Advertisement

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಅಗತ್ಯ: ನ್ಯಾ|ವಿಶ್ವನಾಥ ಶೆಟ್ಟಿ

11:03 PM Jan 24, 2022 | Team Udayavani |

ಬೆಂಗಳೂರು: ಲೋಕಾಯುಕ್ತಕ್ಕೆ ಹಿಂದಿದ್ದ ಅಧಿಕಾರವನ್ನು ಮತ್ತೆ ನೀಡದಿದ್ದರೆ ಈ ಸಂಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

Advertisement

ಜ.27ರಂದು ಲೋಕಾಯುಕ್ತ ಹುದ್ದೆಯಿಂದ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಲಿಷ್ಠ ಹಾಗೂ ಪಾರದರ್ಶಕ ಲೋಕಾಯುಕ್ತ ಸಂಸ್ಥೆ ಇರಬೇಕು ಎನ್ನುವವರಲ್ಲಿ ನಾನು ಮೊದಲಿಗ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಸರಿಯೋ, ತಪ್ಪೋ? ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆಯೋ, ಇಲ್ಲವೋ ಎಂಬ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ. ಆದರೆ, ಎಸಿಬಿಯನ್ನು ಲೋಕಾಯುಕ್ತದ ಅಧೀನದಲ್ಲೇ ತಂದು, ಲೋಕಾಯುಕ್ತಕ್ಕೆ ಹಿಂದಿದ್ದ ಹೆಚ್ಚಿನ ಅಧಿಕಾರವನ್ನು ಕೊಡಬೇಕು ಎಂಬುದು ನನ್ನ ವಾದ. ಇದನ್ನು ನ್ಯಾಯಾಲಯಕ್ಕೂ ತಿಳಿಸಲಾಗಿದೆ. ಹೆಚ್ಚಿನ ಅಧಿಕಾರ ಇಲ್ಲದಿದ್ದರೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಲೋಕಾಯುಕ್ತಕ್ಕೆ ಸಾಧ್ಯವಿಲ್ಲ. ಜನರ ಹಿತದೃಷ್ಟಿಯಿಂದ ಸರಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಬಲಿಷ್ಠ ಲೋಕಾಯುಕ್ತ ಸಂಸ್ಥೆ ಇರಬೇಕು ಎಂದರು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಹಿಂದೆ ಲೋಕಾಯುಕ್ತದ ಪೊಲೀಸ್‌ ವಿಭಾಗ ಹೊಂದಿತ್ತು. ಆ ಅಧಿಕಾರವನ್ನು ಕಿತ್ತು ಎಸಿಬಿ ರಚಿಸಲಾಯಿತು. ಲೋಕಾಯುಕ್ತ ಒಂದು ಸ್ವತಂತ್ರ ಸಂಸ್ಥೆ. ಆದರೆ, ಎಸಿಬಿ ಸರಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ. ಕೇವಲ ದಾಳಿ ನಡೆಸಿ ದೊಡ್ಡ ಪ್ರಚಾರ ಮಾಡಿ ದಾಳಿಗೊಳಗಾದವರು ಮತ್ತು ಅವರ ಕುಟುಂಬದ ಮಾನ ಹಾರಾಜು ಹಾಕುವ ಕೆಲಸ ಆಗಬಾರದು. ಭ್ರಷ್ಟರಿಗೆ ಶಿಕ್ಷೆ ಆಗಬೇಕು. ಇದೇ ವೇಳೆ ಪ್ರಾಮಾಣಿಕರ ರಕ್ಷಣೆಯೂ ಆಗಬೇಕು. ಆ ಹಿನ್ನೆಲೆಯಲ್ಲಿ ಎಸಿಬಿ ಲೋಕಾಯುಕ್ತದ ಅಧೀನದಲ್ಲಿರಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಹೆಣ್ಣುಮಕ್ಕಳ ಘನತೆ ಹೆಚ್ಚಿಸುವುದು ತಮ್ಮ ಉದ್ದೇಶ: ಪ್ರಧಾನಿ ಮೋದಿ

Advertisement

ಕೆಲಸ ತೃಪ್ತಿ ತಂದಿದೆ
ಐದು ವರ್ಷದ ನನ್ನ ಸೇವಾವಧಿ ತೃಪ್ತಿ ಹಾಗೂ ಸಮಾಧಾನ ತಂದಿದೆ. ಸಮಾಜ ಸೇವೆಯ ಉದ್ದೇಶದಿಂದ ಲೋಕಾಯುಕ್ತ ಹುದ್ದೆ ಒಪ್ಪಿಕೊಂಡಿದ್ದೆ. ಹುದ್ದೆಯ ಸೂಕ್ಷ್ಮತೆ ಏನೆಂದು ಇಲ್ಲಿಗೆ ಬಂದ ಮೇಲೆ ತಿಳಿಯಿತು. ನನ್ನ ಮೇಲೆ ಹಲ್ಲೆ ನಡೆದಾಗ ಬೇಸರ ಆಗಿತ್ತು. ಆದರೆ, ಸಂಸ್ಥೆ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಚ್ಯುತಿ ಬರಬಾರದು ಎಂದು ಕಾರಣಕ್ಕೆ ಮತ್ತೆ ಕರ್ತವ್ಯಕ್ಕೆ ಮರಳಿದೆ. ಕೋವಿಡ್‌-19 ಸಂಕಷ್ಟ ಎದುರಾಗದೇ ಇದ್ದಿದ್ದರೆ ಇನ್ನಷ್ಟು ಕೆಲಸ ಮಾಡಬಹುದಿತ್ತು ಎಂಬ ಸಣ್ಣ ಕೊರಗು ಇದೆ. ಎಸಿಬಿ ರಚನೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ನನ್ನ ಅಧಿಕಾರವಧಿಯಲ್ಲೇ ಅದು ಇತ್ಯರ್ಥ ಆಗುತ್ತದೆ ಎಂದುಕೊಂಡಿದ್ದೆ. ಆಗದಿರುವುದಕ್ಕೆ ಬೇಸರವಿದೆ ಎಂದು ನ್ಯಾ| ವಿಶ್ವನಾಥ್‌ ಶೆಟ್ಟಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next