Advertisement

ಹಸಿರ ಸಿರಿಗೆ ಮಾದರಿಯಾದ ಮಲ್ಲಾಪುರ ಸರ್ಕಾರಿ ಶಾಲೆ

09:50 AM Jan 23, 2019 | |

ಲೋಕಾಪುರ: ನಮ್ಮೂರ ಶಾಲೆ ಎಂದು ಹೆಗ್ಗಳಿಕೆ ಪಾತ್ರವಾದ ಮಲ್ಲಾಪುರ ಎಸ್‌.ಎಲ್‌. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಸಿರು ಉದ್ಯಾನವನ ಕಣ್ಮನ ಸೆಳೆಯುತ್ತದೆ.

Advertisement

ಶಾಲೆ ಆವರಣದಲ್ಲಿ ತೆಂಗಿನಮರ, ಬಿಲ್‌ಪತ್ರಿ ಬಾದಾಮಿ ಗಿಡ, ತೆಂಗಿನಮರ, ಅಶೋಕಗಿಡ, ಕ್ರಿಸ್‌ಮಸ್‌ ಗಿಡ, ಬೇವಿನಮರ, ನುಗ್ಗೆಕಾಯಿ ಗಿಡ, ಕರಿಬೇವು ಗಿಡಗಳಿವೆ. ಅದಲ್ಲದೇ ಅಮೃತ ಬಳ್ಳಿ, ಬೆಟ್ಟದ ನಲ್ಲಿಕಾಯಿ, ತುಳಸಿ, ದಾಸವಾಳ, ಪುದೀನಾ ಸೇರಿದಂತೆ ಔಷಧೀಯ ಗಿಡಗಳು ಹಾಗೂ ಗುಲಾಬಿ ಹೂಗಳು ಬೆಳೆಸಿದ ಹೂದೋಟ ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ.

ಮುಖ್ಯ ಶಿಕ್ಷಕ ಎಸ್‌.ಬಿ. ತಿರಕನ್ನವರ, ಸಹ ಶಿಕ್ಷಕರಾದ ಅರವಿಂದ ಪಾಟೀಲ, ಎಚ್.ಎ. ಕೊಳಚಿ ಎಸ್‌.ಸಿ. ವಾರಿಕಲ್ಲಮಠ ಬಿ.ಆರ್‌. ದಂಡಿನದುರ್ಗಿ ಆರ್‌.ಎಸ್‌. ಮುದ್ದಾಪುರ, ಎಸ್‌ಡಿಎಂಸಿ ಅದ್ಯಕ್ಷ ಹಣಮಂತ ಪರಪ್ಪನವರ ಹಾಗೂ ಸದಸ್ಯರ ಮುಂದಾಳತ್ವದಲ್ಲಿ ಗ್ರಾಮಸ್ಥರು ಕೈ ಜೋಡಿಸಿ ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಿ ಹಸಿರು ಉದ್ಯಾನವನವನ್ನಾಗಿ ಮಾಡಿದ್ದಾರೆ.ಗ್ರಾಮಸ್ಥರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶ್ರಮ ವಹಿಸಿ ದೇಣಿಗೆಯಿಂದ ಶಾಲೆ ಆವರಣದಲ್ಲಿ ಸುಮಾರು 2.50 ಲಕ್ಷ ರೂ. ವೆಚ್ಚದಲ್ಲಿ ಸರಸ್ವತಿ ಮಂದಿರ ಹಾಗೂ ಶಾಲೆ ಮುಂಭಾಗದಲ್ಲಿ 45 ಸಾವಿರ ರೂ. ವೆಚ್ಚದಲ್ಲಿ ದ್ವಾರ ಫಲಕ ನಿರ್ಮಿಸಿದ್ದಾರೆ.

ಮಲ್ಲಾಪುರ ಎಸ್‌.ಎಲ್‌ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 120 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿವರ್ಷ ಮಕ್ಕಳು ಮೊರಾರ್ಜಿ ವಸತಿ, ಕಿತ್ತೂರರಾಣಿ ಚನ್ನಮ್ಮ, ರನ್ನ ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಿರುವುದು ವಿಶೇಷ. ಖಾಸಗಿ ಶಾಲೆಗಿಂತಲೂ ಗ್ರಾಮದ ಸರ್ಕಾರಿ ಶಾಲೆ ಯಾವುದರಲ್ಲಿಯೂ ಕಡಿಮೆ ಇಲ್ಲ. ಉತ್ತಮ ಪರಿಸರದಲ್ಲಿ ಶಿಕ್ಷಕವೃಂದ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆಯವರು ಇಂತಹ ಶಾಲೆ ಗುರುತಿಸಿ ಪ್ರೋತ್ಸಾಹ ನೀಡದೇ ಇರುವುದು ವಿಷಾದನೀಯ ಎಂದು ಗ್ರಾಮಸ್ಥರಾದ ಶಿವಕುಮಾರ ಪಾಟೀಲ ಮತ್ತು ಹಣಮಂತ ಪಾಟೀಲ ಹೇಳುತ್ತಾರೆ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃಂದ ಹಾಗೂ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಉತ್ತಮ ಪರಿಸರ ನಿರ್ಮಾಣ ಮಾಡಿದ್ದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ನಮ್ಮ ಗ್ರಾಮದ ಸರ್ಕಾರಿ ಶಾಲೆ ಮಾದರಿಯಾಗಿದೆ.
•ಹಣಮಂತ ಪರಪ್ಪನವರ,
ಎಸ್‌ಡಿಎಂಸಿ ಅಧ್ಯಕ್ಷ

Advertisement

ಸಲೀಮ ಐ. ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next