ಭ್ರಷ್ಟಾಚಾರ ನಿಯಂತ್ರಣ ವಿಚಾರದಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಹಿಂದಿದ್ದ ಅಧಿಕಾರ ಮರಳಿ ವರ್ಗಾವಣೆ ಮಾಡುವಂತೆ ಹೈಕೋರ್ಟ್ ನೀಡಿರುವ ತೀರ್ಪು ರಾಜ್ಯದ ಮಟ್ಟಿಗಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲೂ ಮಹತ್ವದ ತೀರ್ಪು. ಕರ್ನಾಟಕ ಲೋಕಾಯುಕ್ತ ದೇಶದಲ್ಲೇ ಉತ್ತಮ ಹೆಸರು ಹೊಂದಿತ್ತು. ಲೋಕಾಯುಕ್ತ ಸ್ಥಾಪನೆಯ ಹಿಂದೆಯೂ ಭ್ರಷ್ಟಾಚಾರ ನಿರ್ಮೂಲನೆಯ ಗುರಿ ಇತ್ತು. ಲೋಕಾಯುಕ್ತರಾಗಿ ಕೆಲಸ ಮಾಡಿದವರು ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದರು.
ಆದರೆ ಎಸಿಬಿ ರಚನೆಯ ಅನಂತರ ಲೋಕಾಯುಕ್ತ ಯಾವುದೇ ಅಧಿಕಾರ ಇಲ್ಲದೆ ಹೆಸರಿಗೆ ಮಾತ್ರ ಎಂಬಂತಿತ್ತು. ಇತ್ತ ಎಸಿಬಿಯಲ್ಲಿ ದಾಖಲಾದ ಪ್ರಕರಣಗಳು ಬಹುತೇಕ ಸಾಕ್ಷ್ಯ ಕೊರತೆ ಮತ್ತಿತರ ಕಾರಣಗಳಿಗೆ ಮಾರ್ಗ ಮಧ್ಯೆಯೇ ಖುಲಾಸೆಯಾಗುತ್ತಿದ್ದವು. ಹೀಗಾಗಿ, ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ವಿಚಾರದಲ್ಲಿ ಜನರಲ್ಲೂ ವಿಶ್ವಾಸಮೂಡಿಸುವ ಕೆಲಸ ಆಗುತ್ತಿರಲಿಲ್ಲ. ಇದೀಗ ಹೈಕೋರ್ಟ್‌ನ ತೀರ್ಪಿನಿಂದ ಭ್ರಷ್ಟಾಚಾರ ನಿಗ್ರಹ ದಳ ಅಪ್ರಸ್ತುತಗೊಂಡಂತಾಗಿದ್ದು ಆರು ವರ್ಷದ ಬಳಿಕ ಎಸಿಬಿ ತನ್ನ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ.
2016ರಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗಕ್ಕಿದ್ದ ಅಧಿಕಾರವನ್ನು ಮೊಟಕುಗೊಳಿಸಿ ಇದಕ್ಕೆ ಪರ್ಯಾಯವಾಗಿ ಸ್ಥಾಪನೆಯಾದ ಎಸಿಬಿ ಪ್ರಾರಂಭವಾದ ಬಳಿಕ ಇದುವರೆಗೂ 2,121 ಎಫ್ಐಆರ್ ದಾಖಲಾಗಿದೆಯಾದರೂ ಶಿಕ್ಷೆಯಾಗಿರುವುದು ಕೇವಲ 22 ಮಂದಿಗೆ ಮಾತ್ರ. ಭ್ರಷ್ಟರ ಮೇಲೆ ದಾಳಿ ನಡೆಸಿ ಭಾರಿ ಮೊತ್ತದ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಪ್ರಕರಣಗಳಲ್ಲಿ ಇದುವರೆಗೆ ಒಬ್ಬರಿಗೂ ಶಿಕ್ಷೆಯಾಗಿಲ್ಲ. ಇದನ್ನು ನೋಡಿದರೆ ಎಸಿಬಿ ಅಗತ್ಯವಿತ್ತೇ ಎಂಬ ಪ್ರಶ್ನೆಯೂ ಮೂಡಿತ್ತು.
ರಾಜ್ಯ ಸರಕಾರ ಇದೀಗ ಲೋಕಾಯುಕ್ತಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು. ಜತೆಗೆ ಸರಕಾರದ ಹಸ್ತಕ್ಷೇಪ ಇಲ್ಲದಂತೆ ಸ್ವತಂತ್ರವಾಗಿ ಕೆಲಸ ಮಾಡುವ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು. ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಿ ಮತ್ತೆ ರಾಜ್ಯ ಭ್ರಷ್ಟಾಚಾರ ನಿಯಂತ್ರಣಕ್ಕೆ ಮಾದರಿಯಾಗುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಪಾತ್ರ ಬಹುದೊಡ್ಡದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾ ಯುಕ್ತ ಪೊಲೀಸರಿಗೆ ತನಿಖೆ ನಡೆಸುವ ಸಂಬಂಧ ಹೊರಡಿಸಿದ್ದ ಆದೇಶ ಗಳನ್ನು ಪುನರ್ ಸ್ಥಾಪಿಸಿರುವುದು ಒಂದು ರೀತಿಯಲ್ಲಿ ಲೋಕಾಯುಕ್ತಕ್ಕೆ ಬಹುದೊಡ್ಡ ಶಕ್ತಿ ಸಿಕ್ಕಿದಂತೆ. ಹೈಕೋರ್ಟ್ ತೀರ್ಪು ಜತೆಗೆ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಾಗೂ ವಿಸ್ತೃತ ನೆಲೆಯಲ್ಲಿ ನ್ಯಾಯದಾನ ಗಮನದಲ್ಲಿಟ್ಟುಕೊಂಡು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 3 (2)ಎ ಮತ್ತು 3(2)ಬಿ ಅಡಿ ಸಾರ್ವಜನಿಕ ಮತ್ತು ಖಾಸಗಿ ಬದುಕಿನಲ್ಲಿ ಅತ್ಯುತ್ತಮ ಹಿನ್ನಲೆ, ಪ್ರಾಮಾಣಿಕತೆ ಹೊಂದಿರುವ ಸಮರ್ಥ ಹಾಗೂ ನಿಷ್ಪಕ್ಷಪಾತ, ನ್ಯಾಯಯುತವಾಗಿ ನಡೆದುಕೊಳ್ಳವ ಸಚ್ಚಾರಿತ್ರ್ಯವಂತರನ್ನು ಲೋಕಾ ಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆಗಳಿಗೆ ನೇಮಕ ಮಾಡಬೇಕು. ಈ ನಿಟ್ಟಿನಲ್ಲಿ ಸಾಂವಿಧಾನಿಕ ಪ್ರಾಧಿಕಾರಗಳು ಶಿಫಾರಸುಗಳನ್ನು ಮಾಡುವಂತೆ ಹೇಳಿದೆ.
ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ನೇಮಕಾತಿ ವೇಳೆ ಎಂಥವರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಹೈಕೋರ್ಟ್ ಸಲಹೆ ಸೂಚನೆ ನೀಡಿದ್ದು, ಇದನ್ನು ಪಾಲಿಸುವತ್ತ ಸರಕಾರ ಗಮನ ಹರಿಸಬೇಕು.