ನವದೆಹಲಿ: ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಇಂದು(ಶುಕ್ರವಾರ) ಆರಂಭವಾಗಿದೆ. ಮೊದಲ ಹಂತದಲ್ಲಿ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 102 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6ಕ್ಕೆ ಮುಕ್ತಾಯವಾಗಲಿದೆ.
ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ 1,652 ಅಭ್ಯರ್ಥಿಗಳಿದ್ದು. ಇಂದು 16.63 ಕೋಟಿ ಜನರು ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಮೊದಲ ಹಂತದ ಮತದಾನ 1.87 ಲಕ್ಷ ಮತಗಟ್ಟೆಗಳಲ್ಲಿ ಮುಂದುವರಿಯಲಿದೆ.
ತಮಿಳುನಾಡಿನ – 39, ರಾಜಸ್ಥಾನದ 12, ಉ.ಪ್ರದೇಶದ 8, ಮಧ್ಯ ಪ್ರದೇಶ 6, ಉತ್ತರಾಖಂಡ 5, ಮಹಾರಾಷ್ಟ್ರ 5, ಅಸ್ಸಾಂನ 5, ಬಿಹಾರದ 4 , ಪ. ಬಂಗಾಳದ 3, ಮಣಿಪುರ 2, ಅರುಣಾಚಲ ಪ್ರದೇಶ 2 , ಮೇಘಾಲಯ 2, ಪುದುಚೆರಿ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದಲ್ಲಿ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಚುನಾವಣೆಯನ್ನು ಶಾಂತಿಯುತವಾಗಿ ಮತ್ತು ಸುಗಮವಾಗಿ ನಡೆಸಲು ಚುನಾವಣಾ ಆಯೋಗ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಪಡೆಗಳೊಂದಿಗೆ ಮತದಾನ ಕೇಂದ್ರಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅರ್ಧಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಮತ್ತು ಮೈಕ್ರೋ ಅಬ್ಸರ್ವರ್‌ಗಳ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದ ಮತದಾನಕ್ಕೆ ಇಸಿ 361 ವೀಕ್ಷಕರನ್ನು ನೇಮಿಸಿದೆ. 5000ಕ್ಕೂ ಹೆಚ್ಚು ಮತಗಟ್ಟೆ ಕೇಂದ್ರಗಳಲ್ಲಿ ಮಹಿಳಾ ಅಧಿಕಾರಿಗಳ ಕರ್ತವ್ಯವನ್ನು ವಹಿಸಲಾಗಿದೆ.
ಇದನ್ನೂ ಓದಿ: Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ