Advertisement

ಲೋಕಾಯುಕ್ತ ರಾಜಕೀಯಕ್ಕೆ ಅವಕಾಶವಿಲ್ಲ!

11:50 AM Aug 08, 2017 | |

ಬೆಂಗಳೂರು: ಲೋಕಾಯುಕ್ತವನ್ನು ಯಾರು ಕೂಡ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.

Advertisement

ನಗರದ ಶ್ರೀರಾಮಪುರದಲ್ಲಿರುವ ಭಾರತೀಯ ವಿದ್ಯಾಭವನದ ಬಿಬಿಎಂಪಿ ಶಾಲೆಯಲ್ಲಿ ಸೋಮವಾರ ನಡೆದ ರಕ್ಷಾಬಂಧನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲೋಕಾಯುಕ್ತದಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾರು ಕೂಡ ಪರಿಶೀಲನೆ ಮಾಡಿಲ್ಲ. ನಾವು ಕೂಡ ರಾಜಕೀಯ ಉದ್ದೇಶಕ್ಕಾಗಿ ಯಾರಿಗೂ ಪರಿಶೀಲನೆ ಮಾಡಲು ಅವಕಾಶ ನೀಡುವುದಿಲ್ಲ.

ಅಧಿಕಾರ ಸ್ವೀಕರಿಸದ ನಂತರದ ಆರು ತಿಂಗಳ ಅವಧಿಯಲ್ಲಿ ನಾನು ಸಿಎಂ ಮುಖ ನೋಡಿದ್ದು ಎರಡು ದಿನದ ಹಿಂದಷ್ಟೇ,’ ಎಂದರು. ಲೋಕಾಯುಕ್ತ ವ್ಯಾಪ್ತಿ ಎಷ್ಟು ಎಂಬುದರ ಅರಿವಿದೆ. ಅದರಂತೆ ಕೆಲಸ ಮಾಡುತ್ತೇವೆ. ಹೆಚ್ಚುವರಿ ಅಧಿಕಾರಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಅದಕ್ಕಾಗಿ ಹೋರಾಡಿ ಕಾಲ ಹರಣ ಮಾಡುವ ಅಗತ್ಯವಿಲ್ಲ.

ಅಧಿಕಾರ ವ್ಯಾಪ್ತಿಯಲ್ಲೇ ಕಾರ್ಯ ನಿರ್ವಹಿಸುತ್ತೇವೆ. ಮುಂದೊಂದು ದಿನ ನ್ಯಾಯಾಲಯವೇ ಆ ಅಧಿಕಾರ ನೀಡುವ ವಿಶ್ವಾಸವಿದೆ. ಇನ್ನು ನಾಲ್ಕೂವರೆ ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಅವಕಾಶ ಇದ್ದರೆ ಒಳ್ಳೆಯದಿತ್ತು. ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆಯ ಮೇಲೆ ಭಯ ಇರುತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

“ಸರ್ಕಾರದ ಒಳ್ಳೊಳ್ಳೆ ಕಾರ್ಯಕ್ರಮವನ್ನು ಬಡ ಮತ್ತು ಮಧ್ಯಮ ವರ್ಗದವರಿಗೆ ತಲುಪಿಸುವ ಅಗತ್ಯವಿದೆ. ಜನಪ್ರತಿನಿಧಿಗಳಿಗೆ ಲೋಕಾಯುಕ್ತ ಬೇಕಾಗಿಲ್ಲ. ಜನರಿಗೆ ಲೋಕಾಯುಕ್ತ ಬೇಕಾಗಿದೆ. ಆದರೆ, ಜನ ತಮ್ಮ ಕೆಲಸಕ್ಕೆ ಲಂಚ ಕೊಡುವುದನ್ನು ಬಿಟ್ಟಿಲ್ಲ. ಹೀಗಾಗಿ ಎಲ್ಲವನ್ನು ಲೋಕಾಯುಕ್ತದಿಂದಲೇ ಸರಿಪಡಿಸಲು ಸಾಧ್ಯವಿಲ್ಲ,’ ಎಂದರು.

Advertisement

ಸರ್ಕಾರಕ್ಕೆ ಶಿಫಾರಸ್ಸು: “ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಬಾಕಿ ಇದ್ದ 6 ಸಾವಿರಕ್ಕೂ ಅಧಿಕ ಪ್ರಕರಣಗಳ ಪೈಕಿ 2500 ಪ್ರಕರಣಗಳು ಲೋಕಾಯುಕ್ತರಿಗೆ ಸಂಬಂಧಿಸಿದ್ದವು. ಸಮಗ್ರ ಪರಿಶೀಲನೆ ನಂತರ ಕೆಲವೊಂದನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಸರ್ಕಾರ ಕ್ರಮ ಕೂಡ ಕೈಗೊಂಡಿದೆ,’ ಎಂದು ಮಾಹಿತಿ ನೀಡಿದರು.

ಸಹಿ, ವಿಳಾಸದೊಂದಿಗೆ ಹಾಗೂ ಹೆಸರು, ವಿಳಾಸ ಇಲ್ಲದೆ ಬರುವ ಅರ್ಜಿ ಸೇರಿದಂತೆ ನಾನಾ ಪ್ರಕಾರದ ಅರ್ಜಿ ವಿಚಾರಣೆ ಮಾಡಿದ್ದೇವೆ. ಉದ್ದೇಶ ಪೂರ್ವಕವಾಗಿ ಇನ್ನೊಬ್ಬರ ಮೇಲೆ ದೂರು ಕೊಟ್ಟಿರುವ ಅರ್ಜಿ ಕೂಡ ಬಂದಿದೆ. ಹೀಗಾಗಿ ಅರ್ಜಿಯ ಸತ್ಯಾಸತ್ಯತೆ ಪರಿಶೀಲಿಸಿ, ಪೊಲೀಸರಿಗೆ ಹೇಳಿ ದಾಳಿ ನಡೆಸುವ ಮತ್ತು ಸ್ವಯಂ ಪ್ರೇರಿತ ಅರ್ಜಿ ದಾಖಲಿಸುತ್ತೇವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

“ಒಂದು ಪ್ರಕರಣದ ತನಿಖಾ ವರದಿ ಹೊರತು ಪಡಿಸಿ ಬೇರೆ ಯಾವುದೇ ಪ್ರಕರಣದ ಬಾಕಿ ಇಲ್ಲ. ಈವರೆಗೆ 31 ತನಿಖಾ ವರದಿ ಸಲ್ಲಿಸಿದ್ದೇವೆ. ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ, ಎಂಜಿನಿಯರ್‌, ಅಧಿಕಾರಿಗಳ ವಿರುದ್ಧ ದೂರು ಸೇರಿದಂತೆ ವಿವಿಧ ತನಿಖಾ ವರದಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಅಲ್ಲಿಂದ ಬಹುತೇಕ ಶಿಫಾರಸ್ಸಿಗೆ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಕೆಲವೊಮ್ಮೆ ಸರ್ಕಾರಕ್ಕೆ ನಮ್ಮ ವರದಿ ಸರಿ ಇಲ್ಲದೆಯೋ ಇರಬಹುದು. ಆದರೆ, ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಿದೆ,’ ಎಂದು ನ್ಯಾ.ಶೆಟ್ಟಿ ತಿಳಿಸಿದರು.

ಸಂಸ್ಥೆ ಬಲಹೀನವಾಗಿಲ್ಲ
“ಲೋಕಾಯುಕ್ತ ಸಂಸ್ಥೆ ಬಲಹೀನವಾಗಿಲ್ಲ. ಭ್ರಷ್ಟಾಚಾರ ನಿಗ್ರಹದಲ್ಲಿ ಅಧಿಕಾರ ಹೋಗಿದೆ. ಆದರೆ, ಶಿಸ್ತುಕ್ರಮ ತೆಗೆದುಕೊಳ್ಳುವ ವಿಚಾರವಾಗಿ ದಾಳಿ ಮಾಡುವ ಅಧಿಕಾರ ಇದ್ದೇ ಇರುತ್ತದೆ. ಅಧಿಕಾರಿಯ ಸಂಪತ್ತು ಪರಿಶೀಲಿಸುವ ಅಧಿಕಾರ ನಮಗೆ ಇದೆ. ಆದಾಯಕ್ಕಿಂತ ಜಾಸ್ತಿ ಸಂಪತ್ತು ಗಳಿಸಿದ್ದು ಕಂಡು ಬಂದರೆ ಲೋಕಾಯುಕ್ತ ಪೊಲೀಸರ ಮೂಲಕ ದಾಳಿ ನಡೆಸಬಹುದು ಅಥವಾ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ಎಸಿಬಿಗೆ ಶಿಫಾರಸ್ಸು ಮಾಡಬಹುದು.

ಹಾಗೇ ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 7 ಮತ್ತು 9ರಡಿ ಸ್ವಯಂ ಪ್ರೇರಿತ ಅರ್ಜಿ ದಾಖಲಿಸುವ ಹಾಗೂ ಸೆಕ್ಷನ್‌ 15ರಡಿ ವಿಚಾರಣೆ ನಡೆಸುವ ಅಧಿಕಾರ ಸಂಸ್ಥೆಗಿದೆ,’ ಎಂದು ತಿಳಿಸಿದ ನ್ಯಾ.ವಿಶ್ವನಾಥ ಶೆಟ್ಟಿ, “ಲೋಕಾಯುಕ್ತ ಶಿಫಾರಸ್ಸಿನಂತೆ ಪೊಲೀಸರಿಂದಲೂ, ಎಸಿಬಿ, ಸಿಒಡಿ, ಸಿಬಿಐ ಮೂಲಕ ತನಿಖೆ ಮಾಡಿಸಬಹುದು. ಆದರೆ, ಇದಕ್ಕೆ ಸರ್ಕಾರದ ಅನುಮತಿ ಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೂಲಕವೂ ತನಿಖೆ ಮಾಡಿಸಬಹುದು. ಹೀಗೆ ಹಲವು ಮಾರ್ಗಗಳಲ್ಲಿ ವ್ಯವಸ್ಥೆ ಸುಧಾರಣೆ ಮಾಡಲು ಅವಕಾಶವಿದೆ,’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next