Advertisement

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂದಾಯ ಇಲಾಖೆಯ 45 ಸ್ಥಳಗಳಲ್ಲಿ ಇರುವ 100ಕ್ಕೂ ಅಧಿಕಾರಿಗಳಿಗೆ ಗುರುವಾರ ಏಕಕಾಲದ ದಾಳಿಯ ಶಾಕ್‌ ಕಾದಿತ್ತು. ಯಾಕೆಂದರೆ ಖುದ್ದು ಲೋಕಾಯುಕ್ತ ನ್ಯಾ| ಬಿ.ಎಸ್‌.ಪಾಟೀಲ್‌ ಅವರೇ ಫೀಲ್ಡ್‌ಗೆ ಇಳಿದಿದ್ದರು. ಜತೆಗೆ ಉಪ ಲೋಕಾ ಯುಕ್ತ ಕೆ.ಎನ್‌. ಫ‌ಣೀಂದ್ರ, ಡಿಜಿಪಿ
ಪ್ರಶಾಂತ್‌ ಕುಮಾರ್‌ ಠಾಕೂರ್‌, ಐಜಿಪಿ ಡಾ| ಎ. ಸುಬ್ರಹ್ಮಣ್ಯೇಶ್ವರ ರಾವ್‌ ಕೂಡ ಇದ್ದರು.

Advertisement

ಕಚೇರಿಗಳಲ್ಲಿ ಕೆಲಸ ಮಾಡಿಸಿ ಕೊಡಲು ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆಯಿಡುತ್ತಿರುವ ಸರಣಿ ಆರೋಪಗಳು ಬಂದಿದ್ದರಿಂದ ಅಧಿಕಾರಿಗಳ ತಂಡ ರಾಜ್ಯದ ರಾಜಧಾನಿಯ 45 ಕಂದಾಯ ಕಚೇರಿಗಳಲ್ಲಿರುವ 100ಕ್ಕೂ ಅಧಿಕ ಕಂದಾಯ ಅಧಿಕಾರಿ (ಆರ್‌ಒ) ಹಾಗೂ ಸಹಾಯಕ ಕಂದಾಯ ಅಧಿಕಾರಿ (ಎಆರ್‌) ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಸ್ಥಳದಿಂದ ಕೆಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಕೆಲವು ಕಚೇರಿಗಳಲ್ಲಿ ಸಾರ್ವಜನಿಕರಿಂದ ಲಂಚದ ರೂಪದಲ್ಲಿ ಪಡೆದಿದ್ದಾರೆ ಎನ್ನಲಾದ ಕಂತೆ – ಕಂತೆ ನೋಟುಗಳು ಪತ್ತೆಯಾಗಿವೆ. ನಿಗದಿತ ಸಮಯದಲ್ಲಿ ಕಡತ ವಿಲೇವಾರಿ ಮಾಡದಿರುವುದು, ಫ‌ಲಾನುಭವಿಗಳಿಗೆ ವಿವಿಧ ನೆಪವೊಡ್ಡಿ ಸೂಕ್ತ ರೀತಿಯಲ್ಲಿ ಕೆಲಸ ಮಾಡದಿರುವುದು, ದಾಖಲೆಗಳ ನಿರ್ವಹಣೆ ವೈಫ‌ಲ್ಯ ಸಹಿತ ಹಲವು ಅವ್ಯವಹಾರಗಳು ಹಾಗೂ ಲೋಪದೋಷಗಳು ಪತ್ತೆಯಾಗಿವೆ.

ಕಂದಾಯ ಇಲಾಖೆ ಕಚೇರಿಗಳೇ ಯಾಕೆ?
ಬಿಬಿಎಂಪಿ ವ್ಯಾಪ್ತಿಯ ಕಂದಾಯ ಇಲಾಖೆ ಕಚೇರಿಗಳಲ್ಲಿ ಸಾರ್ವಜನಿಕರಿಂದ ಬೇಕಾಬಿಟ್ಟಿಯಾಗಿ ದುಡ್ಡು ವಸೂಲಿ ಮಾಡಲಾಗುತ್ತಿದೆ ಎಂಬ ಬಗ್ಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಕೆಲ ತಿಂಗಳುಗಳಿಂದ ಹಲವು ದೂರುಗಳು ಬಂದಿದ್ದವು. ಲೋಕಾಯುಕ್ತ ನ್ಯಾ| ಬಿ.ಎಸ್‌.ಪಾಟೀಲ್‌ ತಮ್ಮ ಸಿಬಂದಿಗೆ ಕುರಿತು ಮಾಹಿತಿ ಕಲೆ ಹಾಕಲು ಸೂಚಿಸಿದಾಗ ಕಂದಾಯ ಇಲಾಖೆ ಕಚೇರಿಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿರುವ ಸುಳಿವು ಸಿಕ್ಕಿತ್ತು. ಕೆಲವು ದಿನಗಳ ಹಿಂದೆ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಿದ ಲೋಕಾಯುಕ್ತರು ಏಕಕಾಲದಲ್ಲಿ ದಾಳಿ ನಡೆಸಲು ಸಿದ್ದತೆ ನಡೆಸಿದ್ದರು. ಅದರಂತೆ ಗುರುವಾರ ದಾಳಿ ನಡೆದಿದೆ.

ದಾಳಿ ನಡೆದ ಕಂದಾಯ ಇಲಾಖೆ
ಗಳಲ್ಲಿ ಅರ್ಜಿ ಸಲ್ಲಿಸಿ ತಿಂಗಳುಗಳೇ ಉರುಳಿದರೂ ಅಧಿಕಾರಿಗಳು, ಸಿಬಂದಿ ಕೈ ಬೆಚ್ಚಗೆ ಮಾಡದಿದ್ದರೆ ಕೆಲಸಗಳು ಆಗುತ್ತಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ವಿವಿಧ ನೆಪವೊಡ್ಡಿ ಸಾರ್ವಜನಿಕರಿಗೆ ಪೊಳ್ಳು ಭರವಸೆ ಕೊಟ್ಟು ಸಾಗ ಹಾಕುತ್ತಿದ್ದರು. ಇದರಿಂದ ಸಾವಿರಾರು ಫ‌ಲಾನುಭವಿಗಳು ಸಂಕಷ್ಟ ಎದುರಿಸುತ್ತಿದ್ದರು.

ಚಳಿ ಬಿಡಿಸಿದ ಲೋಕಾಯುಕ್ತರು
ನ್ಯಾ| ಬಿ.ಎಸ್‌.ಪಾಟೀಲ್‌ ರಾಜಾಜಿನಗರದ ಕಂದಾಯ ಕಚೇರಿಗೆ ಭೇಟಿ ಕೊಟ್ಟ ವೇಳೆ ಅಧಿಕಾರಿ ಭಾರತಿ ಬಳಿ ಕಡತ ವಿಲೇವಾರಿಗೆ ತಡಮಾಡಿರುವುದನ್ನು ಪ್ರಶ್ನಿಸಿದರು. ಕ್ಯಾಶ್‌ ಡಿಕ್ಲರೇಷನ್‌ ಬುಕ್‌ ಬಗ್ಗೆ ಮಾಹಿತಿ ಕೊಡುವಂತೆ ಸೂಚಿಸಿದಾಗ ಅಲ್ಲಿನ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಕೈ ಕಟ್ಟಿ ನಿಂತರು. ಅಧಿಕಾರಿಗಳ ಗೊಂದಲದ ಹೇಳಿಕೆಗೆ ಲೋಕಾಯುಕ್ತರು ಗರಂ ಆದರು. ಖುದ್ದು ಅರ್ಜಿದಾರರಿಗೆ ಕರೆ ಮಾಡಿ ತಾವು ಸಲ್ಲಿಸಿರುವ ಅರ್ಜಿಗಳಿಗೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸಿದ್ದಾರೆ? ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಯೇ ಮುಂತಾಗಿ ಪ್ರಶ್ನಿಸಿದರು. ವಿಜಯನಗರ, ಬ್ಯಾಟರಾಯನಪುರದ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಉಪ ವಿಭಾಗಗಳಲ್ಲೂ ಕಂದಾಯ ಉಪ ವಿಭಾಗ ಕಚೇರಿಯ ಅಧಿಕಾರಿ, ಸಿಬಂದಿಗೆ ಬಿಸಿ ಮುಟ್ಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next