ಬೆಂಗಳೂರು: ರಾಜಕೀಯ ನಿವೃತ್ತಿ ಘೋಷಣೆ ಬಳಿಕ ಪಕ್ಷದ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಮತ್ತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಪಕ್ಷ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿದ್ದ ಸದಾನಂದ ಗೌಡರ ನಿವಾಸಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಮತ್ತಿತರ ನಾಯಕರು ಭೇಟಿ ನೀಡಿ ಸಮಾಲೋಚಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಪುನರ್ ಪರಿಶೀಲಿಸಿ. ನೀವು ಸ್ಪರ್ಧಿಸುವುದಿಲ್ಲ ಎಂಬುದೇ ಅಂತಿಮವಾದರೆ ಬೇರೆ ಅಭ್ಯರ್ಥಿಯನ್ನು ನಿಲ್ಲಿಸಿದರೂ ಸಹಕರಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿ. ರವಿ ಸಹಿತ ಹಲವರ ಹೆಸರು ಕೂಡ ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ತಮ್ಮ ಮುಂದೆ ಆಯ್ಕೆಗಳನ್ನು ಇಟ್ಟದ್ದನ್ನರಿತ ಸದಾನಂದ ಗೌಡ, ಮರುಸ್ಪರ್ಧೆಯ ಕುರಿತು ಚಿಂತನೆ ನಡೆಸಿದ್ದಾರೆ. ಹೊಸಬರಿಗೆ ಅವಕಾಶ ಮಾಡಿ ಕೊಡಬೇಕೆಂದಿದ್ದೇನೆ. ಆದರೆ ಸ್ಪರ್ಧೆಗೆ ಒತ್ತಡಗಳು ಹೆಚ್ಚಾಗುತ್ತಿವೆ ಎನ್ನುವ ಮೂಲಕ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರ ಅಸ್ತ್ರವನ್ನೇ ಪ್ರಯೋಗಿಸಲು ಮುಂದಾಗಿದ್ದಾರೆ.
1995 ರ ಬಳಿಕ ಪಕ್ಷದಲ್ಲಿ ನಾನು ಕೇಳಿ ಪಡೆದಿದ್ದು ಕಡಿಮೆ. ಪಕ್ಷ ಏನು ನಿರ್ಣಯಿಸುತ್ತದೆಯೋ ಅದನ್ನು ಕೇಳಿದ್ದೇನೆ. ನನ್ನ ಕೆಲಸ ಏನಿದ್ದರೂ ಪಕ್ಷವನ್ನು ಸಂಘಟಿಸುವುದು, ಶಕ್ತಿ ತುಂಬುವುದಷ್ಟೇ. ನಾನೇನಾಗಬೇಕು, ಸ್ಪರ್ಧಿಸಬೇಕೆ? ಬೇಡವೋ? ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನೆಲ್ಲ ಪಕ್ಷ ತೀರ್ಮಾನಿಸುತ್ತದೆ. ಕೊಟ್ಟರೆ ಉಂಟು, ಇಲ್ಲದಿದ್ದರೆ ಇಲ್ಲ. ಚೆನ್ನಾಗಿಲ್ಲದವರೊಂದಿಗೂ ಉತ್ತಮ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸುವವನು ನಾನು.
– ಸಿ.ಟಿ. ರವಿ, ಮಾಜಿ ಸಚಿವ
ಚುನಾವಣೆಯಿಂದ ನಿವೃತ್ತಿ ಆಗುತ್ತಿದ್ದೇನೆ ಎಂದು ಸದಾನಂದ ಗೌಡರು ಸ್ಪಷ್ಟವಾಗಿ ಹೇಳಿದ್ದರು. ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು, ಪುನರ್‌ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದೆವು. ಅವರು ತತ್‌ಕ್ಷಣ ಯಾವುದಕ್ಕೂ ಒಪ್ಪಿಲ್ಲ. ಆದರೂ ಪಕ್ಷ ತೆಗೆದುಕೊಳ್ಳುವ ನಿರ್ಧಾರ ಗೌರವಿಸಿ ಎಂದಿದ್ದೇವೆ.
– ಡಾ.ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಡಿಸಿಎಂ
Advertisement