Advertisement

ಪಟ್ಟಿಗಾಗಿ ಕಸರತ್ತು: ಬಿಜೆಪಿ ಮೊದಲ ಪಟ್ಟಿಯಲ್ಲಿ ರಾಜ್ಯದ 8ರಿಂದ 10 ಹೆಸರು ಪ್ರಕಟ?

12:21 AM Mar 07, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಸಂಬಂಧ ಪಟ್ಟಂತೆ ದಿಲ್ಲಿಯಲ್ಲಿ ಬಿಜೆಪಿಯ ಹೈವೋಲ್ಟೆàಜ್‌ ಸಭೆ ನಡೆದಿದ್ದು, ಮಾರ್ಚ್‌ 8 ರಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುವ ಚುನಾವಣೆ ಸಮಿತಿ ಸಭೆಯಲ್ಲಿ ರಾಜ್ಯದ 8 ರಿಂದ 10 ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಅಚ್ಚರಿಯ ಬೆಳವಣಿಗೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರು ಪ್ರಸ್ತಾವಿ ಸಲಾಗಿದ್ದು, ಮೊದಲ ಪಟ್ಟಿಯಲ್ಲೇ ಈ ಕುತೂಹಲ ತಣಿಯಲಿದೆ.

Advertisement

ದಿಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾ. ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹಸಚಿವ ಅಮಿತ್‌ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಚುನಾವಣಾ ಸಮಿತಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌, ಮಾಜಿ ಸಿಎಂಗಳಾದ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕರಾದ ಆರ್‌.ಅಶೋಕ್‌, ಕೋಟ ಶ್ರೀನಿವಾಸ್‌ ಪೂಜಾರಿ, ಉಪನಾಯಕ ಅರವಿಂದ್‌ ಬೆಲ್ಲದ್‌ ಭಾಗವಹಿಸಿದ್ದರು. ರಾಜ್ಯದ ಮೊದಲ ಪಟ್ಟಿ ಮಾ. 8ರಂದು ಪ್ರಕಟವಾಗುವ ಸಂಭವವಿದೆ.

ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಹೈಕಮಾಂಡ್‌ ಪ್ರತ್ಯೇಕ ಸರ್ವೆ ನಡೆಸಿದೆ. ರಾಜ್ಯ ನಾಯಕರು ಕೊಟ್ಟ ಮಾಹಿತಿಯನ್ನೂ ಪಡೆದಿದೆ. ಜತೆಗೆ ಜೆಡಿಎಸ್‌ ನಾಯಕರು ಕೊಟ್ಟ ಅಭಿಪ್ರಾಯಗಳನ್ನೂ ಪರಿಗಣಿಸಿದೆ. ರಾಜ್ಯದ ನಾಯಕರು ಕೊಟ್ಟ ಪಟ್ಟಿಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್‌ ಶೆಟ್ಟರ್‌ ಹೆಸರನ್ನು ಸೂಚಿಸಲಾಗಿದೆ.

ಜತೆಗೆ ಶೆಟ್ಟರ್‌ ಹೆಸರನ್ನು ಹುಬ್ಬಳ್ಳಿ-ಧಾರವಾಡ ಕ್ಷೇತ್ರಕ್ಕೂ ಪ್ರಸ್ತಾಪಿಸಲಾಗಿದೆ. ಆದರೆ ಬೆಳಗಾವಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ ಎನ್ನಲಾಗಿದೆ. ತುಮಕೂರಿಗೆ ಸಂಬಂಧಪಟ್ಟಂತೆ ಮಾಜಿ ಸಚಿವರಾದ ಮಾಧುಸ್ವಾಮಿ ಹಾಗೂ ವಿ.ಸೋಮಣ್ಣ ಇಬ್ಬರ ಹೆಸರು ಪ್ರಸ್ತಾಪಿಸಲಾಗಿದೆ.

ಬದಲಾವಣೆಯ ಕೂಗು ಮೊಳಗಿದ್ದ ಕರಾವಳಿಯ ಮೂರು ಕ್ಷೇತ್ರಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಾಲಿ ಸಂಸದರ ಹೆಸರೇ ಮುಂಚೂಣಿಯಲ್ಲಿದೆ. ಉತ್ತರ ಕನ್ನಡದಿಂದ ಅನಂತಕುಮಾರ್‌ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡದಿಂದ ನಳಿನ್‌ ಕುಮಾರ್‌ ಕಟೀಲ್‌, ಬ್ರಿಜೇಶ್‌ ಚೌಟ ಹಾಗೂ ಉಡುಪಿಯಿಂದ ಶೋಭಾ ಕರಂದ್ಲಾಜೆ ಹೆಸರು ಚರ್ಚೆಯಲ್ಲಿದೆ.

Advertisement

ಬಿಜೆಪಿ ಚಿಹ್ನೆಯಿಂದ ಡಾ| ಮಂಜುನಾಥ್‌ ?
ಹೃದ್ರೋಗ ತಜ್ಞ ಡಾ| ಸಿ.ಎನ್‌.ಮಂಜುನಾಥ್‌ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಭಾರಿ ಚರ್ಚೆಯಾಗಿದೆ. ಆದರೆ ಕ್ಷೇತ್ರ ಯಾವುದು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಮಂಜುನಾಥ್‌ ಕಣಕ್ಕೆ ಇಳಿಯುವುದು ಬೇಡ ಎಂದು ಕುಮಾರಸ್ವಾಮಿ ನಿವಾಸದಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿಯ ಎಲ್ಲ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುತೇಕರು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹೆಸರನ್ನೇ ಪ್ರಸ್ತಾಪಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಸಮ್ಮತಿಸಿದ್ದಾರೆ. ಹಾಗಾದರೆ ಡಾ.ಮಂಜುನಾಥ್‌ ಸ್ಪರ್ಧೆ ಎಲ್ಲಿಂದ ಎಂಬ ಕುತೂಹಲ ಇನ್ನೂ ಉಳಿದಿದೆ.

ಬಿಜೆಪಿ ಮೂಲಗಳ ಪ್ರಕಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಡಾ.ಮಂಜುನಾಥ್‌ ಅವರ ಹೆಸರನ್ನು ಜೆಡಿಎಸ್‌ ನಾಯಕರು ಸೂಚಿಸಿದ್ದಾರೆ. ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್‌ ನಿರಾಕರಿಸಿದರೆ ಬಿಜೆಪಿ ಚಿಹ್ನೆಯಡಿ ಮಂಜುನಾಥ್‌ ಸ್ಪರ್ಧಿಸಲಿ ಎಂಬ ಸಲಹೆ ವ್ಯಕ್ತವಾಗಿದೆ.

28 ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಗಿದೆ. ಜೆಡಿಎಸ್‌ಗೆ ಎಷ್ಟು ಸ್ಥಾನ ನೀಡಬೇಕೆಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ವಿಧಾನಸಭೆಯಲ್ಲಿ ಸೋತವರಿಗೆ ಟಿಕೆಟ್‌ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಪ್ರಕಟವಾಗುತ್ತದೆ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

ವರಿಷ್ಠರು ಸಮೀಕ್ಷೆ ನಡೆಸಿದ್ದಾರೆ. ಅತ್ಯುತ್ತಮ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುತ್ತದೆ. ಕೆಲವು ಸಂಸದರು ವಯಸ್ಸಿನ ಕಾರಣಕ್ಕೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.
ಕೋಟ ಶ್ರೀನಿವಾಸ್‌ ಪೂಜಾರಿ,
-ವಿಧಾನ ಪರಿಷತ್‌ ವಿಪಕ್ಷ ನಾಯಕ

ಹಾವೇರಿ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌ ಹೆಸರು. ಶೆಟ್ಟರ್‌ ಹೆಸರು ಹುಬ್ಬಳ್ಳಿ- ಧಾರವಾಡ ಕ್ಷೇತ್ರಕ್ಕೂ ಪ್ರಸ್ತಾವ.

ತುಮಕೂರಿಗೆ ಮಾಜಿ ಸಚಿವರಾದ ಮಾಧುಸ್ವಾಮಿ ಹಾಗೂ ವಿ.ಸೋಮಣ್ಣ ಹೆಸರು ಚರ್ಚೆಯಲ್ಲಿ.

ಉತ್ತರಕನ್ನಡದಿಂದ ಅನಂತ ಕುಮಾರ್‌ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡ ದಿಂದ ನಳಿನ್‌ ಕುಮಾರ್‌ ಕಟೀಲ್‌, ಬ್ರಿಜೇಶ್‌ ಚೌಟ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಹೆಸರು ಪಟ್ಟಿಯಲ್ಲಿ.

ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಸ್ಪರ್ಧಿಸಲಿರುವ ಕ್ಷೇತ್ರ ಬೆಂಗಳೂರು ಉತ್ತರ?

ಕಾಂಗ್ರೆಸ್‌ ಮೊದಲ ಪಟ್ಟಿಗೆ 18ರಿಂದ 20 ಹೆಸರು ಅಂತಿಮ?
ಬೆಂಗಳೂರು: ರಾಜ್ಯದ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೊನೆಯ ಹಂತ ತಲುಪಿದ್ದು, ಗುರುವಾರ ದಿಲ್ಲಿಯಲ್ಲಿ ನಡೆಯುವ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಅಂತಿಮ ಮುದ್ರೆ ಬೀಳುವ ಸಾಧ್ಯತೆಗಳಿವೆ. ಎಲ್ಲವೂ ಸುಸೂತ್ರವಾಗಿ ನಡೆದರೆ 18ರಿಂದ 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ.

ಈ ಮಹತ್ವದ ಸಭೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌ ಅವರು ಗುರುವಾರ ಜತೆ ಯಾಗಿ ದಿಲ್ಲಿಗೆ ತೆರಳುವ ನಿರೀಕ್ಷೆ ಇತ್ತು. ರಾತ್ರಿ ದಿಲ್ಲಿ ತಲುಪಿದ ಬಳಿಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ ಅವರೊಂದಿಗೆ ಸಭೆ ನಡೆಸಿ, ಪಟ್ಟಿಗೆ ಅಂತಿಮ ಸ್ಪರ್ಶ ನೀಡುವ ಅಂದಾಜಿತ್ತು.
ಆದರೆ, ಕೊನೆಯ ಹಂತದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಲ್ಲಿ ಪ್ರವಾ ಸದಲ್ಲಿ ಡಿಸಿಎಂ ಶಿವಕುಮಾರ್‌ ಅವ ರಿಗೆ ಜತೆಯಾಗುತ್ತಿಲ್ಲ. ಶಿವಕುಮಾರ್‌ ಒಬ್ಬರೇ ದಿಲ್ಲಿಗೆ ತೆರಳಿಸುರ್ಜೇವಾಲ ಅವರೊಟ್ಟಿಗೆ ಚರ್ಚಿಸಿ ಹೈಕಮಾಂಡ್‌ ಮುಂದೆ ರಾಜ್ಯದ ಆಕಾಂಕ್ಷಿಗಳ ಪಟ್ಟಿಯನ್ನು ಮಂಡಿಸುವ ಸಾಧ್ಯತೆ ಇದೆ.

ಡಿಸಿಎಂ ದಿಲ್ಲಿಯತ್ತ ತೆರಳಿದರೆ, ಸಿಎಂ ಬೀದರ್‌ಗೆ ತೆರಳಿ ವಿವಿಧ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುವರು. ರಾತ್ರಿ 7 ಗಂಟೆಗೆ ಬೆಂಗಳೂರಿಗೆ ವಾಪಸಾಗಿ 7.30ಕ್ಕೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ ನಡೆಸುವರು. ಹೀಗಾಗಿ ಡಿಸಿಎಂ ದಿಲ್ಲಿ ಭೇಟಿ ಬಳಿಕ ಅಗತ್ಯಬಿದ್ದರೆ ಸುಜೇìವಾಲ ಅವರೇ ರಾಜ್ಯಕ್ಕೆ ಮತ್ತೂಮ್ಮೆ ಆಗಮಿಸುವ ಸಂಭವವಿದ್ದು, ನಂತರವೇ ಪಟ್ಟಿ ಅಂತಿಮಗೊಂಡರೂ ಅಚ್ಚರಿಯಿಲ್ಲ ಎನ್ನಲಾಗಿದೆ.

ಇತ್ಯರ್ಥ ಕ್ಷೇತ್ರಗಳು
ಬೆಂಗಳೂರು ಗ್ರಾಮಾಂತರ
ಕೋಲಾರ
ಚಿಕ್ಕಬಳ್ಳಾಪುರ
ಹಾಸನ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಬೆಳಗಾವಿ
ಬಾಗಲಕೋಟೆ
ವಿಜಯಪುರ
ಕೊಪ್ಪಳ
ಬಳ್ಳಾರಿ
ಹಾವೇರಿ
ಧಾರವಾಡ
ಉತ್ತರ ಕನ್ನಡ
ದಕ್ಷಿಣ ಕನ್ನಡ
ಮೈಸೂರು
ಬೀದರ್‌
ಕಲಬುರಗಿ
ರಾಯಚೂರು.

ಕಗ್ಗಂಟು ಕ್ಷೇತ್ರಗಳು
ಉಡುಪಿ-ಚಿಕ್ಕಮಗಳೂರು
ತುಮಕೂರು
ಬೆಂಗಳೂರು ದಕ್ಷಿಣ
ಬೆಂಗಳೂರು ಕೇಂದ್ರ
ಬೆಂಗಳೂರು ಉತ್ತರ
ಚಾಮರಾಜನಗರ
ಮಂಡ್ಯ
ಮೈಸೂರು
ಚಿಕ್ಕೋಡಿ.

 

Advertisement

Udayavani is now on Telegram. Click here to join our channel and stay updated with the latest news.

Next