ಹುಬ್ಬಳ್ಳಿ: ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಹಾಗೂ ನ್ಯಾ. ಎಸ್.ಆರ್. ನಾಯಕ ಅವರು ಪ್ರಶ್ನಾರ್ಹ ವ್ಯಕ್ತಿಗಳಾಗಿದ್ದು, ಇಬ್ಬರನ್ನೂ ಲೋಕಾಯುಕ್ತ ಸ್ಥಾನಕ್ಕೆ ಪರಿಗಣಿಸಬಾರದು ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.
ನ್ಯಾ. ವಿಶ್ವನಾಥ ಶೆಟ್ಟಿ ಅವರು ಬೆಂಗಳೂರಿನ ಆರ್.ಟಿ. ನಗರದಲ್ಲಿ ಮನೆ ಹೊಂದಿದ್ದರೂ, ನ್ಯಾಯಾಂಗ ನೌಕರರ ಸಂಘದ ವಸತಿ ಬಡಾವಣೆಯಲ್ಲಿ ಸುಳ್ಳು ಮಾಹಿತಿ ನೀಡಿ ನಿವೇಶನ ಪಡೆದಿದ್ದಾರೆ. 10 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಪರವಾಗಿ ವಾದ ಮಂಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜ.9ರಂದು ಲೋಕಾಯುಕ್ತ ಆಯ್ಕೆಗೆ ಸಭೆ ಕರೆಯಲಾಗಿದ್ದು, ಇದನ್ನು ಸ್ವಾಗತಿಸುತ್ತೇವೆ. ಲೋಕಾಯುಕ್ತರ ನೇಮಕ ಸಂಬಂಧ ಜ.11ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಎಚ್.ಎಸ್. ದೊರೆಸ್ವಾಮಿ, ನ್ಯಾ. ಸಂತೋಷ ಹೆಗ್ಡೆ, ಎ.ಟಿ.ರಾಮಸ್ವಾಮಿ ಹಾಗೂ ತಾವು ಚರ್ಚೆ ನಡೆಸುವುದಾಗಿ ತಿಳಿಸಿದರು.
ತನಿಖೆಗೆ ಆಗ್ರಹ:
ನೋಟು ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಭೀಮಾನಾಯ್ಕ ಅವರ ವಾಹನ ಚಾಲಕ ರಮೇಶ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ಪ್ರಕರಣ ಕುರಿತು ಸಿಬಿಐ ತನಿಖೆಗೆ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರು ಮುಂದಾಗಬೇಕೆಂದು ಒತ್ತಾಯಿಸಿದರು.
ಸಂಸದ ಪ್ರಹ್ಲಾದ ಜೋಶಿ ತಮ್ಮ ವಿರುದ್ಧ ಹೂಡಿದ ಮಾನನಷ್ಟ ಮೊಕದ್ದಮೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಆರೋಪ ಪ್ರಹ್ಲಾದ ಜೋಶಿ ವಿರುದ್ಧ ಅಲ್ಲ. ಬದಲಾಗಿ ಮೈದಾನ ಕಬಳಿಕೆ ಯತ್ನದ ವಿರುದ್ಧ. ಪ್ರಕರಣ ಇತ್ಯರ್ಥಕ್ಕೆ ಅವರು ಮುಂದಾದರೆ ಅದಕ್ಕೆ ತಾವು ಮುಕ್ತ ಮನಸ್ಸು ಹೊಂದಿರುವುದಾಗಿ ಹೇಳಿದರು.