ಲೋಕಾಪುರ: ಪ.ಪಂ. ನಿರ್ಲಕ್ಷ್ಯತನದಿಂದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ತ್ಯಾಜ ವಸ್ತು, ಮಲೀನ ನೀರು ಮತ್ತು ಗಲೀಜು ಕೂಡಿದ್ದರಿಂದ ಅಲ್ಲಿಯ ಪ್ರದೇಶ ಈಗ ರೋಗ ಹರಡುವ ಭೀತಿಯಾಗಿ ಪರಿಣಿಮಿಸಿದೆ.
ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಜರತ ಅಮೀನಶಹಾ, ಹಯಾತಶಹಾ ದರ್ಗಾದ ಬಳಿ ಸಿಸಿ ರಸ್ತೆ ಪಕ್ಕದಲ್ಲಿ ಸರಿಯಾಗಿ ಚರಂಡಿ ನಿರ್ಮಿಸದೇ ಇರುವುದರಿಂದ ತ್ಯಾಜ ವಸ್ತು, ಮಲೀನ ನೀರು ರಸ್ತೆ ಪಕ್ಕವೇ ಹರಿಯುತ್ತಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ನಡೆದಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಕೊಳಚೆ ಪ್ರದೇಶದಲ್ಲಿ ಬಹಳ ಗಲೀಜು ಇರುವುದರಿಂದ ಹಂದಿಗಳ ಉಳಪಟ ಹೆಚ್ಚಾಗಿದೆ. ಸದ್ಯಕ್ಕೆ ಕೊಳಚೆ ಪ್ರದೇಶ ಸಂಪೂರ್ಣ ಮಲೀನ ನೀರಿನಿಂದ ತುಂಬಿ ಗಬ್ಬೆದ್ದು ನಾರುತ್ತಿವೆ.
ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಾಲೆ ಪಕ್ಕದಲ್ಲಿ ಮಕ್ಕಳು ನಡೆದಾಡುವ ಸಂದರ್ಭ ಅದರಲ್ಲಿ ಬಿದ್ದು ಗಾಯ ಮಾಡಿಕೊಂಡ ಘಟನೆಗಳು ಸಂಭವಿಸಿದರೂ ಇದಕ್ಕೆ ಪ.ಪಂ.ನ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಕೊಳಚೆ ಪ್ರದೇಶ ನಿರ್ಮಾಣವಾಗಿರುವುದರಿಂದ ಡೆಂಗ್ಯೂ, ಮಲೇರಿಯಾದಂತಹ ಸಂಕ್ರಾಮಿಕ ರೋಗ ಹಬ್ಬುವ ಭೀತಿ ಇದೆ. ಶಾಲೆಯ ಪಕ್ಕದಲ್ಲಿ ಗಲೀಜು ಇರುವುದರಿಂದ ದುರ್ವಾಸನೆ ಬರುತ್ತಿದ್ದು, ಶಿಕ್ಷಕರಿಗೆ ಹಾಗೂ ವಿದ್ಯರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಬಹಳ ತೊಂದರೆಯಾಗಿದೆ.
ಈ ಕುರಿತು ಪ.ಪಂ. ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವಾರು ಬಾರಿ ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಪ.ಪಂ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆಂದು ಅಲ್ಲಿಯ ನಿವಾಸಿಗಳು ದೂರಿದ್ದಾರೆ.
ಮಲೀನ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ತೆಯಿಲ್ಲದ ಕಾರಣ ಶಾಲೆ ಪಕ್ಕದಲ್ಲಿ ಕೊಳಚೆ ಪ್ರದೇಶ ನಿರ್ಮಾಣವಾಗಿದೆ. ಪಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊಳಚೆ ಪ್ರದೇಶವನ್ನು ಸ್ವಚ್ಚತೆಗೆ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಎಂಸಿ ಸದಸ್ಯ ಶಬ್ಬೀರ ಅತ್ತಾರ ತಿಳಿಸಿದರು.
ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಸಂಚರಿಸಲು ಬಹಳ ಕಷ್ಟಕರವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೇ ಗಮನ ಹರಿಸಿ ಕೊಳಚೆ ಪ್ರದೇಶ ಸ್ವಚ್ಛಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.