Advertisement

ಲೋಕಸಭಾ ಕ್ಷೇತ‹ಕ್ಕೊಂದು ಪಾಸ್‌ಪೋರ್ಟ್‌ ಸೇವಾ ಕೇಂದ್ರ

12:09 PM Sep 20, 2018 | |

ಬೆಂಗಳೂರು: ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದು ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆಯಲು ನಿರ್ಧರಿಸಲಾಗಿದ್ದು, ಅದರಂತೆ ಈಗಾಗಲೇ ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಸೇವಾ ಕೇಂದ್ರ ಆರಂಭವಾಗಿದೆ. ಉಳಿದ 11 ಕ್ಷೇತ್ರದಲ್ಲಿ ಶೀಘ್ರವೇ ಸೇವಾಕೇಂದ್ರ ಆರಂಭಿಸಲಾಗುವುದು ಎಂದು ಪಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಭರತ್‌ ಕುಮಾರ್‌ ಕುಟಾಟಿ ಹೇಳಿದರು.

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್ಕೆಸಿಸಿಐ) ಬುಧವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅತಿ ಹೆಚ್ಚು ಪಾಸ್‌ಪೋರ್ಟ್‌ ವಿತರಿಸುವ ರಾಜ್ಯದಲ್ಲಿ ಕರ್ನಾಟಕ ಪ್ರಥಮ
ಸ್ಥಾನದಲ್ಲಿದೆ. 2017- 18ನೇ ಸಾಲಿನಲ್ಲಿ ರಾಜ್ಯದಲ್ಲಿ 7.34 ಲಕ್ಷ ಮಂದಿಗೆ ಪಾಸ್‌ಪೋರ್ಟ್‌ ವಿತರಿಸಲಾಗಿದೆ. ನಿತ್ಯ ಸುಮಾರು 3000 ಪಾಸ್‌ ಪೋರ್ಟ್‌ ನೀಡಲಾಗುತ್ತಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.5ರಷ್ಟು ಮಂದಿಯಷ್ಟೇ ಪಾಸ್‌ಪೋರ್ಟ್‌ ಹೊಂದಿದ್ದು, ಅಮೆರಿಕದಲ್ಲಿ ಶೇ. 95ರಷ್ಟು ಜನ ಪಾಸ್‌ಪೋರ್ಟ್‌ ಹೊಂದಿದ್ದಾರೆ ಎಂದು ತಿಳಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಯು ಎಲ್ಲ ರಾಜ್ಯಗಳ ರಾಜಧಾನಿಯಲ್ಲಿರಬೇಕು ಎಂಬ ಒತ್ತಾಯವಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೋರಮಂಗಲದ ಪಾಸ್‌ಪೋರ್ಟ್‌ ಕಚೇರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಯನ್ನು “ವಿದೇಶ್‌ ಭವನ್‌’ ಆಗಿ ಪರಿವರ್ತಿಸಲು ಸಿದ್ಧತೆ ಕಾರ್ಯ ನಡೆದಿದೆ. ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಷನ್ಸ್‌ ಸೇರಿದಂತೆ ಸಚಿವಾಲಯದ ವ್ಯಾಪ್ತಿಯಲ್ಲಿನ ಎಲ್ಲ ವಿಭಾಗಗಳನ್ನು ಅದೇ ಕಚೇರಿಗೆ ಸ್ಥಳಾಂತರಿಸಲಾಗುವುದು. ಸಚಿವಾಲಯದ ಮುಖ್ಯ ಕಚೇರಿ ವ್ಯಾಪ್ತಿಯಲ್ಲಿ ಎಲ್ಲ ವಿಭಾಗಗಳು ಕಾರ್ಯ ನಿರ್ವಹಿಸಲಿವೆ. ಸಚಿವಾಲಯದ ಎಲ್ಲ ಸೇವೆಗಳು ಜನರಿಗೆ ಒಂದೆಡೆ ಸಿಗಲಿದೆ ಎಂದು ಪ್ರತಿಕ್ರಿಯೆ ನೀಡಿದರು.

ಪೊಲೀಸ್‌ ಪರಿಶೀಲನೆ ಬೇಕಿಲ್ಲ: ಸಾರ್ವಜನಿಕರು ಆನ್‌ಲೈನ್‌ ಮೂಲಕ ಯಾವುದೇ ಸ್ಥಳದಿಂದ ಪಾಸ್‌ ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಹಿಂದೆ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲಿಸಿ ದೃಢೀಕರಿಸುವುದು ಕಡ್ಡಾಯವಾಗಿತ್ತು. ಆದರೆ,
ಈಗ ಅರ್ಜಿದಾರರ ವಿರುದ್ಧ ಯಾವುದಾದರೂ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆಯೇ ಎಂಬ ಬಗ್ಗೆ ಪೊಲೀಸರಿಂದ ನೇರವಾಗಿ ಮಾಹಿತಿ ಪಡೆಯಲಾಗುತ್ತದೆ. ಇದರಿಂದಾಗಿ ಪೊಲಿಸರು ಅರ್ಜಿದಾರರ ಮನೆಗೆ ತೆರಳಿ ಇಲ್ಲವೇ ಅರ್ಜಿದಾರರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆಯುವ ಅಗತ್ಯವಿಲ್ಲ. ಇತ್ತೀಚೆಗೆ ನಿಯಮಗಳನ್ನು ಸರಳಗೊಳಿಸಲಾಗಿದ್ದು, ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಸಮಸ್ಯೆಗಳನ್ನು ಟ್ವಿಟರ್‌ ಮೂಲಕ ಸಲ್ಲಿಸಬಹುದು ಎಂದು ಹೇಳಿದರು.

ಕ್ಷಮೆ ಯಾಚಿಸಿದ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಇತ್ತೀಚೆಗೆ ಪಾಸ್‌ಪೋರ್ಟ್‌ ಪುಟಗಳ ಸಂಖ್ಯೆ ವ್ಯತ್ಯಾಸದಿಂದ ಮಾಸ್ಕೋದಲ್ಲಿ ಸಮಸ್ಯೆಗೆ ಸಿಲುಕಿದ್ದ ಉದ್ಯಮಿ ಪ್ರವೀಣ್‌ ಚೌಹಾಣ್‌ ಅವರು ಕೋರಮಂಗಲದ ಪಾಸ್‌ಪೋರ್ಟ್‌
ಕಚೇರಿ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಸಂವಾದದಲ್ಲಿ ಪ್ರಸ್ತಾಪಿಸಿದ ಪ್ರವೀಣ್‌ ಚೌಹಾಣ್‌, ನನಗೆ ನೀಡಲಾದ ಪಾಸ್‌ಪೋರ್ಟ್‌ ಪುಸ್ತಕದಲ್ಲಿ 8ನೇ ಪುಟದ ಬಳಿಕ 14ನೇ ಪುಟವಿದೆ. ಇದನ್ನು ಪತ್ತೆ ಹಚ್ಚಿದ ಮಾಸ್ಕೋದಲ್ಲಿನ ಅಧಿಕಾರಿಗಳು, ಪರಿಶೀಲನಾ ಜಾಗದಲ್ಲಿ ಅಪರಾಧಿಗಳೊಂದಿಗೆ ನನ್ನನ್ನು ಇರಿಸಿದ್ದರು. ನಾಲ್ಕೈದು ಗಂಟೆ ಪರಿಶೀಲನೆ ಬಳಿಕ ನನ್ನನ್ನು ಬಿಟ್ಟರು.

Advertisement

ಗಂಟೆಗಟ್ಟಲೇ ಕಾದು ಬೆಂಗಳೂರು ತಲುಪಿದ ಬಳಿಕ ಪಾಸ್‌ಪೋರ್ಟ್‌ ಕಚೇರಿಗೆ ದೂರು ನೀಡಿದೆ. ಆದರೆ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಹೇಳಿದರು. ಪ್ರವೀಣ್‌
ಚೌಹಾಣ್‌ ಅವರಿಗಾದ ತೊಂದರೆಗೆ ಕ್ಷಮೆ ಯಾಚಿಸಿದ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಭರತ್‌ ಕುಮಾರ್‌ ಕುಟಾಟಿ, ಗುರುವಾರ ಈ ಸಂಬಂಧ ಅವರೊಂದಿಗೆ ಸಭೆ ನಡೆಸಿ ವಿಸ್ತ್ರತ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next