ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ಕ್ಷೇತ್ರದ ಮತದಾರರು ಅಖಾಡದಲ್ಲಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಬಗ್ಗೆ ಮಹಾ ತೀರ್ಪು ಬರೆಯಲು ಕೇವಲ 14 ದಿನ ಮಾತ್ರ ಬಾಕಿ ಇದೆ. ಆದರೆ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಕಾವು ಮಾತ್ರ ಸ್ಟಾರ್ ಪ್ರಚಾರಕರ ಕೊರತೆಯಿಂದ ಕಳೆಗುಂದಿದೆ.
Advertisement
ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ನಡುವೆ ನೇರ ಹಣಾಹಣಿ ನಡೆಯುತ್ತಿದ್ದರೂ ಪ್ರಚಾರದ ಭರಾಟೆ ಮಾತ್ರ ಕಾರ್ಯಕರ್ತರ, ಮುಖಂಡರಿಗೆ ಮಾತ್ರ ಸೀಮಿತವಾಗಿದ್ದು, ಇತ್ತ ಮೈತ್ರಿ ಅಭ್ಯರ್ಥಿ ಪರ ರಾಷ್ಟ್ರ, ರಾಜ್ಯ ನಾಯಕರು ಹೆಜ್ಜೆ ಹಾಕದೇ, ಅತ್ತ ಬಿಜೆಪಿ ಅಭ್ಯರ್ಥಿ ಪರವು ಪಕ್ಷದ ನಾಯಕರು ಅಥವಾ ಸ್ಟಾರ್ ಪ್ರಚಾರಕರು ಆಗಮಿಸಿಲ್ಲ.
Related Articles
Advertisement
ವಿಧಾನಸಭಾ ಚುನಾವಣೆಗೆ ತಾರಾ ಮೆರಗು: ವಿಶೇಷ ಅಂದರೆ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ಕೂಡ ಜಿಲ್ಲೆಯಲ್ಲಿ ತಾರಾ ಮೆರಗುನಿಂದ ಗಮನ ಸೆಳೆದಿತ್ತು. ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಾಸಕ ಡಾ.ಕೆ.ಸುಧಾಕರ್ ದಕ್ಷಿಣ ಭಾರತದ ಪ್ರಖ್ಯಾತ ನಟ, ನಟಿಯನ್ನು ಕ್ಷೇತ್ರಕ್ಕೆ ಕರೆಸಿ ತಮ್ಮ ಪರ ಚುನಾವಣಾ ಪ್ರಚಾರ ನಡೆಸಿದ್ದರು.
ಬಹುಭಾಷ ನಟಿಯರಾದ ನಗ್ಮಾ, ಖೂಷ್ಬೂ, ಕನ್ನಡದ ನಟ, ನಟಿಯರಾದ ದಿಗಂತ್, ಪ್ರಜ್ವಲ್ ದೇವರಾಜ್ ಹಾಗೂ ಹರ್ಷಿಕಾ ಪೂರ್ಣಚ್ಚ ಸೇರಿದಂತೆ ಹಲವು ಚಿತ್ರರಂಗದ ಕಲಾವಿದರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವಾರಗಟ್ಟಲೇ ಮೊಕ್ಕಾಂ ಹೂಡಿ ಸುಧಾಕರ್ ಪರ ಚುನಾವಣಾ ಪ್ರಚಾರ ನಡೆಸಿದ್ದರು. ಚಿಕ್ಕಬಳ್ಳಾಪುರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕೆ.ವಿ.ನವೀನ್ ಕಿರಣ್ ಪರ ನಟ ಪವನ್ ಕಲ್ಯಾಣ್ ಬಂದು ಪ್ರಚಾರ ನಡೆಸಿದ್ದರು.
ಮೋದಿ ಬಂದು ಹೋಗಿದ್ದರು: 2014 ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಪರ ಚುನಾವಣಾ ಪ್ರಚಾರಕ್ಕಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದರು. ಆದರೆ ಮೋದಿ ಹವಾವನ್ನು ಮೀರಿ ಮೊಯ್ಲಿ ಅವರು ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ವಿಜಯದ ಪತಾಕೆ ಹಾರಿಸಿದ್ದರು. ಆದರೆ ಈ ಬಾರಿಯು ಮೋದಿ ಬರುತ್ತಾರೆಂದು ಎಂಬ ಮಾತು ಬಿಜೆಪಿ ವಲಯದಲ್ಲಿ ಆರಂಭದಲ್ಲಿ ಕೇಳಿ ಬರುತ್ತಿದ್ದರೂ ಮೋದಿ ಉತ್ತರ ಕರ್ನಾಟಕವನ್ನು ಕೇಂದ್ರೀಕರಿಸಿರುವುದರಿಂದ ಈ ಬಾರಿ ಚಿಕ್ಕಬಳ್ಳಾಪುರಕ್ಕೆ ಮೋದಿ ಬರುವುದು ಅನುಮಾನ.
ಇನ್ನೂ ಚುನಾವಣೆ ಘೋಷಣೆಗೂ ಮೊದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇವನಹಳ್ಳಿ ಸಮೀಪ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಈಗ ಅಮಿತ್ ಶಾ ಪ್ರವಾಸ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ನಿಗದಿಯಾಗಿರುವುದರಿಂದ ಚಿಕ್ಕಬಳ್ಳಾಪುರಕ್ಕೆ ಬಿಜೆಪಿ ಕೇಂದ್ರ ನಾಯಕರು ಬರುವುದು ಅನುಮಾನ ಎನ್ನಲಾಗುತ್ತಿದೆ.
ಒಟ್ಟಾರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳ ಪರ ವಿವಿಧ ನಟ, ನಟಿಯರು ಪಾಲ್ಗೊಂಡಿದ್ದರಿಂದ ತಾರಾ ಪ್ರಚಾರದಿಂದ ಜಿಲ್ಲಾದ್ಯಂತ ತಾರಕಕ್ಕೇರಿದ್ದ ಚುನಾವಣಾ ಪ್ರಚಾರ ಆದೇಕೋ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಸ್ಟಾರ್ ಪ್ರಚಾರಕರಿಲ್ಲದೇ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಕಳೆಗುಂದಿದೆ.
ಜಿಲ್ಲೆಗೆ ಪವನ್ ಕಲ್ಯಾಣ್ ಬರ್ತಾರಾ?: ಸದ್ಯ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಸೇರಿದಂತೆ ಆಂಧ್ರಪ್ರದೇಶದಲ್ಲಿ ಸಿಪಿಐ ಹಾಗೂ ಸಿಪಿಎಂ ಪಕ್ಷಗಳ ಜೊತೆಗೆ ಚುನಾವಣಾ ಮೈತ್ರಿ ಮಾಡಿಕೊಂಡಿರುವ ಖ್ಯಾತ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್‌ರನ್ನು ಜಿಲ್ಲೆಗೆ ಸ್ಟಾರ್ ಪ್ರಚಾರಕರಾಗಿ ಕರೆ ತರುವ ಪ್ರಯತ್ನದಲ್ಲಿ ಬಿಎಸ್‌ಪಿ ಮುಂದಾಗಿದೆ.
ನೆರೆಯ ಆಂಧ್ರಪ್ರದೇಶದಲ್ಲಿ ಏ.11ಕ್ಕೆ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮುಗಿಯಲಿದ್ದು, ಬಳಿಕ ಪವನ್ ಕಲ್ಯಾಣ್ ಕರ್ನಾಟಕಕ್ಕೆ ಆಗಮಿಸಿ ಬಿಎಸ್‌ಪಿ ಅಭ್ಯರ್ಥಿಗಳೊಂದಿಗೆ ಚುನಾವಣಾ ಪ್ರಚಾರ ನಡೆಸಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಚಿತ್ರ ನಟರಾದ ಚೇತನ್ ಮತ್ತಿತರರು ಸಿಪಿಎಂ ಹಾಗೂ ಬಿಎಸ್ಪಿ ಅಭ್ಯರ್ಥಿಗಳ ಪರ ಸ್ವಾರ್ ಪ್ರಚಾಕರಾಗಿ ಆಗಮಿಸುವ ಸಾಧ್ಯತೆ ಇದ್ದರೂ ಇನ್ನೂ ಯಾವುದೂ ನಿಗದಿಯಾಗಿಲ್ಲ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರನ್ನು ಕಳುಹಿಸಿ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಕೋರಿದ್ದೇವೆ. ಇನ್ನೂ ಯಾರನ್ನೂ ಈ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರಾಗಿ ನೇಮಿಸಿಲ್ಲ. ಸದ್ಯದಲೇ ಜಿಲ್ಲೆಗೆ ಪಕ್ಷದಿಂದ ಸ್ಟಾರ್ ಪ್ರಚಾಕರನ್ನು ಕರೆಸಿ ಚುನಾವಣಾ ಪ್ರಚಾರ ನಡೆಸಲಿದ್ದೇವೆ. -ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ನಿತೀನ್ ಗಡ್ಕರಿ ಮತ್ತಿತರರು ಚುನಾವಣಾ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈಗಾಗಲೇ ಪಕ್ಷದ ಅಭ್ಯರ್ಥಿ ಪರ ಜಿಲ್ಲಾದ್ಯಂತ ಪ್ರಚಾರ ಬಿರುಸಿನಿಂದ ಸಾಗಿದೆ. ಮನೆ ಮನೆಗೂ ಪ್ರಧಾನಿ ಮೋದಿ ಅವರ ಐದು ವರ್ಷಗಳ ಸಾಧನೆಯನ್ನು ಕರಪತ್ರಗಳ ಮೂಲಕ ತಿಳಿಸುತ್ತಿದ್ದೇವೆ.
-ಡಾ. ಜಿ.ವಿ.ಮಂಜುನಾಥ, ಬಿಜೆಪಿ ಜಿಲ್ಲಾಧ್ಯಕ್ಷರು * ಕಾಗತಿ ನಾಗರಾಜಪ್ಪ