Advertisement

“ಲೋಕಾ’ನೇಮಕ ಕಡತ ಮತ್ತೆ ವಾಪಸ್‌

03:45 AM Jan 17, 2017 | Team Udayavani |

ಬೆಂಗಳೂರು: ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ
ಕಳಿಸಿದ್ದ ಪ್ರಸ್ತಾವನೆಯನ್ನು ರಾಜ್ಯಪಾಲ ವಜೂಬಾಯ್‌ ವಾಲಾ ವಾಪಸ್‌ ಕಳುಹಿಸಿದ್ದಾರೆ. ಇದು ಮತ್ತೂಮ್ಮೆ ರಾಜ್ಯ
ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಲಕ್ಷಣ ಕಂಡು ಬರುತ್ತಿದ್ದು, ರಾಜ್ಯದ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

Advertisement

ರಾಜ್ಯ ಸರ್ಕಾರದ ಶಿಫಾರಸ್ಸನ್ನು ವಾಪಸ್‌ ಕಳುಹಿಸುವುದರ ಜತೆಗೆ ಸುದೀರ್ಘ‌ ಪತ್ರವನ್ನೂ ಬರೆದಿರುವ ರಾಜ್ಯಪಾಲರು, ನ್ಯಾ. ವಿಶ್ವನಾಥ್‌ ಶೆಟ್ಟಿ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ಕೋರಿದ್ದಾರೆ. ಜತೆಗೆ, ಶಿಫಾರಸ್ಸನ್ನು ಮರು ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌ .ಹಿರೇಮs… ಅವರು ನ್ಯಾ.ವಿಶ್ವನಾಥ ಶೆಟ್ಟಿ ಅವರ ಕುಟುಂಬದ ವಿರುದ್ಧ ಗೋಮಾಳ ಜಮೀನು ಖರೀದಿ ಹಾಗೂ ಕಾನೂನು ಬಾಹಿರವಾಗಿ ನಿವೇಶನ ಪಡೆದಿರುವ ವಿಚಾರದಲ್ಲಿ ದಾಖಲೆ ಸಮೇತ ಆರೋಪ ಮಾಡಿರುವುದನ್ನೇ ರಾಜ್ಯಪಾಲರು ಪ್ರಮುಖವಾಗಿ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. 

ವಿಶ್ವನಾಥ ಶೆಟ್ಟಿ ಅವರ ನೇಮಕ ಕುರಿತಾದ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಬಗ್ಗೆಯೂ ರಾಜ್ಯಪಾಲರು
ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಿತಿಯ ತೀರ್ಮಾನ ರಾಜ್ಯದ ಜನತೆ ಒಪ್ಪುವಂತಿರಬೇಕಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರ ಮತ್ತೂಮ್ಮೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷಕ್ಕೆ ಕಾರಣವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಇದೀಗ ರಾಜ್ಯ ಸರ್ಕಾರದ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ. ರಾಜ್ಯಪಾಲರು ನೇರವಾಗಿ ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ತಿರಸ್ಕರಿಸಿಲ್ಲವಾದರೂ ಕೆಲವೊಂದು
ವಿಚಾರಗಳಿಗೆ ಸಂಬಂಧಿಸಿ ಸ್ಪಷ್ಟನೆ ಕೋರಿದ್ದಾರೆ. ಆದರೆ, ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಮರುಪರಿಶೀಲಿಸಿ ಎಂದು ತಿಳಿಸಿರುವುದು ಪರೋಕ್ಷವಾಗಿ ತಿರಸ್ಕಾರ ಮಾಡಿದಂತೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆ ನ್ಯಾ.ಎಸ್‌.ಆರ್‌ .ನಾಯಕ್‌ ಅವರ ಹೆಸರನ್ನು ಲೋಕಾಯುಕ್ತ ಸ್ಥಾನಕ್ಕೆ ಶಿಫಾರಸು ಮಾಡಿದಾಗಲೂ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದರು. ಸ್ಪಷ್ಟನೆ ಸಮೇತ ಮತ್ತೂಮ್ಮೆ ಶಿಫಾರಸು ಮಾಡಿದ್ದರೂ ತಿರಸ್ಕರಿಸಿ ವಾಪಸ್‌ ಕಳುಹಿಸಿದ್ದರು. ಈ ಬೆಳವಣಿಗೆಯಿಂದಾಗಿ ನ್ಯಾ.ಭಾಸ್ಕರ್‌ರಾವ್‌ ನಿರ್ಗಮನದ ನಂತರ ಹದಿಮೂರು ತಿಂಗಳಿನಿಂದ ಖಾಲಿ ಉಳಿದಿದ್ದ
ಲೋಕಾಯುಕ್ತ ಸಂಸ್ಥೆಗೆ ಸಾರಥಿಯನ್ನು ನೇಮಕ ಮಾಡುವುದು ಮತ್ತೆ ಕಗ್ಗಂಟಾಗಿದೆ. ಲೋಕಾಯುಕ್ತ ಹುದ್ದೆಗೆ ಅರ್ಹ ಅಭ್ಯರ್ಥಿ ಮತ್ತು ವಿವಾದಗಳಿಲ್ಲದವರ ಹೆಸರು ಶಿಫಾರಸು ಮಾಡುವುದೇ ಸರ್ಕಾರಕ್ಕೆ ಸವಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next