ಹೊಸದಿಲ್ಲಿ : ರಮ್ಜಾನ್ ಸಲುವಾಗಿ ಲೋಕಸಭಾ ಚುನಾವಣೆ ವೇಳಾ ಪಟ್ಟಿಯಿಂದ ಪೂರ್ತಿ ತಿಂಗಳನ್ನು ಹೊರತುಪಡಿಸಲು ಸಾಧ್ಯವಿಲ್ಲ; ಹಾಗಿದ್ದರೂ ವೇಳಾ ಪಟ್ಟಿಯನ್ನು ಸಿದ್ಧಪಡಿಸುವಾಗ ಹಬ್ಬಗಳು ಮತ್ತು ಶುಕ್ರವಾರಗಳ ಬಗ್ಗೆ ಎಚ್ಚರವಹಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಈ ಮೊದಲು ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ನಾಯಕರು ಲೋಕಸಭಾ ಚುನಾವಣೆ ವೇಳಾ ಪಟ್ಟಿ ಮತ್ತು ರಮ್ಜಾನ್ ಪರಸ್ಪರ ತಾಕಲಾಡುವುದರಿಂದ ಮುಸ್ಲಿಮರು ಮತಗಟ್ಟೆಗಳಿಗೆ ಬರುವುದಕ್ಕೆ ಅಡ್ಡಿ-ಅಡಚಣೆ ಉಂಟಾಗುತ್ತದೆ ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದರು.
ರಮ್ಜಾನ್ ಸಂದರ್ಭದಲ್ಲೇ ಮತದಾನ ನಡೆಯುವುದರಿಂದ ಮುಸ್ಲಿಮರಿಗೆ ಅನನುಕೂಲವಾಗುತ್ತದೆ. ಮುಸ್ಲಿಮ್ ಸಮುದಾಯ ವಿರೋಧ ಪಕ್ಷಗಳನ್ನು ಹೆಚ್ಚಾಗಿ ಬೆಂಬಲಿಸುವುದರಿಂದ ಅವರು ಮತಗಟ್ಟೆಗಳಿಗೆ ಬಾರದೇ ಹೋದರೆ ವಿಪಕ್ಷಗಳಿಗೆ ನಷ್ಟವಾಗುತ್ತದೆ, ಆಳುವ ಬಿಜೆಪಿಗೆ ಅಲ್ಲ ಎಂಬ ಅಭಿಪ್ರಾಯವನ್ನು ಟಿಎಂಸಿ, ಆಪ್ ನಾಯಕರು ವ್ಯಕ್ತಪಡಿಸಿದ್ದರು.
ಇದಕ್ಕೆ ಉತ್ತರವಾಗಿ ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಅವರು ನವೃತದ ಸಂದರ್ಭದಲ್ಲಿ ಅನೇಕ ಹಿಂದುಗಳು ಉಪವಾಸ ಕೈಗೊಳ್ಳುತ್ತಾರೆ. ಹಿಂದುಗಳ ಈ ವೃತಾಚರಣೆ ಚುನಾವಣೆ ವೇಳಾ ಪಟ್ಟಿಯ ನಡುವೆಯೇ ಬರುತ್ತದೆ ಎಂದ ಮಾತ್ರಕ್ಕೆ ಅವರಿಗೆ ಮತದಾನಕ್ಕೆ ಅಡಚಣೆ ಉಂಟಾಗುತ್ತದೆ ಎಂದು ಹೇಳುವುದು ಸಮಂಜಸವೇ ಎಂದು ಪ್ರಶ್ನಿಸಿದರು.
ಚುನಾವಣಾ ವೇಳಾ ಪಟ್ಟಿಯಿಂದ ರಮ್ಜಾನ್ ಮಾಸವನ್ನು ಪೂರ್ತಿಯಾಗಿ ಹೊರತುಪಡಿಸಲಾಗದು ಎಂದು ಹೇಳುವ ಮೂಲಕ ಚುನಾವಣಾ ಆಯೋಗ ತನ್ನ ಖಚಿತ ನಿಲುವನ್ನು ಸ್ಪಷ್ಟಪಡಿಸಿರುವುದನ್ನು ವ್ಯಾಪಕವಾಗಿ ಸ್ವಾಗತಿಸಲಾಗಿದೆ ಎಂದು ವರದಿಗಳು ಹೇಳಿವೆ.