಂದ ಜನರು ಎಂದು ಹೇಳಿ ತಪ್ಪಿಸಿ ಕೊಂಡು ಹೊರಗೆ ಹೋಗಿದ್ದು, ಲೋಕಾಯುಕ್ತರನ್ನು ಯಾಮಾರಿಸಿದರು ಎಂದು ಕಚೇರಿಗೆ ಬಂದಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ.
ಹಣ ವಶಕ್ಕೆ?: ಲೋಕಾಯುಕ್ತ ಅಧಿಕಾರಿಗಳು ಕಚೇರಿ ಪ್ರವೇಶ ಮಾಡಿದಾಗ ರಿಜಿಸ್ಟರ್ ಮಾಡಿಸಲು ಬಂದಿದ್ದ ವ್ಯಕ್ತಿಯ ಬಳಿ 40 ಸಾವಿರ ಹಣ ಸಿಕ್ಕಿದ್ದು ವಿಚಾರಣೆ ಮಾಡಿ ಬಿಟ್ಟಿದ್ದಾರೆ ಎನ್ನಲಾಗಿದೆ. ಇದೇ ಸಮಯದಲ್ಲಿ ಕೆಲವು ಸಿಬ್ಬಂದಿ ಬಳಿ 200ರಿಂದ 2 ಸಾವಿರ ಹಣ ಸಿಕ್ಕಿದೆ ಎನ್ನಲಾಗಿದ್ದು, ಕೆಲವು ದಾಖಲಾತಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಕಚೇರಿ ಮೂಲಗಳಿಂದ ಲಭ್ಯವಾದರೆ, ಹೆಚ್ಚಿನ ಮಾಹಿತಿ ಲೋಕಾಯುಕ್ತರ ಮಾಹಿತಿಯಿಂದ ಹೊರಬರಬೇಕಿದೆ.
ಮೊದಲೇ ಮಾಹಿತಿ ಸೋರಿಕೆ
ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂಬ ಗುಸುಗುಸು ಮಾತು ಬೆಳಗ್ಗೆಯಿಂದಲೇ ಕಚೇರಿಯಲ್ಲಿ ಕೇಳಿ ಬಂದಿದ್ದು, ಸಿಬ್ಬಂದಿಗಳಿಗೆ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಎಚ್ಚರಿಕೆ ನೀಡಿದ್ದರು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಲೋಕಾಯುಕ್ತರಿಗೆ ಮಹತ್ವದ ದಾಖಲಾತಿ ಸಿಕ್ಕಿರುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ಲೋಕಾಯುಕ್ತದ ತಂಡ ಅಧಿಕಾರಿಗಳು ಅಥವಾ ಯಾವುದೋ ಮಾಹಿತಿ ಮೂಲದಿಂದ ಸಬ್ ರಿಜಿಸ್ಟರ್ ಬೆಳಗ್ಗೆಯೇ ಮಾಹಿತಿ ಪಡೆದುಕೊಂಡು ಎಚ್ಚರವಾಗಿದ್ದರು ಎಂಬ ಅನುಮಾನ ಜನರಲ್ಲಿ ವ್ಯಕ್ತವಾಗಿದೆ.