ಬೆಂಗಳೂರು: ನಿವೇಶನಗಳ ಜಂಟಿ ಖಾತೆ ಮಾಡಿಕೊಡಲು 4 ಲಕ್ಷ ರೂ. ಮುಂಗಡ ಪಡೆದುಕೊಂಡಿದ್ದ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಎಂ.ಎಸ್.ಶ್ರೀ ನಿವಾಸ್ ಮತ್ತು ಅವರ ಪ್ರಥಮ ದರ್ಜೆ ಸಹಾಯಕ ಉಮೇಶ್ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಿವಾಸಿ ಹಾಗೂ ದೂರುದಾರ ಮಂಜುನಾಥ್ ಅವರು ನೀಡಿದ ದೂರಿನ ಆಧಾರದ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ.
ಮಂಜುನಾಥ್‌ಗೆ ಸಂಬಂಧಿಸಿದ ನಿವೇಶನಗಳ ಸಮ್ಮಿಲನ ಖಾತೆ ಮಾಡಿಕೊಡಲು ಆರೋಪಿ ಗಳು 12 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ, ಅಂತಿ ಮವಾಗಿ 4 ಲಕ್ಷ ರೂ.ಗೆ ನಿಗದಿ ಪಡಿಸಿದ್ದರು. ಅಂದರಂತೆ ಸೋಮವಾರ 4 ಲಕ್ಷ ರೂ. ಲಂಚ ಪಡೆಯುವಾಗ ಜಂಟಿ ಆಯುಕ್ತ ಎಂ.ಎಸ್.ಶ್ರೀನಿವಾಸ ಪರವಾಗಿ ಪ್ರಥಮ ದರ್ಜೆ ಸಹಾಯಕ ಉಮೇಶ್ ಸ್ವೀಕರಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚದ ಹಣದ ಸಮೇತ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಲೋಕಾಯುಕ್ತ ನಗರ ವಿಭಾಗದ ಎಸ್‌ಪಿ ಕೆ.ವಿ ಅಶೋಕ್ ಸೂಚನೆಯ ಮೇರೆಗೆ ಡಿವೈಎಸ್‌ಪಿ ಆಂತೋನಿರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಭ್ರಷ್ಟಚಾರ ನಿಗ್ರಹ ದಳ(ಎಸಿಬಿ) ರದ್ದು ಪಡಿಸಿ ಲೋಕಾ ಯುಕ್ತಕ್ಕೆ ಠಾಣಾಧಿಕಾರ ನೀಡುವಂತೆ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಎಸಿಬಿಯ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿತ್ತು.ಈ ಬೆನ್ನಲ್ಲೇ ಐದು ವರ್ಷಗಳ ಬಳಿಕ ಕಾರ್ಯಾಚರಣೆ ಆರಂಭ ಸಿರುವ ಲೋಕಾಯುಕ್ತ ಪೊಲೀಸರು, ಮೊದಲಿಗೆ ಭರ್ಜರಿ “ಬೇಟೆ’ಯಾಡಿದ್ದಾರೆ.